* ತಾಲಿಬಾನಿಗಳ ಜತೆ ಈಗಲೂ ಪಾಕಿಸ್ತಾನಕ್ಕೆ ನಂಟಿದೆ* ಭಾರತದ ಪ್ರಭಾವವನ್ನು ತಗ್ಗಿಸುವುದೇ ಪಾಕ್ ಆಫ್ಘನ್ ಅಜೆಂಡಾ: ಅಮೆರಿಕ* ಪಾಕ್‌ನಲ್ಲಿ ತಾಲಿಬಾನಿಗಳು ಹಣ ಸಂಗ್ರಹಿಸುತ್ತಿದ್ದಾರೆ* ಅಮೆರಿಕ ವಿದೇಶಾಂಗ ಕಚೇರಿ ವರದಿಯಲ್ಲಿದೆ ಮಾಹಿತಿ
ವಾಷಿಂಗ್ಟನ್(ಆ.22): ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿರುವುದರಿಂದ ನಮ್ಮ ದೇಶಗಳ ಮೇಲೆ ಏನು ಪರಿಣಾಮವಾಗಬಹುದು ಎಂದು ಹಲವು ದೇಶಗಳು ಆತಂಕಕ್ಕೆ ಒಳಗಾಗಿದ್ದರೆ, ಪಾಕಿಸ್ತಾನ ಮಾತ್ರ ಭಾರತದ ಪ್ರಭಾವ ತಗ್ಗಿಸುವುದನ್ನೇ ಉದ್ದೇಶ ಮಾಡಿಕೊಂಡಿದೆ ಎಂದು ಅಮೆರಿಕ ಹೇಳಿದೆ.
ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಎರಡು ವ್ಯೂಹಾತ್ಮಕ ಭದ್ರತಾ ಗುರಿಗಳಿವೆ. ಒಂದು, ನಿಶ್ಚಿತವಾಗಿಯೂ ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನ ಮುಂದುವರಿಸುವುದು. ಎರಡು, ಅಫ್ಘಾನಿಸ್ತಾನದ ನಾಗರಿಕ ಸಮರ ತನ್ನ ದೇಶದೊಳಗೆ ನುಸುಳದಂತೆ ನೋಡಿಕೊಳ್ಳುವುದು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಕಚೇರಿಯ ಮಹಾನಿರೀಕ್ಷಕರು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯಲ್ಲಿ ಮಾಹಿತಿ ಇದೆ.
ಏ.1ರಿಂದ ಜೂ.30ರವರೆಗಿನ ವರದಿ ಇದಾಗಿದೆ. ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ನಾಗರಿಕ ದಂಗೆ ಎದ್ದರೆ, ನಿರಾಶ್ರಿತರು ತನ್ನ ದೇಶಕ್ಕೆ ಬರುತ್ತಾರೆ. ತನ್ಮೂಲಕ ಪಾಕಿಸ್ತಾನ ವಿರೋಧಿ ಉಗ್ರರಿಗೆ ಆಶ್ರಯ ನೀಡಿದಂತಾಗುತ್ತದೆ ಎಂಬ ಭಾವನೆಯನ್ನು ಪಾಕಿಸ್ತಾನ ಹೊಂದಿದೆ. ಪಾಕಿಸ್ತಾನ ಒಂದೆಡೆ ಶಾಂತಿ ಮಾತುಕತೆಯಲ್ಲಿ ನಿರತವಾಗಿದ್ದರೆ, ಮತ್ತೊಂದೆಡೆ ಆಫ್ಘನ್ ತಾಲಿಬಾನ್‌ಗಳ ಜತೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಏ.1ರಿಂದ ಜೂ.30ರ ಅವಧಿಯಲ್ಲಿ ಪಾಕಿಸ್ತಾನ ಗಡಿಯಲ್ಲಿರುವ ಪ್ರದೇಶಗಳಲ್ಲಿ ಆಫ್ಘನ್ ತಾಲಿಬಾನಿಗಳಿಗೆ ಹಣದ ಕೊಡುಗೆ ಸಿಗುವುದು ಹೆಚ್ಚಾಗಿದೆ. ಹಿಂದೆಲ್ಲಾ ಮಸೀದಿಗಳಲ್ಲಿ ಮನವಿ ಮಾಡಿ ಉಗ್ರರು ಹಣ ಸಂಗ್ರಹಿಸುತ್ತಿದ್ದರು. ಈಗ ಪಾಕಿಸ್ತಾನದ ಪಟ್ಟಣಗಳಲ್ಲಿರುವ ಮಾರುಕಟ್ಟೆಪ್ರದೇಶಕ್ಕೆ ಹೋಗಿ ಹಣ ಸಂಗ್ರಹಿಸುತ್ತಿದ್ದಾರೆ. ಅಂಗಡಿ ಮಾಲೀಕರಿಂದ 3000 ರು. ಅಥವಾ ಅದಕ್ಕಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ. ಕ್ವೆಟ್ಟಾ, ಕುಚ್ಲಕ್ ಬೈಪಾಸ್, ಪಶ್ತೂನ್ ಅಬಾದ್, ಇಶಾಕ್ ಅಬಾದ್ ಹಾಗೂ ಫಾರೂಖಿಯಾದಲ್ಲಿ ಈ ಬೆಳವಣಿಗೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
