ಲಂಡನ್(ನ.27)‌: ಕೊರೋನಾ ಲಸಿಕೆ ಅಭಿವೃದ್ಧಿಪಡಿಸುವ ಧಾವಂತದಲ್ಲಿ ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ಎಡವಟ್ಟು ಮಾಡಿಕೊಂಡಿವೆ. ತಮ್ಮ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದು ಈ ಸಂಸ್ಥೆಗಳು ಹೇಳಿಕೊಂಡಿದ್ದವು.

ಆದರೆ ಪೂರ್ಣ ಪ್ರಮಾಣದಲ್ಲಿ ನೀಡಿದ ಲಸಿಕೆ ಶೇ.62ರಷ್ಟುಪರಿಣಾಮಕಾರಿಯಾಗಿದ್ದರೆ, ಅರೆ ಡೋಸ್‌ ನೀಡಲಾದ ಲಸಿಕೆ ಶೇ.90ರಷ್ಟುಪರಿಣಾಮಕಾರಿಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಮೊದಲ ಹಂತದಲ್ಲಿ 2800 ಮಂದಿಗೆ ಅರ್ಧ ಲಸಿಕೆ ಹಾಗೂ 2ನೇ ಹಂತದಲ್ಲಿ 8900 ಮಂದಿಗೆ ಪೂರ್ತಿ ಲಸಿಕೆ ನೀಡಲಾಗಿದೆ. ಪೂರ್ತಿ ಪಡೆದವರಲ್ಲಿ ಲಸಿಕೆಯ ಕ್ಷಮತೆ ಕಡಿಮೆ ಇದೆ. ಅಲ್ಲದೆ ಎಷ್ಟು ವೃದ್ಧರ ಮೇಲೆ ಪರೀಕ್ಷೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ಆಸ್ಟಾಜೆನೆಕಾ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಲಸಿಕೆ ಪರೀಕ್ಷೆಯಲ್ಲಿ ಎಡವಟ್ಟು ಆಗಿರುವುದನ್ನು ಆಸ್ಟ್ರಾಜೆನೆಕಾ ಕೂಡ ಒಪ್ಪಿಕೊಂಡಿದ್ದು, ಉತ್ಪಾದನೆ ದೋಷವನ್ನು ಮುಂದೆ ಮಾಡಿದೆ.

ಏಪ್ರಿಲ್‌ಗೆ ಆಕ್ಸ್‌ಫರ್ಡ್‌ ಲಸಿಕೆ

 

ಕೊರೋನಾ ವೈರಸ್‌ ಬಾರದಂತೆ ಉತ್ತಮವಾಗಿ ಹೋರಾಡುವ ಭರವಸೆ ಮೂಡಿಸಿರುವ ಆಕ್ಸಫರ್ಡ್‌ ಯೂನಿವರ್ಸಿಟಿ ಲಸಿಕೆ ಕೋವಿಶೀಲ್ಡ್‌ 2021ರ ಏಪ್ರಿಲ್‌ನಲ್ಲಿ ಭಾರತದ ಜನಸಾಮಾನ್ಯರಿಗೆ ಲಭಿಸಲು ಆರಂಭವಾಗುವ ಸಾಧ್ಯತೆಯಿದೆ. ಇದರ ಎರಡು ಡೋಸ್‌ಗೆ ಗರಿಷ್ಠ 1000 ರು. ನಿಗದಿಯಾಗುವ ಸಾಧ್ಯತೆಯಿದ್ದು, ಆರೋಗ್ಯ ಕಾರ್ಯಕರ್ತರಿಗೆ 2021ರ ಫೆಬ್ರವರಿಯಲ್ಲೇ ಲಸಿಕೆ ಸಿಗಬಹುದು ಎಂದು ಈ ಲಸಿಕೆಯನ್ನು ತಯಾರಿಸುತ್ತಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್‌ ಪೂನಾವಾಲಾ ಹೇಳಿದ್ದಾರೆ.

ಆದರೆ, 3ನೇ ಹಂತದ ಪರೀಕ್ಷೆಯಲ್ಲಿ ಲಸಿಕೆ ಯಾವ ಫಲಿತಾಂಶ ನೀಡುತ್ತದೆ ಎಂಬುದರ ಮೇಲೆ ಇದು ನಿಂತಿದೆ. ಮೊದಲೆರಡು ಹಂತದ ಪರೀಕ್ಷೆಯಲ್ಲಿ ಕೋವಿಶೀಲ್ಡ್‌ ಲಸಿಕೆ ಪಾಸಾಗಿದೆ. ಸದ್ಯ 3ನೇ ಹಂತದ ಪರೀಕ್ಷೆ ನಡೆಯುತ್ತಿದೆ. ಅದರಲ್ಲೂ ಶೀಘ್ರದಲ್ಲೇ ಉತ್ತಮ ಫಲಿತಾಂಶ ಬಂದರೆ ಸರ್ಕಾರದ ಔಷಧ ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆದು ಲಸಿಕೆ ವಿತರಣೆ ಆರಂಭಿಸಬಹುದಾಗಿದೆ.

ಮುಂದಿನ ವರ್ಷದ ಏಪ್ರಿಲ್‌ ವೇಳೆಗೆ ಲಸಿಕೆ ವಿತರಣೆ ಆರಂಭವಾದರೂ ದೇಶದ ಎಲ್ಲಾ ಜನರಿಗೂ ತ್ವರಿತವಾಗಿ ಲಸಿಕೆ ಸಿಗುವುದಿಲ್ಲ. ಸಮಸ್ತ ಭಾರತೀಯರಿಗೆ 2024ರೊಳಗೆ ಲಸಿಕೆ ಸಿಗಬಹುದು ಎಂದೂ ಅವರು ಹಿಂದುಸ್ತಾನ್‌ ಟೈಮ್ಸ್‌ ಲೀಡರ್‌ಶಿಪ್‌ ಸಮಿಟ್‌ನಲ್ಲಿ ಗುರುವಾರ ಹೇಳಿದ್ದಾರೆ.