Asianet Suvarna News Asianet Suvarna News

ನಾನು ಲಷ್ಕರ್‌ ಉಗ್ರ, ಪಾಕಿಸ್ತಾನ ಸೇನೆಯೇ ನನಗೆ ತರಬೇತಿ ನೀಡಿದೆ!

* ಮತ್ತೆ ಪಾಕ್‌ ಬಣ್ಣ ಬಯಲು

* ನಾನು ಲಷ್ಕರ್‌ ಉಗ್ರ, ಪಾಕಿಸ್ತಾನ ಸೇನೆಯೇ ನನಗೆ ತರಬೇತಿ ನೀಡಿದೆ!

* ಭಾರತೀಯ ಸೇನೆಗೆ ಸಿಕ್ಕಿಬಿದ್ದ ಉಗ್ರನ ಹೇಳಿಕೆ

 

Pakistan Army ISI Trained Me Captured Lashkar Terrorist Confesses On Camera pod
Author
Bangalore, First Published Sep 30, 2021, 8:37 AM IST
  • Facebook
  • Twitter
  • Whatsapp

ಶ್ರೀನಗರ(ಸೆ.30): ಭಾರತದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯಗಳಲ್ಲಿನ ಪಾಕಿಸ್ತಾನ ಸರ್ಕಾರ, ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐನ(ISI) ಕೈವಾಡ ಇಡೀ ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣವಾಗಿದೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ/(Jammu Kashmir) ಉರಿ(Uri) ವಲಯದಲ್ಲಿ ಭಾರತೀಯ ಸೇನೆ ಕೈಗೆ ಸಿಕ್ಕಿಬಿದ್ದ ಪಾಕಿಸ್ತಾನದ(Pakistan) ಮೂಲದ ಉಗ್ರ ಅಲಿ ಬಾಬರ್‌ ಪತ್ರ (19) ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದ್ದಾನೆ.

ಪಾಕ್‌ ಸರ್ಕಾರ, ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ಹೇಗೆ ಅಬಲರು, ಅಸಹಾಯಕರನ್ನು ದಿಕ್ಕು ತಪ್ಪಿಸಿ ಉಗ್ರರನ್ನಾಗಿ ಪರಿವರ್ತಿಸಿ ಭಾರತದ ಮೇಲೆ ದಾಳಿಗೆ ಪ್ರಚೋದಿಸುತ್ತಿವೆ ಎಂಬುದನ್ನು ಅಲಿ ಬಾಬರ್‌ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜೊತೆಗೆ ಪಾಕ್‌ ಸೇನೆಯ ಸಹಾಯವಿಲ್ಲದೇ ಯಾವುದೇ ವ್ಯಕ್ತಿ ಕೂಡಾ ಪಾಕ್‌ ಗಡಿ ದಾಟಿ ಭಾರತಕ್ಕೆ ಪ್ರವೇಶಿಸುವುದು ಸಾಧ್ಯವಿಲ್ಲ ಎಂದು ಖಚಿತಪಡಿಸುವ ಮೂಲಕ ಉಗ್ರ ಚಟುವಟಿಕೆಯಲ್ಲಿ ಅಲ್ಲಿನ ಸೇನೆಯ ಪಾತ್ರವನ್ನು ಸಾಬೀತುಪಡಿಸಿದ್ದಾನೆ.

ಉರಿ ವಲಯದ ಮೂಲಕ 6 ಪಾಕ್‌ ಉಗ್ರರು ಭಾರತಕ್ಕೆ ಪ್ರವೇಶಕ್ಕೆ ಸಜ್ಜಾಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ 10 ದಿನಗಳ ಹಿಂದೆ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿತ್ತು. ಈ 6 ಉಗ್ರರು ಸೆ.18ರಂದೇ ಭಾರತದ ಗಡಿಯೊಳಗೆ ನುಸುಳಿದ್ದರಾದರೂ, ನಂತರ ಭಾರತೀಯ ಸೇನೆಗೆ ಮುಖಾಮುಖಿಯಾಗಿ ಸಿಕ್ಕಿಬಿದ್ದಿದ್ದರು. ಈ ವೇಳೆ ಎರಡೂ ಗುಂಪುಗಳ ನಡುವೆ ನಿರಂತರ ಗುಂಡಿನ ಚಕಮಕಿ ನಡೆದಿತ್ತು. ಆಗ ನಾಲ್ವರು ಮರಳಿ ಪಾಕ್‌ ಕಡೆಗೆ ಪರಾರಿಯಾಗಿದ್ದರು. ನಂತರ ಮಂಗಳವಾರ ನಡೆದ ಕಾರ್ಯಾಚರಣೆ ವೇಳೆ ಒಬ್ಬ ಉಗ್ರ ಸಾವನ್ನಪ್ಪಿದ್ದರೆ, ಅಲಿ ಬಾಬರ್‌ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆಗೆ ಒಳಪಡಿಸಿದ್ದ ಸೇನೆ, ಆತನ ವಿಡಿಯೋ ಹೇಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದೆ.

ಬಾಬರ್‌ ಹೇಳಿದ್ದೇನು?:

‘ನಮ್ಮದು ಬಡ ಕುಟುಂಬ. ತಂದೆ ಸಾವನ್ನಪ್ಪಿದ ಬಳಿಕ ವಿದ್ಯಾಭ್ಯಾಸ ಬಿಟ್ಟು ಸಿಯಾಲ್‌ಕೋಟ್‌ನ ಗಾರ್ಮೆಂಟ್‌ನಲ್ಲಿ ಕೆಲಸಕ್ಕೆ ಸೇರಿದ್ದೆ. ಅಲ್ಲಿ ನನಗೆ, ಲಷ್ಕರ್‌ ಎ ತೊಯ್ಬಾ ಸಂಘಟನೆಗೆ ಯುವಕರ ನೇಮಿಸುವ ಅನಾಸ್‌ನ ಪರಿಚಯ ಆಗಿತ್ತು. ಆತ ನನ್ನ ತಾಯಿಯ ಚಿಕಿತ್ಸೆಗೆ ನೆರವಾಗುವುದಾಗಿ ಹೇಳಿ ನನ್ನನ್ನು ಉಗ್ರ ಕೃತ್ಯಕ್ಕೆ ಪುಸಲಾಯಿಸಿದ್ದ. ಈ ಒಪ್ಪಂದದ ಅನ್ವಯ, ಮೊದಲಿಗೆ ನನ್ನ ಕುಟುಂಬಕ್ಕೆ 20000 ರು. ನೀಡಲಾಗಿತ್ತು. ನಾನು ಕಾಶ್ಮೀರಕ್ಕೆ ತೆರಳಿ ಶಸ್ತ್ರಾಸ್ತ್ರ ಪೂರೈಸಿ ತವರಿಗೆ ಮರಳಿದ ಬಳಿಕ ಮತ್ತೆ 30000 ರು. ನೀಡುವ ಮಾತುಕತೆ ನಡೆದಿತ್ತು. ಹೀಗೆ 2019ರಲ್ಲಿ ಲಷ್ಕರ್‌ ಸೇರಿದ ನನಗೆ ಗರ್ಹಿ ಹಬೀಬುಲ್ಲಾ ಕ್ಯಾಂಪ್‌ನಲ್ಲಿ ತರಬೇತಿ ನೀಡಲಾಯ್ತು. ನಂತರ ನನ್ನನ್ನು ಐಎಸ್‌ಐ ವಶಕ್ಕೆ ಒಪ್ಪಿಸಲಾಯ್ತು. ಅಲ್ಲೂ ನನಗೆ ಸೇನೆಯ ಮೂಲಕ ದೈಹಿಕ ಮತ್ತು ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ನೀಡಲಾಯ್ತು.

ಸೇನೆ ಬಗ್ಗೆ ಸುಳ್ಳು ಮಾಹಿತಿ:

ಲಷ್ಕರ್‌ ಮತ್ತು ಸೇನೆಯ ತರಬೇತಿ ವೇಳೆ ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ನಮಗೆ ಸುಳ್ಳು ಮಾಹಿತಿ ನೀಡಲಾಗಿತ್ತು. ಜಮ್ಮು-ಕಾಶ್ಮೀರದ ಗಡಿಯಲ್ಲಿ ಭಾರತೀಯ ಸೇನೆ ರಕ್ತಪಾತ ನಡೆಸುತ್ತಿದೆ ಎಂದು ನನ್ನನ್ನು ನಂಬಿಸಲಾಗಿತ್ತು. ಆದರೆ ಇಲ್ಲಿ ಪರಿಸ್ಥಿತಿ ತುಂಬಾ ಶಾಂತವಾಗಿದೆ. ಭಾರತೀಯ ಸೇನಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳೀಯರ ಜತೆ ಉತ್ತಮವಾಗಿ ನಡೆದುಕೊಳ್ಳುತ್ತಾರೆ. ದಿನಕ್ಕೆ 5 ಬಾರಿ ಮಸೀದಿಯ ಪ್ರಾರ್ಥನೆ ಸದ್ದು ಕೇಳುತ್ತದೆ. ಹೀಗಾಗಿ ಕಾಶ್ಮೀರ ಶಾಂತವಾಗಿದೆ. ಅಲ್ಲದೆ ನಾನು ಸಹ ಸೇನೆಯ ವಶದಲ್ಲಿ ಸುಖವಾಗಿದ್ದೇನೆ ಎಂದು ನನ್ನ ತಾಯಿಗೆ ತಿಳಿಸಲಿಚ್ಛಿಸುತ್ತೇನೆ. ವಾಸ್ತವಕ್ಕೆ ವಿರುದ್ಧವಾಗಿ, ನಮ್ಮ ಅಸಹಾಯಕ ಸ್ಥಿತಿಯನ್ನೇ ಪಾಕಿಸ್ತಾನ ಸೇನೆ ತನ್ನ ಲಾಭಕ್ಕೆ ಬಳಸಿಕೊಂಡು ನಮ್ಮಂಥವರನ್ನು ಕಾಶ್ಮೀರಕ್ಕೆ ಉಗ್ರರನ್ನಾಗಿ ಕಳುಹಿಸುತ್ತಿದೆ’ ಎಂದು ಬಾಬರ್‌ ಹೇಳಿದ್ದಾನೆ.

‘ಪಾಕಿಸ್ತಾನ ಸೇನೆಯ ಕೈವಾಡವಿಲ್ಲದೆ ಯಾವುದೇ ಪಾಕ್‌ ನಾಗರಿಕ, ಗಡಿ ದಾಟಿ ಭಾರತಕ್ಕೆ ಪ್ರವೇಶಿಸುವುದು ಸಾಧ್ಯವೇ ಇಲ್ಲ. ಪಾಕಿಸ್ತಾನದಲ್ಲಿನ ನನ್ನಂಥ ಯುವಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಈ ಜಿಹಾದ್‌ ತಪ್ಪು’ ಎಂದು ಅಲಿ ಹೇಳಿದ್ದಾನೆ.

ಜತೆಗೆ, ಭಾರತಕ್ಕೆ ಕಳಿಸಿದ ರೀತಿಯಲ್ಲೇ ಈಗ ನನ್ನನ್ನು ನನ್ನ ತಾಯಿ ಹತ್ತಿರಕ್ಕೆ ಕರೆದೊಯ್ಯಿರಿ ಎಂದು ಪಾಕಿಸ್ತಾನ ಸೇನೆ, ಎಲ್‌ಇಟಿ ಮತ್ತು ಐಎಸ್‌ಐಗೆ ಬಾಬರ್‌ ಮನವಿ ಮಾಡಿದ್ದಾನೆ.

ಉಗ್ರ ಹೇಳಿದ್ದೇನು?

- ನನ್ನ ಬಡತನದ ಲಾಭ ಪಡೆದು ಲಷ್ಕರ್‌ ಸಂಘಟನೆ ಜಿಹಾದ್‌ಗೆ ನೇಮಿಸಿತು

- ನಂತರ ಐಎಸ್‌ಐಗೆ ಒಪ್ಪಿಸಿತು, ಪಾಕಿಸ್ತಾನದ ಸೇನೆ ನನಗೆ ತರಬೇತಿ ನೀಡಿತು

- 50000 ರು. ನೀಡುವುದಾಗಿ ಭಾರತಕ್ಕೆ ಕಳಿಸಿದರು, 20000 ಅಡ್ವಾನ್ಸ್‌ ನೀಡಿದರು

- ಭಾರತದಲ್ಲಿ ದಾಳಿ ನಡೆಸಿ ಮರಳಿದ ಮೇಲೆ ಉಳಿದ ಹಣ ನೀಡುವುದಾಗಿ ಹೇಳಿದ್ದರು

- ಪಾಕ್‌ ಸೇನೆ ಕೈವಾಡವಿಲ್ಲದೆ ಯಾರೂ ಭಾರತಕ್ಕೆ ನುಗ್ಗಲು ಸಾಧ್ಯವಿಲ್ಲ

- ಪಾಕ್‌ ಹೇಳಿದಂತೆ ಕಾಶ್ಮೀರದಲ್ಲಿ ರಕ್ತಪಾತ ಇಲ್ಲ, ಇಲ್ಲಿ ಎಲ್ಲವೂ ಶಾಂತವಾಗಿದೆ

Follow Us:
Download App:
  • android
  • ios