ಶೀಘ್ರ ಡೆಲ್ಟಾಹಿಂದಿಕ್ಕಿ ಒಮಿಕ್ರೋನ್‌ ಜಗತ್ತಿನ ನಂ.1 ಸೋಂಕು! ಡೆಲ್ಟಾಗಿಂತ ಒಮಿಕ್ರೋನ್‌ ಪ್ರಬಲ ವೈರಸ್‌: ಸಿಂಗಾಪುರದ ತಜ್ಞರು ಕೆಲವೇ ವಾರದಲ್ಲಿ ಡೆಲ್ಟಾದ ಜಾಗ ಒಮಿಕ್ರೋನ್‌ ಆಕ್ರಮಿಸಿಕೊಳ್ಳಲಿದೆ

ಸಿಂಗಾಪುರ(ಡಿ.31) : ಸದ್ಯ ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸೋಂಕು ಹರಡುತ್ತಿರುವ ಕೊರೋನಾದ ಡೆಲ್ಟಾತಳಿಯನ್ನು ಕೆಲವೇ ವಾರಗಳಲ್ಲಿ ಒಮಿಕ್ರೋನ್‌(Omicron) ರೂಪಾಂತರಿ ತಳಿ ಹಿಂದಿಕ್ಕಿ ಜಗತ್ತಿನ ನಂ.1 ಸೋಂಕಾಗಲಿದೆ ಎಂದು ಸಿಂಗಾಪುರದ ತಜ್ಞರು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಒಮಿಕ್ರೋನ್‌ ವೇಗವಾಗಿ ಹರಡುತ್ತಿದ್ದರೂ ಆಫ್ರಿಕಾ ಖಂಡವನ್ನು ಹೊರತುಪಡಿಸಿ ಇನ್ನೆಲ್ಲಾ ಖಂಡಗಳಲ್ಲೂ ಡೆಲ್ಟಾಸೋಂಕಿತರೇ ಹೆಚ್ಚಿದ್ದಾರೆ. ಆದರೆ, ಡೆಲ್ಟಾಗಿಂತ(Delta) ಒಮಿಕ್ರೋನ್‌ ತಳಿ ಪ್ರಬಲವಾಗಿದ್ದು, ಬೇಗ ಹರಡುವ ಗುಣ ಹೊಂದಿದೆ. ಹೀಗಾಗಿ ಮುಂಬರುವ ವಾರಗಳಲ್ಲಿ ಜಗತ್ತಿನಾದ್ಯಂತ ಡೆಲ್ಟಾದ ಜಾಗವನ್ನು ಒಮಿಕ್ರೋನ್‌ ಆಕ್ರಮಿಸಲಿದೆ ಎಂದು ಸಿಂಗಾಪುರದ ಸರ್ಕಾರಿ ವಿಜ್ಞಾನ ಸಂಸ್ಥೆಯ ಡಾ ಸೆಬಾಸ್ಟಿಯನ್‌ ಮೌರರ್‌ ಸ್ಟ್ರಾ ಹಾಗೂ ನ್ಯಾಷನಲ್‌ ಯುನಿವರ್ಸಿಟಿ ಆಸ್ಪತ್ರೆಯ ಪ್ರೊಫೆಸರ್‌ ಡೇಲ್‌ ಫಿಶರ್‌ ಹೇಳಿದ್ದಾರೆ.

ಈಗಿನ ಅಂಕಿಅಂಶಗಳನ್ನು ನೋಡಿದರೆ ಸದ್ಯದಲ್ಲೇ ಒಮಿಕ್ರೋನ್‌ಗೆ ಡೆಲ್ಟಾಮಣಿಯಲಿದೆ. ನೈಸರ್ಗಿಕವಾಗಿ ಯಾವ ವೈರಸ್‌ ಪ್ರಬಲವಾಗಿದೆಯೋ ಅದು ಉಳಿಯುತ್ತದೆ, ದುರ್ಬಲ ವೈರಸ್‌ ಅಳಿಯುತ್ತದೆ. ಡೆಲ್ಟಾಗಿಂತ ಒಮಿಕ್ರೋನ್‌ ಪ್ರಬಲವಾಗಿದ್ದು, ಬೇಗ ಹರಡುವ ಹಾಗೂ ವೃದ್ಧಿಸುವ ಶಕ್ತಿ ಹೊಂದಿದೆ. ವೈರಾಣು ಕ್ಷೇತ್ರದಲ್ಲಿ ಕೆಲಸ ಮಾಡುವ ಬಹುತೇಕ ತಜ್ಞರು ಇದೇ ಅಭಿಪ್ರಾಯ ಹೊಂದಿದ್ದಾರೆ ಎಂದು ಈ ವಿಜ್ಞಾನಿಗಳು ಹೇಳಿದ್ದಾರೆ.

Omicron Threat: ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಮೂರುವರೆ ತಿಂಗಳ ಬಳಿಕ 400 ಕೇಸ್‌..!

‘ಡೆಲ್ಟಾತಳಿ 13 ರೂಪಾಂತರ ಹೊಂದಿದೆ. ಅದರಲ್ಲಿ ಒಂಭತ್ತು ರೂಪಾಂತರಗಳು ಸ್ಪೈಕ್‌ ಪ್ರೊಟೀನ್‌ ರೂಪಾಂತರಗಳು. ಒಮಿಕ್ರೋನ್‌ ಈವರೆಗೆ 50 ರೂಪಾಂತರಗಳನ್ನು ಹೊಂದಿದ್ದು, ಅದರಲ್ಲಿ 32 ಸ್ಪೈಕ್‌ ಪ್ರೊಟೀನ್‌ ರೂಪಾಂತರವಾಗಿದೆ. ಒಮಿಕ್ರೋನ್‌ ವೈರಾಣು ಡೆಲ್ಟಾಗಿಂತ ಹೆಚ್ಚು ಗಟ್ಟಿಯಾಗಿ ಮನುಷ್ಯರ ಜೀವಕೋಶಗಳಿಗೆ ಅಂಟಿಕೊಳ್ಳುತ್ತದೆ. ಹೀಗಾಗಿ ವೇಗವಾಗಿ ಸೋಂಕು ಹರಡುತ್ತದೆ’ ಎಂದು ಡಾ ಮೌರರ್‌ ಮತ್ತು ಡಾ ಫಿಶರ್‌ ತಿಳಿಸಿದ್ದಾರೆ.

ಅಮೆರಿಕದಲ್ಲಿ ದಿಢೀರ್ ಕೊರೋನಾ ಏರಿಕೆ:

ಕಳೆದೊಂದು ವಾರದಲ್ಲಿ ಸರಾಸರಿ 2.65 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗುತ್ತಿರುವ ಅಮೆರಿಕದಲ್ಲಿ ಬುಧವಾರ ಕೊರೋನಾ ವೈರಸ್‌ನ ಮಹಾ ಸ್ಫೋಟ ಸಂಭವಿಸಿದೆ. ಅತೀ ವೇಗವಾಗಿ ವ್ಯಾಪಿಸುವ ಕೊರೋನಾ ಹೊಸ ರೂಪಾಂತರಿ ಡೆಲ್ಟಾಮತ್ತು ಒಮಿಕ್ರೋನ್‌ ಪರಿಣಾಮ ಬುಧವಾರ ಒಂದೇ ದಿನ ಅಮೆರಿಕದಲ್ಲಿ ಈವರೆಗಿನ ದಾಖಲೆಯ 4.88 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ.

ಮಂಗಳವಾರವಷ್ಟೇ 2.67 ಲಕ್ಷ ಕೇಸ್‌ನಿಂದ ಒಂದೇ ದಿನಕ್ಕೆ ದೈನಂದಿನ ಕೋವಿಡ್‌ ಪ್ರಕರಣಗಳು 5 ಲಕ್ಷದ ಸಮೀಪಕ್ಕೆ ಜಿಗಿದಿದೆ. ಕಳೆದೊಂದು ವಾರದಲ್ಲಿ ದೇಶಾದ್ಯಂತ 20 ಲಕ್ಷಕ್ಕಿಂತ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದ್ದು, ಈ ಪೈಕಿ 15 ರಾಜ್ಯಗಳು ಮತ್ತು ಪ್ರಾಂತ್ಯಗಳು ಈ ಹಿಂದಿನ ವಾರದಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಆದಾಗ್ಯೂ, ಸೋಂಕಿಗೆ ತುತ್ತಾದವರಲ್ಲಿ ವೈರಸ್‌ ತೀವ್ರತೆ ಈ ಹಿಂದಿನಂತಿಲ್ಲ. ಜತೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವು ಶೇ.11ರಷ್ಟುಮಾತ್ರ ಹೆಚ್ಚಿದೆ. ಅಲ್ಲದೆ ಕಳೆದ 2 ವಾರಗಳಲ್ಲಿ ಕೋವಿಡ್‌ಗೆ ಬಲಿಯಾಗುವವರ ಪ್ರಮಾಣವೂ ಸ್ವಲ್ಪ ಸರಿಹಾದಿಗೆ ಬಂದಿದೆ ಎನ್ನಲಾಗಿದೆ.

ಮುಂಬೈನಲ್ಲೂ ಅಪಾಯಕಾರಿ ಅಂಕಿಅಂಶ

ದೇಶಾದ್ಯಂತ ಒಮಿಕ್ರೋನ್‌ ತೀವ್ರತೆ ಮತ್ತು ಕೊರೋನಾ ವೈರಸ್ಸಿನ 3ನೇ ಅಲೆ ಆರಂಭದ ಭೀತಿ ಶುರುವಾಗಿರುವ ಬೆನ್ನಲ್ಲೇ, ಗುರುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 5368 ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ. ಇದರಲ್ಲಿ 198 ಮಂದಿಗೆ ಒಮಿಕ್ರೋನ್‌ ಕೇಸ್‌ಗಳು ಪತ್ತೆಯಾಗಿದ್ದು, ಮುಂಬೈ ಒಂದರಲ್ಲೇ 190 ಹೊಸ ಒಮಿಕ್ರೋನ್‌ ಕೇಸ್‌ಗಳು ಪತ್ತೆಯಾಗಿವೆ.

ಅಲ್ಲದೆ ಒಟ್ಟಾರೆ ಕೇಸ್‌ಗಳ ಪೈಕಿ ಮುಂಬೈ ನಗರವೊಂದರಲ್ಲೇ 3671 ಕೊರೋನಾ ಪ್ರಕರಣಗಳು ಕಂಡುಬಂದಿವೆ. ಬುಧವಾರಕ್ಕೆ ಹೋಲಿಸಿದರೆ ಗುರುವಾರ ಕೊರೋನಾ ಕೇಸ್‌ಗಳ ಸಂಖ್ಯೆ ಶೇ.46ರಷ್ಟುಹೆಚ್ಚಳವಾಗಿದೆ ಹಾಗೂ ಇದು ಮೇ 5ರ ನಂತರದ (8 ತಿಂಗಳ) ಗರಿಷ್ಠ. ಬುಧವಾರ ಮಹಾರಾಷ್ಟ್ರದಲ್ಲಿ 3900 ಕೇಸ್‌ಗಳು ಮಾತ್ರ ದಾಖಲಾಗಿದ್ದವು.