ಇಸ್ಲಾಮಾಬಾದ್(ಮಾ.21)‌: ಎರಡು ದಿನಗಳ ಹಿಂದಷ್ಟೇ ಚೀನಾದ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇಮ್ರಾನ್‌ ಖಾನ್‌ ಸಣ್ಣ ಪ್ರಮಾಣದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶುಕ್ರವಾರ ಖೈಬರ್‌ ಫಖ್ತೂಖ್ವಾಗೆ ಭೇಟಿ ನೀಡಿದ್ದ ಇಮ್ರಾನ್‌ ಖಾನ್‌, ವಿವಿಧ ಕಾಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅದರ ಬೆನ್ನಲ್ಲೇ ಅವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಗುರುವಾರವಷ್ಟೇ ಮೊದಲ ಹಂತದ ಲಸಿಕೆ ಅಭಿಯಾನದ ಭಾಗವಾಗಿ ಇಮ್ರಾನ್‌ ಖಾನ್‌ ಚೀನಾದ ಸಿನೋಫಾಮ್‌ರ್‍ ಕೊರೋನಾ ಲಸಿಕೆಯನ್ನು ಹಾಕಿಸಿಕೊಂಡಿದ್ದರು.

ಲಸಿಕೆಯ 2ನೇ ಡೋಸ್‌ ಪಡೆದ 2 ವಾರಗಳ ನಂತರ ದೇಹದಲ್ಲಿ ಪ್ರತಿಕಾಯ ಶಕ್ತಿಗಳು ಉತ್ಪತ್ತಿ ಆಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಹೀಗಿ ಲಸಿಕೆ ಪಡೆದ ಎರಡೇ ದಿವಸದಲ್ಲಿ ಇಮ್ರಾನ್‌ರಲ್ಲಿ ಕೊರೋನಾ ಪತ್ತೆ ಆಗಿರುವುದರಲ್ಲಿ ವಿಶೇಷವಿಲ್ಲ ಎಂದು ಹೇಳಲಾಗಿದೆ.

ಮೋದಿ ಹಾರೈಕೆ:

‘ಇಮ್ರಾನ್‌ ಅವರು ಕೊರೋನಾದಿಂದ ಬೇಗ ಗುಣಮುಖರಾಗಲಿ’ ಎಂದು ಭಾರತದ ಪ್ರಧಾಣಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಪಾಕ್‌ನಲ್ಲಿ ಆತಂಕ:

ಪಾಕಿಸ್ತಾನದಲ್ಲಿ ಶುಕ್ರವಾರ ಒಂದೇ ದಿನ 3,876 ಹೊಸ ಕೊರೋನಾ ಕೇಸುಗಳು ಪತ್ತೆ ಆಗಿವೆ. ಇದು ಕಳೆದ ವರ್ಷ ಜುಲೈ ಬಳಿಕದ ಸರ್ವಾಧಿಕ.