ಬರ್ಲಿನ್(ಡಿ.01)‌: ಶ್ವಾಸಕೋಶವನ್ನೇ ಪ್ರಮುಖವಾಗಿ ಗುರಿ ಮಾಡಿಕೊಂಡು ಮಾನವರನ್ನು ಬಲಿ ಪಡೆಯುತ್ತಿರುವ ಕೊರೋನಾ ವೈರಸ್‌, ಮೂಗಿನ ಮೂಲಕ ಮೆದುಳನ್ನು ಪ್ರವೇಶಿಸುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಇತ್ತೀಚಿನ ಕೆಲ ಸಂಶೋಧನೆಗಳ ವೇಳೆ ಮೆದುಳಿನಲ್ಲಿ ಕೊರೋನಾ ವೈರಸ್‌ನ ಆರ್‌ಎನ್‌ಎ ಪತ್ತೆಯಾಗಿತ್ತಾದರೂ, ಅದು ಅಲ್ಲಿಗೆ ಹೋಗಿದ್ದು ಹೇಗೆ ಎಂಬುದು ಗೊತ್ತಾಗಿರಲಿಲ್ಲ. ಆದರೆ ಇದೀಗ ಜರ್ಮನಿಯ ಚಾರಿಟೇ ಯೂನಿವರ್ಸಿಟಿ ಮೆಡಿಜಿನ್‌ನ ಸಂಶೋಧಕರ ತಂಡ, ವೈರಸ್‌ ಮೆದುಳನ್ನು ಪ್ರವೇಶ ಮಾಡುತ್ತಿರುವುದು ಮೂಗಿನಿಂದ ಎಂದು ಪತ್ತೆಹಚ್ಚಿದೆ.

ಕೊರೋನಾ ಲಸಿಕೆ ಬಗ್ಗೆ ಜನರಿಗೆ ಸರಳವಾಗಿ ತಿಳಿಸಿ: ಮೋದಿ

ವೈರಸ್‌ ಹೀಗೆ ಕೇಂದ್ರೀಯ ನರಮಂಡಲ ವ್ಯವಸ್ಥೆ ಮೇಲೆ ದಾಳಿ ನಡೆಸುತ್ತಿರುವ ಕಾರಣದಿಂದಲೇ ಸೋಂಕಿತರಲ್ಲಿ ನರಸಂಬಂಧಿ ತೊಂದರೆಗಳಾದ ವಾಸನೆ ಗ್ರಹಣ ಶಕ್ತಿ ನಷ್ಟ, ತಲೆನೋವು, ರುಚಿ ಗೊತ್ತಾಗುವುದೇ ಇರುವುದು, ಬಳಲಿಕೆ ಕಂಡುಬರುತ್ತಿದೆ ಎಂದು ಸಂಶೋಧಕರ ತಂಡ ಹೇಳಿದೆ.

ಈ ಸಂಶೋಧನೆ ಮುಂದಿನ ದಿನಗಳಲ್ಲಿ ಕೆಲ ಕೊರೋನಾ ಲಕ್ಷಣಗಳ ಕುರಿತು ತಪಾಸಣೆ ಮತ್ತು ಸೋಂಕು ಹಬ್ಬದಂತೆ ತಡೆಯಲು ನೆರವು ನೀಡಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ನಮ್ಮ ಲಸಿಕೆ ಶೇ.100ರಷ್ಟು ಪರಿಣಾಮಕಾರಿ, ಬಳಕೆಗೆ ಅನುಮತಿ ಕೊಡಿ: ಮಾಡೆರ್ನಾ

ವೈಜ್ಞಾನಿಕ ಪತ್ರಿಕೆಯಾದ ನ್ಯೂರೋಸೈನ್ಸ್‌ನಲ್ಲಿ ಪ್ರಕಟವಾಗಿರುವ ವರದಿ ಅನ್ವಯ, ಸಂಶೋಧನೆ ವೇಳೆ, ಮೂಗಿನ ಕವಾಟಗಳನ್ನು ಸಂಪರ್ಕಿಸುವ ಗಂಟಲಿನ ಮೇಲಿನ ಭಾಗವಾದ ನ್ಯಾಸೋಪ್ರಾಂಕ್ಸ್‌ ಮತ್ತು ಮೆದುಳಿನಲ್ಲಿ ಕೊರೋನಾ ವೈರಸ್‌ನ ಆರ್‌ಎನ್‌ಎ ಮತ್ತು ಪ್ರೋಟಿನ್‌ ಪತ್ತೆಯಾಗಿದೆ. ಹೀಗಾಗಿ ಮೂಗಿನಿಂದಲೇ ವೈರಸ್‌ ಮೆದುಳಿಗೆ ಪ್ರವೇಶ ಪಡೆದಿದೆ ಎಂದು ಸಂಶೋಧರು ತೀರ್ಮಾನಕ್ಕೆ ಬಂದಿದ್ದಾರೆ.