ಕರಾಚಿ(ಅ.25): ಇತ್ತೀಚೆಗೆ ಕರಾಚಿಯಲ್ಲಿ ನಡೆದ ಹೈಡ್ರಾಮಾದ ವೇಳೆ ಪಾಕಿಸ್ತಾನ ಮುಸ್ಲಿಂ ಲೀಗ್‌ (ನವಾಜ್‌) ಪಕ್ಷದ ಮುಖಂಡ ಸಫ್ದರ್‌ ಅವಾನ್‌ ಅವರನ್ನು ಪಾಕ್‌ ಸೇನೆ ಬಂಧಿಸಿ ಕರೆದೊಯ್ದ ಸಿಸಿ ಟೀವಿ ವಿಡಿಯೋವನ್ನು ಹೊಂದಿದ್ದ ಪತ್ರಕರ್ತರೊಬ್ಬರು ನಾಪತ್ತೆ ಆಗಿದ್ದು, ಅಪಹಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪಾಕಿಸ್ತಾನದ ಜಿಯೋ ನ್ಯೂಸ್‌ ಸುದ್ದಿವಾಹಿನಿ ವರದಿಗಾರ ಅಲಿ ಇಮ್ರಾನ್‌ ಸೈಯ್ಯದ್‌ ಎನ್ನುವವರು ಸಫ್ದರ್‌ ಬಂಧನದ ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದರು. ಅದನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದರು. ಶುಕ್ರವಾರ ಸಂಜೆ ಮನೆಯಿಂದ ತೆರಳಿದ್ದ ವೇಳೆ ಇಮ್ರಾನ್‌ ನಾಪತ್ತೆ ಆಗಿದ್ದಾರೆ.

ಇದರ ಹಿಂದೆ ಸರ್ಕಾರದ ಕೈವಾಡವಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಈ ನಡುವೆ ಅಲಿ ಇಮ್ರಾನ್‌ ಪತ್ತೆಗೆ ಸಾಧ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವಂತೆ ಸಿಂಧ್‌ ಸರ್ಕಾರ ಪೊಲೀಸರಿಗೆ ಸೂಚಿಸಿದೆ.