ಕೆಲವೇ ತಿಂಗಳ ಹಿಂದೆ ರಾಜಸ್ಥಾನ, ಗುಜರಾತಿನ ಬೆಳೆಗಳ ಮೇಲೆ ದಾಳಿ ಮಾಡಿದ್ದ ಮಿಡತೆಗಳು, ಇದೀಗ ಪಾಕಿಸ್ತಾನ ಮತ್ತು ಸೊಮಾಲಿಯಾ ರೈತರಲ್ಲಿ ದಿಗುಲು ಹುಟ್ಟಿಸುತ್ತಿವೆ. ಮಿಡತೆಗಳ ಉಪಟಳದಿಂದ ಪಾಕಿಸ್ತಾನ ಮತ್ತು ಸೊಮಾಲಿಯಾ ರೋಸಿ ಹೋಗಿದ್ದು, ಕಳೆದ ಕೆಲವು ದಶಕದಲ್ಲೇ ಅತಿ ಹೆಚ್ಚು ಬಾಧೆಗೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ಮಿಡತೆಗಳ ಉಪಟಳ ಮಟ್ಟಹಾಕಲು ಎರಡೂ ದೇಶಗಳೂ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿವೆ.

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮಿಡತೆಗಳ ಬಾಧೆ ನಿವಾರಣೆಗೆ 730 ಕೋಟಿ ರು. (ಪಾಕಿಸ್ತಾನ ರುಪಾಯಿ)ನ ರಾಷ್ಟ್ರೀಯ ಕ್ರಿಯಾ ಯೋಜನೆಯೊಂದಕ್ಕೆ ಅನುಮೋದನೆ ನೀಡಿದ್ದಾರೆ. ಅಷ್ಟಕ್ಕೂ ಗ್ರಾಂಗಳ ಲೆಕ್ಕದಲ್ಲಿ ತೂಗುವ ಪುಟ್ಟಗಾತ್ರದ ಈ ಕೀಟಗಳಿಗೇಕೆ ಸರ್ಕಾರ ಮತ್ತು ರೈತರು ಹೆದರುತ್ತಾರೆ ಎಂಬ ಕುತೂಹಲಕಾರಿ ಸಂಗತಿ ಇಲ್ಲಿದೆ.

ಮಿಡತೆಗಳ ದಾಳಿಗೆ ಹೈರಾಣ: ನ್ಯಾಶನಲ್ ಎಮರ್ಜೆನ್ಸಿ ಘೋಷಿಸಿದ ಪಾಕಿಸ್ತಾನ!

2 ಗ್ರಾಂ ತೂಗುವ ಈ ಕೀಟಗಳು 35 ಸಾವಿರ ಜನರ ಆಹಾರ ತಿನ್ನುತ್ತವೆ!

ಮಿಡತೆಗಳಲ್ಲಿ ಸಣ್ಣ ಮತ್ತು ದೊಡ್ಡ ಜಾತಿಗಳಿದ್ದು, ಇಂತಹ ಕೀಟಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ತೆಳುವಾದ ಉದ್ದ ಕಾಲುಗಳನ್ನು ಹೊಂದಿರುವ ಮಿಡತೆಗಳು ಸುಲಭವಾಗಿ ಹಾರಬಲ್ಲವು. ಇವು ಒಂಟಿಯಾಗಿರುವುದೇ ಹೆಚ್ಚು. ಆದರೆ ಕೆಲವೊಂದು ಸಂದರ್ಭದಲ್ಲಿ ಏಕಕಾಲಕ್ಕೆ ಗುಂಪು, ಗುಂಪಾಗಿ ದಾಳಿ ಮಾಡುತ್ತವೆ. ಕೆಲವೊಮ್ಮೆ ಲಕ್ಷಾಂತರ ಸಂಖ್ಯೆಯ ಮಿಡತೆಗಳು ಬೆಳೆಗಳ ಮೇಲೆ ದಾಳಿ ನಡೆಸುತ್ತವೆ. ದೊಡ್ಡ ಮಿಡತೆಯೊಂದು ಅಂದಾಜು ತನ್ನ ತೂಕದಷ್ಟೇ ದಿನಂಪ್ರತಿ ಆಹಾರ(ಬೆಳೆ)ವನ್ನು ತಿನ್ನುತ್ತದೆ.

ಅಂದರೆ ಒಂದು ದಿನಕ್ಕೆ 2 ಗ್ರಾಂನಷ್ಟುಬೆಳೆ ತಿನ್ನುತ್ತದೆ. ಹೀಗೆ ಒಂದು ಚದರ ಪ್ರದೇಶದಲ್ಲಿ ಅಂದಾಜು 4 ಕೋಟಿ ಮಿಡತೆಗಳು ಆವರಿಸಿರುತ್ತವೆ. ಇವೆಲ್ಲ ಒಂದು ದಿನಕ್ಕೆ ತಿನ್ನುವ ಬೆಳೆಗಳು 35 ಸಾವಿರ ಜನರ ಅಥವಾ 10 ಆನೆಗಳು ಅಥವಾ 25 ಒಂಟೆಗಳು ತಿನ್ನುವ ಆಹಾರಕ್ಕೆ ಸಮವಾಗಿರಲಿದೆ. ಭಾರೀ ಪ್ರಮಾಣದಲ್ಲಿ ಮಿಡತೆಗಳು ಬೆಳೆಗಳ ಮೇಲೆ ದಾಳಿ ಮಾಡುವುದರಿಂದ ವರ್ಷವಿಡೀ ಶ್ರಮ ಹಾಕಿ ಬೆಳೆದ ಬೆಳೆಗಳು ಕ್ಷಣಾರ್ಧದಲ್ಲಿ ಮಿಡಿತೆ ಹೊಟ್ಟೆಸೇರಿರುತ್ತದೆ. ಈ ಮಿಡತೆಗಳು ಎಲೆ, ಹೂವು, ಹಣ್ಣುಗಳು, ಬೀಜ, ಗೋಧಿ, ಗಿಡದ ಕಾಂಡ, ಕೊಂಬೆಗಳನ್ನು ತಿನ್ನುತ್ತವೆ.

ಆಫ್ರಿಕಾ ಮೂಲದ ಈ ಮಿಡತೆಗಳು ದಿನಕ್ಕೆ 150 ಕಿ.ಮೀ ಹಾರುತ್ತವೆ

ಈ ಮಿಡತೆಗಳ ಮೂಲ ಆಫ್ರಿಕಾ ಮತ್ತು ಅರೆಬಿಯನ್‌ ಪೆನ್ಸಿಲ್‌ವೇನಿಯಾವಾಗಿದ್ದು, ಮಳೆಗಾಲದ ನಂತರ ಮಿಡತೆಗಳು ಮಧ್ಯ ಏಷ್ಯಾಗಳ ಮೂಲಕ ಪಾಕಿಸ್ತಾನಕ್ಕೆ ಬರುತ್ತವೆ. ಪಾಕಿಸ್ತಾನ ಮುಖಾಂತರವಾಗಿ ಭಾರತಕ್ಕೂ ಲಗ್ಗೆ ಇಡುತ್ತವೆ. ಹಾಗಾಗಿ ಪಾಕಿಸ್ತಾನ ಮಾತ್ರವಲ್ಲದೆ ಪಂಜಾಬ್‌, ರಾಜಸ್ತಾನ, ಗುಜರಾತ್‌, ಹರಾರ‍ಯಣ ರೈತರಿಗೂ ಮಿಡತೆ ದಾಳಿ ದೊಡ್ಡ ಸಮಸ್ಯೆ. ಒಂದು ದಿನಕ್ಕೆ ಮಿಡತೆ ಸರಾಸರಿ 150 ಕಿ.ಲೋ ಮೀಟರ್‌, ಗಂಟೆಗೆ ಸುಮಾರು 15 ಕಿ.ಮೀ ದೂರದವರೆಗೆ ಗಾಳಿಯಲ್ಲಿ ಹಾರಾಡುತ್ತ ಸಾಗಬಲ್ಲದು.

ಬೆಳೆ ಹಾನಿಗೆ ಪರಿಹಾರ ಕೇಳಲು ವಿಧಾನಸಭೆಗೆ ಮಿಡತೆ ತಂದ ಶಾಸಕ!

ಮಿಡತೆಗಳು ಹೆಚ್ಚಾಗಿ ದಾಳಿ ಮಾಡುವುದು ಎಲ್ಲಿ?

ಅಮೆರಿಕದ ಆಹಾರ ಮತ್ತು ಕೃಷಿ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ, ಮಿಡತೆಗಳು ಅತಿ ಹೆಚ್ಚು ಸಕ್ರಿಯವಾಗಿ ದಾಳಿ ನಡೆಸುತ್ತಿರುವುದು ಆಫ್ರಿಕಾ, ಕೆಂಪು ಸಮುದ್ರ ಪ್ರದೇಶ ಮತ್ತು ನೈಋುತ್ಯ ಏಷ್ಯಾದಲ್ಲಿ. ಇಥಿಯೋಪಿಯಾ ಮತ್ತು ಸೊಮಾಲಿಯಾ ಮೂಲದ ಮಿಡತೆಗಳು ದಕ್ಷಿಣದಿಂದ ಕೀನ್ಯಾದ ವರೆಗೆ ಮತ್ತು ಖಂಡದ 14 ದೇಶಗಳಿಗೆ ಸಂಚರಿಸುತ್ತವೆ. ನೈಋುತ್ಯ ಏಷ್ಯಾ ಮಿಡತೆಗಳು ಭಾರತ ಮತ್ತು ಪಾಕಿಸ್ತಾನದ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಭಾರತದಲ್ಲಿ ಮರುಭೂಮಿ ಪ್ರದೇಶವಾದ ರಾಜಸ್ಥಾನ, ಗುಜರಾತ್‌ ಮತ್ತು ಹರಾರ‍ಯಣದಲ್ಲಿ ಇವು ದಾಳಿ ಮಾಡುವ ಸಾಧ್ಯತೆ ಹೆಚ್ಚು.

ಸಾಮಾನ್ಯವಾಗಿ ವರ್ಷದ ಎಲ್ಲಾ ಕಾಲದಲ್ಲಿಯೂ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಮರುಭೂಮಿ ಮಿಡತೆಗಳು ಮೇ ನಿಂದ ನವೆಂಬರ್‌ ವರೆಗೆ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಹಾಗೆಯೇ ಮುಂಜಾನೆ ಮತ್ತು ರಾತ್ರಿ ಹೊತ್ತು ಸಕ್ರಿಯವಾಗಿರುತ್ತವೆ. ಭಾರತದಲ್ಲಿ 4 ರೀತಿಯ ಮಿಡತೆಗಳು ಪತ್ತೆಯಾಗಿವೆ. ಮರುಭೂಮಿ ಮಿಡತೆಗಳು, ವಲಸೆ ಬಂದ ಮಿಡತೆಗಳು, ಬಾಂಬೆ ಮಿಡತೆಗಳು ಮತ್ತು ಮರ ಮಿಡತೆಗಳು. ಇವುಗಳಲ್ಲಿ ಮರುಭೂಮಿ ಮಿಡತೆಗಳು ಅತಿ ವಿನಾಶಕಾರಿ ಮಿಡತೆಗಳೆಂದು ಪರಿಗಣಿತವಾಗಿವೆ.

60 ದೇಶಗಳ 20% ಬೆಳೆ ಗುಳುಂ ಮಾಡುತ್ತವೆ

ಮಿಡತೆಗಳು ಪ್ರತಿ ವರ್ಷ ಸುಮಾರು 60 ದೇಶಗಳ ಭೂಮಿಯ ಮೇಲೆ ಬೆಳೆಯುವ 20% ಬೆಳೆಗಳನ್ನು ತಿಂದುಹಾಕುತ್ತಿವೆ. ಮಿಡತೆಗಳು ಮತ್ತು ಇವುಗಳ ದಾಳಿ ಬಗ್ಗೆ ಬೈಬಲ್‌, ಖುರಾನ್‌ನಲ್ಲಿಯೂ ಉಲ್ಲೇಖವಿದೆ. ಈಗಾಗಲೇ ಹೇಳಿದಂತೆ ಮಿಡತೆಗಳ ಒಂದು ಸಮೂಹವು ಸುಮಾರು 4-8 ಕೋಟಿ ಕೀಟಗಳನ್ನು ಒಳಗೊಂಡಿರುತ್ತದೆ. ಒಂದು ಮಿಡತೆಯ ಅಂದಾಜು ತೂಕ 2 ಗ್ರಾಂ.

ಪಾಕಿಸ್ತಾನದ ಆರ್ಥಿಕತೆಯನ್ನೇ ಅಲ್ಲಾಡಿಸುತ್ತಾ ಈ ಮಿಡತೆ?

ಗ್ರಾಂ ಗಾತ್ರದ ಮಿಡತೆಗಳ ದಾಳಿಗೆ ಬೆಚ್ಚಿರುವ ಪಾಕಿಸ್ತಾನ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನೇ ಘೋಷಿಸಿದೆ. ಮಿಡತೆಗಳ ದಾಳಿಯಿಂದಾಗಿ ರೈತರು ಅದರಲ್ಲೂ ಹತ್ತಿ ಬೆಳೆಗಾರರು ರಾತ್ರಿ ಇಡೀ ನಿದ್ದೆ ಇಲ್ಲದೆ ಬೆಳೆ ರಕ್ಷಣೆಗೆ ಟೊಂಕ ಕಟ್ಟಿನಿಂತಿದ್ದಾರೆ. ಸರ್ಕಾರ ಕೂಡ ಶತಪ್ರಯತ್ನ ಮಾಡುತ್ತಿದೆ. ಈ ಮಿಡತೆ ದಾಳಿಯಿಂದ ರೈತರಿಗೆ ಮಾತ್ರ ನಷ್ಟವಲ್ಲ. ಇದು ಇಡೀ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಇಡೀ ಪಾಕಿಸ್ತಾನದ ಜವಳಿ ಉದ್ಯಮ ಹತ್ತಿ ಉತ್ಪಾದನೆ ಮೇಲೆ ಅವಲಂಬಿತವಾಗಿದೆ.

ಸಾವಿರಾರು ಜನರಿಗೆ ಇದು ಉದ್ಯೋಗ ನೀಡುತ್ತಿದೆ. ಈಗಾಗಲೇ ದೇಶದಲ್ಲಿ ಆರ್ಥಿಕ ಹಿಂಜರಿತ ಇರುವುದರಿಂದ ಹತ್ತಿ ಉದ್ಯಮದಲ್ಲಾಗುವ ನಷ್ಟವನ್ನು ನಿಭಾಯಿಸುವ ಶಕ್ತಿ ಪಾಕಿಸ್ತಾನಕ್ಕೆ ಇಲ್ಲ. ಅಂಕಿಅಂಶಗಳ ಪ್ರಕಾರ ಈಗಾಗಲೇ ಹತ್ತಿ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವುದರಿಂದ ದೇಶದ ಜವಳಿ ಉದ್ಯಮ ಈ ವರ್ಷ 18% ನಷ್ಟಅನುಭವಿಸಿದೆ.

ಮಿಡತೆಗಳಿಂದ ಯಾವಾಗ ಎಷ್ಟೆಷ್ಟು ನಷ್ಟವಾಗಿತ್ತು?

ಮಿಡತೆಗಳ ದಾಳಿ ಭಾರತಕ್ಕೆ ಹೊಸತೇನಲ್ಲ. ಭಾರತದಲ್ಲಿ 1926-31ರ ಅವಧಿಯಲ್ಲಿ ಮಿಡತೆಗಳಿಂದಾಗಿ 10 ಕೋಟಿ ರು. ಬೆಳೆ ನಾಶವಾಗಿತ್ತು. 1940-46 ಮತ್ತು 1949-55ರ ಅವಧಿಯಲ್ಲಿ ಅಂದಾಜು 2 ಕೋಟಿ ರು. ಬೆಳೆ ನಷ್ಟವಾಗಿತ್ತು. 1959-62ರ ಅವಧಿಯಲ್ಲಿ ಸುಮಾರು 50 ಲಕ್ಷ ರು. ನಷ್ಟವುಂಟಾಗಿತ್ತು. ಅದಲ್ಲದೆ 1962, 1978 ಮತ್ತು 1993ರಲ್ಲಿಯೂ ಮಿಡತೆಗಳು ಭಾರತದಲ್ಲಿ ದಾಳಿ ಮಾಡಿದ್ದವು. ಆಗಿನ ಕಾಲದಲ್ಲಿ ಇದು ಅತಿ ದೊಡ್ಡ ಮೊತ್ತ. ಅನಂತರವೂ ವರ್ಷಕ್ಕೊಮ್ಮೆಯಾದರೂ ಅಗಾಧ ಪ್ರಮಾಣದಲ್ಲಿ ಅಥವಾ ಸೀಮಿತ ಪ್ರಮಾಣದಲ್ಲಿ ದಾಳಿ ಮಾಡುತ್ತಲೇ ಇವೆ.

1993ರಲ್ಲಿ ರಾಜಸ್ಥಾನದಲ್ಲಿ ಮಿಡತೆಗಳ ದಾಳಿಯಿಂದ 3.1 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿತ್ತು. 2019ರಲ್ಲಿ ರಾಜಸ್ಥಾನ 3.5 ಲಕ್ಷ ಹೆಕ್ಟೇರ್‌, ಗುಜರಾತಿನಲ್ಲಿ 17,000 ಹೆಕ್ಟೇರ್‌ ಬೆಳೆ ನಾಶವಾಗಿದೆ. ಆದಾಗ್ಯೂ ಭಾರತದಲ್ಲಿ ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಇಲ್ಲ. ಪ್ರತಿ ವರ್ಷ ಭಾರತ ಮತ್ತು ಪಾಕಿಸ್ತಾನ ಮಿಡತೆ ನಿಯಂತ್ರಣ ಇಲಾಖೆ ಕೂತು ಸಮಾಲೋಚಿಸುತ್ತವೆ. ಆದರೂ ಮಿಡತೆ ದಾಳಿ ನಿಯಂತ್ರಣಕ್ಕೆ ಇನ್ನೂ ಸೂಕ್ತ ಕ್ರಮ ಜಾರಿಯಾಗಿಲ್ಲ. ಪ್ರತಿ ಬಾರಿ ಭಾರತದಲ್ಲಿ ದಾಳಿಯಾದ ಸಂದರ್ಭದಲ್ಲಿ ಭಾರತ ಪಾಕಿಸ್ತಾನವನ್ನು ದೂರುತ್ತದೆ.

ದಾಳಿ ತಡೆಯುವುದು ಹೇಗೆ?

ಲಕ್ಷಾಂತರ ಸಂಖ್ಯೆಯಲ್ಲಿ ಮಿಡತೆಗಳು ದಾಳಿ ಮಾಡಿದಾಗ ಬೇರೆ ವಿಧಿಯೇ ಇಲ್ಲದೆ ಕೀಟನಾಶದ ಬಳಕೆ ಮಾಡಬೇಕಾಗುತ್ತದೆ. ಭೂಮಿ ಅಥವಾ ಕಾಪ್ಟರ್‌ಗಳ ಮೂಲಕ ಆಕಾಶದಿಂದ ಸಿಂಪಡಿಸಿ ರೈತರು ಬೆಳೆ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಜೊತೆಗೆ ಹೊಲಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚುವುದು, ಡ್ರಮ್‌ ಹಾಗೂ ಪಾತ್ರೆಗಳನ್ನು ಬಡಿಯುವುದು, ವಾಹನಗಳ ಹಾರ್ನ್‌ ಬಾರಿಸಿ ಹಾಗೂ ಟೇಬಲ್‌ ಫ್ಯಾನ್‌ಗಳನ್ನು ಹಚ್ಚಿ ಕೀಟಗಳನ್ನು ಓಡಿಸಲು ಪ್ರಯತ್ನಿಸುತ್ತಾರೆ. ಇದಕ್ಕಾಗಿಯೇ 1939ರಲ್ಲಿಯೇ ಭಾರತದಲ್ಲಿ ಮಿಡತೆ ನಿಯಂತ್ರಣ ಸಂಸ್ಥೆ ಸ್ಥಾಪಿಸಲಾಗಿದೆ.

ಎಷ್ಟು ಸಮಯ ಬದುಕುತ್ತವೆ?

ಮೊಟ್ಟೆಯ ಮೂಲ ಇವುಗಳ ಸಂತಾನೋತ್ಪತ್ತಿ ಮುಂದುವರೆಯುತ್ತದೆ. ಒಂದು ಮಿಡತೆ ಒಮ್ಮೆಗೆ ಸುಮಾರು 150 ಮೊಟ್ಟೆಇಡುತ್ತದೆ. ಮೊಟ್ಟೆಯಿಂದ ಹೊರಬರಲು 2 ವಾರಗಳು ಬೇಕಾಗುತ್ತದೆ. ಸಣ್ಣ ಮಿಡತೆಗಳು ರೆಕ್ಕೆ ಹೊಂದಿರುವುದಿಲ್ಲ. 30-40ದಿನಗಳ ಒಳಗಾಗಿ ಅವು ಪೂರ್ಣ ಬೆಳವಣಿಗೆ ಹೊಂದುತ್ತವೆ. ಹೀಗೆ ಉತ್ಪತ್ತಿಯಾದ ಮಿಡತೆಗಳು ಮತ್ತೆ ಸಂತಾನೋತ್ಪತ್ತಿ ನಡೆಸಲು 3 ವಾರ ತೆಗೆದುಕೊಳ್ಳುತ್ತವೆ. ಮಿಡತೆಗಳು 3-5 ತಿಂಗಳೂ ಜೀವಿಸುತ್ತವೆ.

ಈ ವರ್ಷ ಭಾರತದಲ್ಲಿ ದಾಳಿ ಮಾಡೋ ಸಾಧ್ಯತೆ ಕಡಿಮೆ

ಅಮೆರಿಕದ ಆಹಾರ ಮತ್ತು ಕೃಷಿ ಇಲಾಖೆಯ ಅಧ್ಯಯನ ಪ್ರಕಾರ ಪೂರ್ವ ಇಥಿಯೋಪಿಯಾ ಮತ್ತು ಅದಕ್ಕೆ ಹೊಂದಿಕೊಂಡಿರುವ ಸೊಮಾಲಿಯಾಗಳಲ್ಲಿ ಮಿಡತೆಗಳು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿವೆ. ಆಫ್ರಿಕನ್‌ ಪ್ರದೇಶದಲ್ಲಿ 2019ರಲ್ಲಿ ಸರಿಯಾದ ಮಳೆಯಾಗದ ಕಾರಣ ಈ ಭಾಗದಲ್ಲಿ ಇವು ಹೆಚ್ಚು ದಾಳಿ ಮಾಡುವ ಸಾಧ್ಯತೆ ಇದೆ. ಹಾಗೆಯೇ ಕೆಂಪು ಸಮುದ್ರದ ಭಾಗದಲ್ಲಿ ಇವು ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿವೆ.

ಇದರಿಂದ ಯೆಮನ್‌, ಸೌದಿ ಅರೇಬಿಯಾ, ಈಜಿಪ್ಟ್‌ಗೆ ಅಪಾಯ ಹೆಚ್ಚು. ಪ್ರಸಕ್ತ ವರ್ಷ ಭಾರತ ಮತ್ತು ಪಾಕಿಸ್ತಾನದಲ್ಲಿ ಮಿಡತೆ ದಾಳಿ ಪ್ರಮಾಣ ಕಡಿಮೆಯಾಗಬಹುದು ಎಂದು ಇದು ಸಂಶೋಧನೆಯಲ್ಲಿ ಹೇಳಿದೆ. ಆದರೆ 2019ರಲ್ಲಿ ಮಾತ್ರವೇ ಭಾರತ ಮತ್ತು ಪಾಕಿಸ್ತಾನದಲ್ಲಿ 5 ಬಾರಿ ಮಿಡತೆಗಳ ದಾಳಿಯಾಗಿದೆ. ವರದಿಯೊಂದರ ಪ್ರಕಾರ ಕಳೆದ ವರ್ಷ ಮಾರ್ಚ್‌ನಿಂದ ಇಲ್ಲಿಯವರೆಗೆ ಮರುಭೂಮಿ ಮಿಡತೆಗಳು ಪಾಕಿಸ್ತಾನ, ದಕ್ಷಿಣ ಪಂಜಾಬ್‌ನ 9,00,000 ಹೆಕ್ಟೇರ್‌ ಪ್ರದೇಶದ ಬೆಳೆಯನ್ನು ನಾಶಪಡಿಸಿವೆ.