* 2008ರ ಮುಂಬೈ ದಾಳಿಯ ಸಂಚುಕೋರ ಉಗ್ರ ಹಫೀಜ್‌ ಸಯೀದ್‌ * ಹಫೀಜ್‌ ಸಯೀದ್‌ ಮನೆ ಬಳಿ ಕಳೆದ ತಿಂಗಳು ನಡೆದ ಬಾಂಬ್‌ ಸ್ಫೋಟ* ಸ್ಫೋಟದಲ್ಲಿ ಭಾರತೀಯ ಪ್ರಜೆಯ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪ

ಇಸ್ಲಾಮಾಬಾದ್‌(ಜು.05): 2008ರ ಮುಂಬೈ ದಾಳಿಯ ಸಂಚುಕೋರ ಉಗ್ರ ಹಫೀಜ್‌ ಸಯೀದ್‌ ಮನೆ ಬಳಿ ಕಳೆದ ತಿಂಗಳು ನಡೆದ ಬಾಂಬ್‌ ಸ್ಫೋಟದಲ್ಲಿ ಭಾರತೀಯ ಪ್ರಜೆಯ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ.

ಬಾಂಬ್‌ ದಾಳಿಯ ಹಿಂದೆ ಭಾರತೀಯ ಗೂಢಚರ್ಯೆ ಸಂಸ್ಥೆ(ರಾ) ಜೊತೆ ಸಂಬಂಧ ಹೊಂದಿದ ಭಾರತದ ವ್ಯಕ್ತಿ ಇದ್ದಾನೆ. ಭಯೋತ್ಪಾದ ಕೃತ್ಯ ನಡೆದ ಘಟನಾ ಸ್ಥಳದಲ್ಲಿ ವಶಪಡಿಸಿಕೊಳ್ಳಲಾದ ವಿದ್ಯುತ್‌ ಸಾಧನಗಳು ಮತ್ತು ವಿಧಿ ವಿಜ್ಞಾನ ವಿಶ್ಲೇಷಣೆಗಳಿಂದ ಈ ದಾಳಿಯ ಹಿಂದೆ ಭಾರತೀಯ ಬೇಹುಗಾರಿಕೆ ಸಂಸ್ಥೆಯ ವ್ಯಕ್ತಿಯೇ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಪಾಕಿಸ್ತಾನ ಭದ್ರತಾ ಭದ್ರತಾ ಸಲಹೆಗಾರ ಮೋಹಿದ್‌ ಯೂಸಫ್‌ ಆರೋಪಿಸಿದ್ದಾರೆ.

ವಿದೇಶಿ ಪ್ರಜೆ ಡೇವಿಡ್‌ ಬಂಧನ

 ಜಮಾತ್‌-ಉದ್‌-ದವಾ ಹಫೀಜ್‌ ಸಯೀದ್‌ ನಿವಾಸದ ಮುಂದೆ ಇತ್ತೀಚೆಗೆ ಸಂಭವಿಸಿದ ಕಾರು ಬಾಂಬ್‌ ಸ್ಫೋಟ ಸಂಬಂಧ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಲಾಗಿದೆ. ಪೀಟರ್‌ ಪಾಲ್‌ ಡೇವಿಡ್‌ ಎಂಬಾತನನ್ನು ಲಾಹೋರ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಆತನನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದ ಪಾಕಿಸ್ತಾನ ಭದ್ರತಾ ಏಜೆನ್ಸಿಗಳು ವಿಚಾರಣೆಗೊಳಪಡಿಸಿವೆ.

ಡೇವಿಡ್‌, ಸ್ಫೋಟಕ್ಕೆ ಬಳಸಲಾದ ಕಾರಿನ ಮಾಲೀಕ ಎನ್ನಲಾಗಿದೆ. ಜೊತೆಗೆ ಅವನು ಇತ್ತೀಚಿನ ದಿನಗಳಲ್ಲಿ ಕರಾಚಿ, ಲಾಹೋರ್‌ ಮತ್ತು ದುಬೈ ಮಧ್ಯೆ ಹಲವು ಬಾರಿ ಸಂಚಾರ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.