ಇಸ್ಲಾಮಾಬಾದ್(ಮಾ.30)‌: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ 100 ವರ್ಷ ಇತಿಹಾಸದ ಹಿಂದೂ ದೇಗುಲದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ನಡೆದಿದೆ. ಶನಿವಾರ ಸಂಜೆ 7:30ರ ಸುಮಾರಿಗೆ ಘಟನೆ ನಡೆದಿದ್ದು, 10ರಿಂದ 15 ಮಂದಿ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.

ದೇಗುಲದ ಮುಖ್ಯ ದ್ವಾರ, ಮೇಲ್ಮಡಿಯ ದ್ವಾರ ಮತ್ತಿತರ ಕಡೆಗಳಲ್ಲಿ ಹಾನಿಯಾಗಿದೆ ಎಂದು ಇಲ್ಲಿನ ಬನ್ನಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ಒಂದು ತಿಂಗಳಿಂದ ದೇವಸ್ಥಾನದ ಜೀರ್ಣೋದ್ದಾರ ಕಾರ‍್ಯ ಪ್ರಗತಿಯಲ್ಲಿದ್ದ ಕಾರಣ ಯಾವುದೇ ದೇವರ ವಿಗ್ರಹಗಳು ಇರಲಿಲ್ಲ. ಹಾಗಾಗಿ ಅಲ್ಲಿ ಧಾರ್ಮಿಕ ಪೂಜೆ ನಡೆಯುತ್ತಿರಲಿಲ್ಲ ಎಂದು ಇವ್ಯಾಕ್ಯುಯೀ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌ (ಇಟಿಪಿಬಿ) ದೂರಿನಲ್ಲಿ ತಿಳಿಸಿದೆ.

ಪಾಕಿಸ್ತಾನದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ಹಿಂದೂ ದೇಗುಲಗಳ ಮೇಲೆ ಆಕ್ರಮಣಗಳು ನಡೆಯುತ್ತಲೇ ಇವೆ. ಕಳೆದ ಡಿಸೆಂಬರ್‌ನಲ್ಲಿ ದುಷ್ಕರ್ಮಿಗಳ ಗುಂಪೊಂದು ಖೈಬರ್‌-ಪಾಖ್ತುಂಖ್ವಾ ಪ್ರಾಂತ್ಯದ ದೇಗುಲದ ಮೇಲೆ ದಾಳಿ ನಡೆಸಿತ್ತು. ಘಟನೆ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.