ಕೊರೋನಾ ಕೈ ಮೀರಿದೆ: ಬ್ರಿಟನ್ ಆರೋಗ್ಯ ಸಚಿವ| ಕ್ರಿಸ್‌ಮಸ್ ಸಂಭಮಕ್ಕೂ ಸರ್ಕಾರ ಕಡಿವಾಣ| ವೇಗವಾಗಿ ಹಬ್ಬುತ್ತಿದೆ ಹೊಸ ವೈರಸ್| ಲಂಡನ್‌ನಲ್ಲಿ ಕಠಿಣ 4ನೇ ಸ್ತರದ ನಿರ್ಬಂಧ
ಲಂಡನ್(ಡಿ.21): ಬ್ರಿಟನ್‌ನಲ್ಲಿ ಹೊಸದಾಗಿ ಪತ್ತೆಯಾಗಿರುವ ಕೊರೋನಾ ವೈರಸ್‌ನ ಹೊಸ ಮಾದರಿ ಭಾರಿ ವೇಗವಾಗಿ ಹಬ್ಬುತ್ತಿದ್ದು ಬ್ರಿಟನ್ ಸರ್ಕಾರವನ್ನು ಹೈರಾಣಾಗಿಸಿದೆ. ಅದರ ಬೆನ್ನಲ್ಲೇ ಪರಿಸ್ಥಿತಿ ಕಷ್ಟಕರವಾಗಿದೆ, ಪರಿಸ್ಥಿತಿ ಕೈಮೀರಿದೆ ಎನ್ನುವ ಮೂಲಕ ಸ್ವತಃ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾಂಕಾಕ್ ಅವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕ್ರಿಸ್‌ಮಸ್ ಸಮೀಪಿಸುತ್ತಿರುವ ಬೆನ್ನಲ್ಲೇ ನಡೆದಿರುವ ಈ ಎಲ್ಲಾ ಬೆಳವಣಿಗೆಗಳು ದೇಶದಲ್ಲಿ ಮತ್ತೊಂದು ಸುತ್ತಿನಲ್ಲಿ ಕೊರೋನಾ ಮಾರಕವಾಗಿ ಆವರಿಸಿಕೊಳ್ಳುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ನಿರ್ವಹಣೆಗೆ ಇರುವ ಸಮಿತಿಯ ತುರ್ತು ಸಭೆಯೊಂದನ್ನು ಸೋಮವಾರ ಕರೆಯಲಾಗಿದೆ.
"
ಈವರೆಗೆ ಬ್ರಿಟನ್‌ನಲ್ಲಿ 20 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 67000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೊಸದಾಗಿ ನಿತ್ಯ 25000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, 500ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ.
ಬ್ರಿಟನ್‌ನಲ್ಲಿ ವಿಶ್ವದಲ್ಲೇ ಮೊದಲು ಕೊರೋನಾ ಲಸಿಕೆ ಅಭಿಯಾನವನ್ನು ಆರಂಭಿಸಲಾಗಿದೆಯಾದರೂ, ಹೊಸ ಮಾದರಿಯ ವೈರಸ್ ಶೇ.70ರಷ್ಟುವೇಗವಾಗಿ ಎಲ್ಲೆಡೆ ಪಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್ ಅನ್ನು ಟೈರ್ 4 ನಿರ್ಬಂಧಕ್ಕೆ ಒಳಪಡಿಸಿದೆ. ಬ್ರಿಟನ್‌ನಲ್ಲಿ ಟೈರ್ 1 ನಿರ್ಬಂಧ ಎಂದರೆ ಕಡಿಮೆ. ಟೈರ್ 4 ಎಂದರೆ ಅತ್ಯಂತ ಕಠಿಣ. ಇದು ಪೂರ್ಣ ಪ್ರಮಾಣದ ಲಾಕ್‌ಡೌನ್‌ಗೆ ಸಮ. ಟೈರ್ 4 ನಿರ್ಬಂಧ ಇರುವ ಪ್ರದೇಶಗಳಿಗೆ ಹೊರಗಿನವರ ಪ್ರವೇಶ ಇರುವುದಿಲ್ಲ.
ವೈರಸ್ ಸೋಂಕಿನ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರಯಾಣಿಕರಿಗೆ ಸ್ಕಾಟ್ಲೆಂಟ್ ನಿರ್ಬಂಧ ಹೇರಿದೆ. ವೇಲ್ಸ್‌ನಲ್ಲಿ ಲಾಕ್‌ಡೌನ್ ಹೇರಲಾಗಿದೆ. ಈ ಮಧ್ಯೆ, ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿದೆಯೇ ಎಂದು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಆರೋಗ್ಯ ಸಚಿವ ಮ್ಯಾಟ್ ಹ್ಯಾಂಕಾಂಕ್, ‘ಇಲ್ಲ. ತುಂಬಾ ಕಷ್ಟಕರವಾಗಿದೆ. ಪರಿಸ್ಥಿತಿ ಕೈಮೀರಿದೆ’ ಎಂದು ಉತ್ತರಿಸಿದ್ದಾರೆ. ಜನರು ಮನೆಯಲ್ಲೇ ಇದ್ದುಕೊಂಡು ಕ್ರಿಸ್‌ಮಸ್ ಆಚರಿಸಬೇಕು. ಹೊರ ಹೋಗುವ ಮೂಲಕ ವೈರಸ್ ಹರಡಬಾರದು ಎಂದು ಸೂಚಿಸಿದ್ದಾರೆ. ಕ್ರಿಸ್‌ಮಸ್ ಸಂದರ್ಭದಲ್ಲೂ ಲಾಕ್‌ಡೌನ್ ಹೇರಿದ ಬ್ರಿಟನ್ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತವಾಗಿದ್ದು, ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹ ಕೇಳಿಬಂದಿದೆ.
ವಿಮಾನ ಬಂದ್: ಈ ನಡುವೆ ಹೊಸ ಮಾದರಿಯ ಸೋಂಕು ಹಬ್ಬುವ ಭೀತಿ ಇರುವ ಕಾರಣ ಹಾಲೆಂಡ್ ಮತ್ತು ಬೆಲ್ಜಿಯಂ ದೇಶಗಳು ಬ್ರಿಟನ್‌ನಿಂದ ವಿಮಾನಯಾನ ಸೇವೆ ಸ್ಥಗಿತಗೊಳಿಸಿವೆ. ಇನ್ನು ಜರ್ಮನಿ ಕೂಡಾ ಇದೇ ರೀತಿಯ ನಿರ್ಧಾರ ಕೈಗೊಳ್ಳುವ ಚಿಂತನೆ ನಡೆಸುತ್ತಿದೆ.
ರಾಜ್ಯದಲ್ಲಿ ಇನ್ನೂ ಇದೆ ಕೊರೋನಾ ಆತಂಕ: ತಜ್ಞರು
ರಾಜ್ಯದಲ್ಲಿ ಚಳಿಗಾಲವಿದ್ದರೂ ಕೊರೋನಾ ಸೋಂಕು ಪ್ರಕರಣಗಳು ಇಳಿಮುಖವಾಗಿರುವುದರಿಂದ ಜನತೆ ನಿರಾಳರಾಗುತ್ತಿದ್ದಾರೆ. ಆದರೆ, ಮಾರಕ ಕೊರೋನಾ ಹಾವಳಿ ಮುಗಿದಿಲ್ಲ. ಜನವರಿ ತಿಂಗಳ ಅಂತ್ಯದ ವೇಳೆಗೆ ಕರೋನಾ ಎರಡನೇ ಅಲೆಯ ಭೀತಿ ಇನ್ನೂ ಜೀವಂತವಾಗಿದೆ ಎಂದು ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹೇಳಿದ್ದಾರೆ. ಹೀಗಾಗಿ ಜನತೆ ಮೈಮರೆಯದೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಎಚ್ಚರಿಸಿದ್ದಾರೆ. ವಿವರ ಪುಟ 4
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 21, 2020, 9:52 AM IST