ಉಕ್ರೇನ್ ವಿರುದ್ಧ ಯುದ್ಧ ಸಾರಿದ ರಷ್ಯಾಗೆ ಅಮೆರಿಕಾ, ಬ್ರಿಟನ್‌ನಿಂದ ಮತ್ತೊಂದು ಶಾಕ್!
* ರಷ್ಯಾಕ್ಕೆ ತೈಲ ಶಾಕ್ ನೀಡಲು ನಿರ್ಧರಿಸಿರುವ ಅಮೆರಿಕ
* ಶೀಘ್ರದಲ್ಲೇ ಅಧ್ಯಕ್ಷ ಜೋ ಬೈಡೆನ್‌ನಿಂದ ಘೋಷಣೆ ಸಾಧ್ಯತೆ
* ಅಮೆರಿಕದಿಂದಲೂ ರಷ್ಯಾ ತೈಲಕ್ಕೆ ನಿಷೇಧ
ವಾಷಿಂಗ್ಟನ್(ಮಾ.09): ರಷ್ಯಾಕ್ಕೆ ತೈಲ ಶಾಕ್ ನೀಡಲು ನಿರ್ಧರಿಸಿರುವ ಅಮೆರಿಕ, ರಷ್ಯಾದಿಂದ ಎಲ್ಲಾ ರೀತಿಯ ತೈಲೋತ್ಪನ್ನಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಕುರಿತು ಅಧ್ಯಕ್ಷ ಜೋ ಬೈಡೆನ್ ಅವರು ಶೀಘ್ರದಲ್ಲಿಯೇ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಯುರೋಪಿಯನ್ ಒಕ್ಕೂಟಗಳು ಕೂಡಾ ಇದೇ ಹಾದಿ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ರಷ್ಯಾ ಆದಾಯದ ಪ್ರಮಖ ಮೂಲವಾಗಿರುವ ಕಚ್ಚಾ ತೈಲದ ಆಮದನ್ನು ನಿರ್ಬಂಧಿಸಬೇಕು ಎಂಬ ಉಕ್ರೇನ್ ಅಧ್ಯಕ್ಷ ಜೆಲೆಸ್ಕಿ ಅವರ ಮನವಿಯ ನಂತರ ಈ ಬೆಳವಣಿಗೆ ನಡೆದಿದೆ.
ರಷ್ಯಾ ಮೇಲೆ ಬಹುತೇಕ ದೇಶಗಳು ಹಲವು ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದರೂ, ತೈಲ ಪೂರೈಕೆಯಿಂದ ರಷ್ಯಾದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿಲ್ಲ. ಹಾಗಾಗಿ ಇದನ್ನು ತಡೆಹಿಡಿಯುವ ಮೂಲಕ ಆರ್ಥಿಕತೆಗೆ ಬೃಹತ್ ಹೊಡೆತ ನೀಡಲು ತೀರ್ಮಾನಿಸಲಾಗಿದೆ. ಅಮೆರಿಕ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಲಿದೆ. ಆದರೆ ರಷ್ಯಾದ ಇಂಧನ ಪೂರೈಕೆ ಮೇಲೆ ಹೆಚ್ಚು ಅವಲಂಬಿತವಾಗಿರುವ ಐರೋಪ್ಯ ಒಕ್ಕೂಟ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಶ್ವೇತ ಭವನ ಮಂಗಳವಾರ ತಿಳಿಸಿದೆ.
ಇಂಧನ ಉತ್ಪಾದನೆಯಲ್ಲಿ ಜಗತ್ತಿನ 2ನೇ ದೊಡ್ಡ ರಾಷ್ಟ್ರವಾಗಿರುವ ರಷ್ಯಾದಿಂದ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿವೆ. ಒಂದು ವೇಳೆ ಈ ದೇಶಗಳು ಆಮದನ್ನು ನಿರ್ಬಂಧಿಸಿದರೆ ರಷ್ಯಾ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬೀಳಲಿದೆ. ಅಮೆರಿಕ ರಷ್ಯಾದಿಂದ ಪ್ರತಿನಿತ್ಯ 2 ಲಕ್ಷ ಬ್ಯಾರೆಲ್ ತೈಲ ಮತ್ತು 5 ಲಕ್ಷ ಬ್ಯಾರೆಲ್ ಇತರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುತ್ತಿದೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳು 11.3 ಕೋಟಿ ಬ್ಯಾರೆಲ್ ಕಚ್ಚಾ ತೈಲ ಖರೀದಿಸುತ್ತಿವೆ. ರಷ್ಯಾದ ಒಟ್ಟು ರಫ್ತಿನಲ್ಲಿ ಐರೋಪ್ಯ ಒಕ್ಕೂಟದ ಪಾಲು ಶೇ.60ರಷ್ಟಿದೆ.
ರಷ್ಯಾದ ತೈಲೋತ್ಪನ್ನಕ್ಕೆ ಶೆಲ್ ನಿಷೇಧ
ಉಕ್ರೇನಿನ ಮೇಲೆ ಅಪ್ರಚೋದಿತವಾಗಿ ದಾಳಿ ನಡೆಸಿದ್ದಕ್ಕಾಗಿ ಶೆಲ್ ಕಂಪನಿಯು ರಷ್ಯಾದ ತೈಲ ಹಾಗೂ ನೈಸರ್ಗಿಕ ಅನಿಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಶೆಲ್ ಕಂಪನಿಯ ಒಟ್ಟು ಆಮದಿನಲ್ಲಿ ಶೇ.8 ರಷ್ಟು ಕಚ್ಚಾ ತೈಲವನ್ನು ರಷ್ಯಾ ಒಂದೇ ಪೂರೈಕೆ ಮಾಡುತ್ತಿತ್ತು. ಇದು ರಷ್ಯಾದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಲಿದೆ.
ಕಳೆದ ಶುಕ್ರವಾರ 1 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲ ಆಮದು ಮಾಡಿಕೊಂಡ ಕಂಪನಿಯ ಕ್ರಮವನ್ನು ಟೀಕಿಸಿದ ಉಕ್ರೇನಿನ ಸಚಿವ ಕುಲೇಬಾ ‘ರಷ್ಯಾದ ತೈಲದಿಂದ ನಿಮಗೆ ಉಕ್ರೇನಿಯನ್ನರ ರಕ್ತದ ವಾಸನೆ ಬರುತ್ತಿಲ್ಲವೇ’ ಎಂದು ಪ್ರಶ್ನಿಸಿದ್ದರು.
ಜಾಗತಿಕವಾಗಿ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಷ್ಯಾದ ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನ, ನೈಸರ್ಗಿಕ ಅನಿಲ ಹಾಗೂ ಎಲ್‌ಪಿಜಿಯ ಆಮದಿನ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೇ ರಷ್ಯಾದಿಂದ ತೈಲ ಖರೀದಿಸುವ ನಿರ್ಧಾರ ತಪ್ಪೆಂದು ನಮಗೆ ಅರಿವಾಗಿದೆ. ನಮ್ಮನ್ನು ಕ್ಷಮಿಸಿ ಎಂದು ಕಂಪನಿಯ ಸಿಇಒ ಸ್ವತಃ ಕ್ಷಮಾಪಣೆ ಕೋರಿದ್ದಾರೆ.
ನಮ್ಮ ಕಚ್ಚಾ ತೈಲ ನಿಷೇಧಿಸಿದರೆ ದರ ಬ್ಯಾರಲ್‌ಗೆ 300 ಡಾಲರ್‌ಗೆ
ರಷ್ಯಾದ ಕಚ್ಚಾತೈಲ ಆಮದಿನ ಮೇಲೆ ಯುರೋಪಿಯನ್ ಒಕ್ಕೂಟ, ಅಮೆರಿಕ ಸೇರಿ ಪ್ರಮುಖ ದೇಶಗಳು ನಿಷೇಧ ಹೇರಲು ಮುಂದಾದರೆ ಈಗಾಗಲೇ ಬ್ಯಾರಲ್‌ಗೆ 130 ಡಾಲರ್ ದಾಟಿರುವ ಕಚ್ಚಾತೈಲದ ಬೆಲೆ 300 ಡಾಲರ್ ದಾಟಲಿದೆ. ಈ ಮೂಲಕ ಜಗತ್ತಿನ ಎಲ್ಲಾ ದೇಶಗಳು ದೊಡ್ಡ ಸಮಸ್ಯೆಗೆ ಸಿಕ್ಕಿಬೀಳಬೇಕಾಗಿ ಬರಲಿದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ. ‘ರಷ್ಯಾದಿಂದ ಪೂರೈಕೆಯಾಗುತ್ತಿರುವ ಇಂಧನ ನಿರ್ಬಂಧಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುರಂತವಾಗಲಿದೆ. ಕಚ್ಚಾ ತೈಲದ ಬೆಲೆ ಊಹಿಸಲು ಸಾಧ್ಯವಾಗದ ಗರಿಷ್ಠಕ್ಕೆ ತಲುಪಬಹುದು. ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 300 ಡಾಲರ್‌ಗೆ ಹೆಚ್ಚಾಗಬಹುದು ಎಂದು ರಷ್ಯಾದ ಉಪ ಪ್ರಧಾನಮಂತ್ರಿ ಅಲೆಕ್ಸಾಂಡರ್ ನೊವಾಕ್ ಹೇಳಿದ್ದಾರೆ.