ರಹಸ್ಯವಾಗಿ ಮೆಕ್ಕಾ ತಲುಪಿದ ಮುಸ್ಲೀಮೇತರ ವ್ಯಕ್ತಿ, ವಿಶ್ವದ ಮುಸ್ಲೀಮರ ಆಕ್ರೋಶ!
ಇಸ್ಲಾಂನ ಅತ್ಯಂತ ಪವಿತ್ರ ನಗರವಾಗಿರುವ ಮೆಕ್ಕಾದಲ್ಲಿ ಮುಸ್ಲೀಮೇತರ ವ್ಯಕ್ತಿಗಳಿಗೆ ಪ್ರವೇಶವಿಲ್ಲ. ಮುಸ್ಲಿಂ ಹೊರತಾದ ವ್ಯಕ್ತಿಗಳನ್ನು ತಡೆಯಲು ಅತ್ಯಾಧುನಿಕ ಕ್ಯಾಮೆರಾಗಳು ಇದನ್ನು ಸುತ್ತುವರಿದಿವೆ. ಹಾಗಿದ್ದರೂ ಇಸ್ರೇಲ್ ಪತ್ರಕರ್ತ ಗಿಲ್ ತಮರಿ ಮೆಕ್ಕಾ ಪ್ರವೇಶಿಸುವಲ್ಲಿ ಯಶಸ್ವಿಯಾಗುವ ಮೂಲಕ ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಬೆನ್ನಲ್ಲಿಯೇ ವಿಶ್ವದಾದ್ಯಂತ ಮುಸ್ಲೀಮರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೆಲ್ ಅವೀವ್ (ಜುಲೈ 20): ಇಸ್ಲಾಂ ಧರ್ಮದ ಪವಿತ್ರ ನಗರ ಎನಿಸಿಕೊಂಡಿರುವ ಸೌದಿ ಅರೇಬಿಯಾದ ಮೆಕ್ಕಾಗೆ ಮುಸ್ಲಿಂ ಹೊರತಾದವರು ಹೋಗುವಂತಿಲ್ಲ. ಅಂಥದ್ದೊಂದು ಕಟ್ಟುನಿಟ್ಟಿನ ಸಂಪ್ರದಾಯವನ್ನು ಅವರು ಬೆಳೆಸಿಕೊಂಡು ಬಂದಿದ್ದಾರೆ. ಇಸ್ಲಾಂನ ಪವಿತ್ರ ನಗರಕ್ಕೆ ಮುಸ್ಲಿಮೇತರರ ಪ್ರವೇಶದ ಮೇಲಿನ ದೀರ್ಘಕಾಲದ ನಿಷೇಧವನ್ನು ಧಿಕ್ಕರಿಸಿ, ಇಸ್ರೇಲ್‌ನ ಪತ್ರಕರ್ತರೊಬ್ಬರು ಮೆಕ್ಕಾಗೆ ಪ್ರವೇಶ ಮಾಡಿದ್ದಲ್ಲದೆ, ತಮ್ಮ ಪ್ರಯಾಣದ ವಿಡಿಯೋವನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ವಿಡಿಯೋ ಟ್ವಿಟರ್ ಸೇರಿದಂತೆ ಅವರ ಪತ್ರಿಕೆಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಅವರ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದೆ. ಇಸ್ರೇಲ್‌ನ ಚಾನೆಲ್ 13 ಸೋಮವಾರ ತನ್ನ ವರ್ಲ್ಡ್ ನ್ಯೂಸ್ ಎಡಿಟರ್ ಗಿಲ್ ತಮರಿಯನ್ನು ಒಳಗೊಂಡ ವರದಿಯನ್ನು ಪ್ರಸಾರ ಮಾಡಿತು ಮತ್ತು ಪವಿತ್ರ ನಗರದ ಸುತ್ತಲೂ ಅವರು ವಾಹನ ಚಾಲನೆ ಮಾಡಿದ್ದು, ಮೆಕ್ಕಾ ನಗರದ ಮನಮೋಹಕ ದೃಶ್ಯಗಳು ಹಾಗೂ ಆಕರ್ಷಕ ಪ್ರದೇಶಗಳನ್ನು ಅವರು ತೋರಿಸಿದ್ದಾರೆ. ತಮರಿ ಅವರು ಕಮಾನಿನ ರೀತಿಯಲ್ಲಿರುವ ಮೆಕ್ಕಾ ಗೇಟ್‌ನ ಒಳಹೋಗುತ್ತಿರುವ ವಿಡಿಯೋವನ್ನು ಮಾಡಿದ್ದಾರೆ. ಇದು ಮೆಕ್ಕಾ ನಗರದ ಪ್ರವೇಶವನ್ನು ಖಚಿತಪಡಿಸುವ ಸ್ಥಳವಾಗಿದೆ. ಇಸ್ಲಾಂನ ಪವಿತ್ರ ಪ್ರದೇಶವಾಗಿರುವ ಕಾರಣ ಈ ಕಮಾನಿನ ಒಳಗೆ ಮುಸ್ಲೀಮೇತರ ವ್ಯಕ್ತಿಗಳಿಗೆ ಪ್ರವೇಶ ಇರುವುದಿಲ್ಲ.
ಮೌಂಟ್ ಅರಾಫತ್ ಮೇಲೆ ಸೆಲ್ಫಿ: ಅದಲ್ಲದೆ ಮೌಂಟ್ ಅರಾಫತ್ (Mount Arafat ) ಮೇಲೆ ಸೆಲ್ಫಿ ತೆಗೆದುಕೊಂಡಿದ್ದು ಅದನ್ನು ಕೂಡ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೆಕ್ಕಾದ (Mecca) ಹೊರವಲಯದಲ್ಲಿರುವ ಇದೇ ಪವಿತ್ರ ಬೆಟ್ಟದ ಮೇಲೆ ಪ್ರವಾದಿ ಮೊಹಮದ್ ( Prophet Muhammad ) ಪೈಗಂಬರ್ ತಮ್ಮ ಅಂತಿಮ ಧರ್ಮೋಪದೇಶವನ್ನು ನೀಡಿದ್ದರು ಎಂದು ಮುಸ್ಲೀಮರು ನಂಬುತ್ತಾರೆ. ವಾರ್ಷಿಕ ಹಜ್ ಯಾತ್ರೆಯ ಸಮಯದಲ್ಲಿ ಮುಸ್ಲಿಮರು ಸೇರುವ ತಾಣ ಇದಾಗಿದೆ.
ಗಡಿಪಾರು ಶಿಕ್ಷೆ: ಮಕ್ಕಾ ಮಾತ್ರವಲ್ಲ ಇಸ್ಲಾಂನ ಇನ್ನೊಂದು ಪವಿತ್ರ ನಗರವಾದ ಮದೀನಾದ ಕೆಲವು ಭಾಗಗಳಿಗೆ ಮುಸ್ಲಿಮೇತರರು ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಗರಗಳಿಗೆ ಪ್ರವೇಶಿಸುವ ಮುಸ್ಲೀಮೇತರರಿಗೆ ದಂಡ ಹಾಗೂ ಸೌದಿ ಅರೇಬಿಯಾದಿಂದ ಗಡಿಪಾರು ಮಾಡುವಂಥ ಶಿಕ್ಷೆಗಳನ್ನು ನೀಡಲಾಗುತ್ತದೆ. ಕಳೆದ ವಾರ ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾಗವಹಿಸಿದ್ದ ಪ್ರಾದೇಶಿಕ ಸಮ್ಮೇಳನವನ್ನು ವರದಿ ಮಾಡಲು ಸೌದಿ ಅರೇಬಿಯಾಕ್ಕೆ ಅನುಮತಿಸಲಾದ ಮೂವರು ಇಸ್ರೇಲಿ ವರದಿಗಾರರಲ್ಲಿ ತಮರಿ (Israeli journalist Gil Tamari) ಕೂಡ ಒಬ್ಬರಾಗಿದ್ದರು.
ವಿಶ್ವದ ಮುಸ್ಲೀಮರ ಟೀಕೆ: ಈ ಭೇಟಿಯನ್ನು ಆನ್‌ಲೈನ್‌ನಲ್ಲಿ ತೀವ್ರವಾಗಿ ಟೀಕಿಸಲಾಗಿದೆ, ಹಲವಾರು ಮುಸ್ಲಿಂ ಸಾಮಾಜಿಕ ಮಾಧ್ಯಮ ಬಳಕೆದಾರರು "ಜೀವ್ ಇನ್ ದಿ ಹರಾಮ್" ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದಾರೆ. ಮೆಕ್ಕಾದ ಉದಾತ್ತ ಜನರು ಮತ್ತು [ಬಂಧಿತ ಇಸ್ಲಾಮಿಕ್ ವಿದ್ವಾಂಸ] ಡಾ ಮೂಸಾ ಅಲ್-ಶರೀಫ್ ಅವರಂತಹ ಮಹಾನ್ ವಿದ್ವಾಂಸರು ಸೌದಿ ಜೈಲುಗಳಲ್ಲಿದ್ದಾರೆ, ಆದರೆ ಯಹೂದಿಯೊಬ್ಬ ಮೆಕ್ಕಾದಲ್ಲಿ ತಿರುಗಾಡುತ್ತಿದ್ದಾರೆ" ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಟೆಲ್ ಅವೀವ್ ಮತ್ತು ಅರಬ್ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಂಬಲಿಸುವವರಲ್ಲಿಒಬ್ಬರಾದ ಸೌದಿ ಬ್ಲಾಗರ್ ಮೊಹಮ್ಮದ್ ಸೌದ್ ಸೇರಿದಂತೆ ಹಲವರು ಈ ರಹಸ್ಯ ಭೇಟಿಯನ್ನು ಖಂಡಿದ್ದಾರೆ. "ಇಸ್ರೇಲ್‌ನಲ್ಲಿರುವ ನನ್ನ ಆತ್ಮೀಯ ಸ್ನೇಹಿತರೇ, ನಿಮ್ಮ ವರದಿಗಾರರೊಬ್ಬರು ಪವಿತ್ರ ಮುಸ್ಲಿಂ ನಗರವಾದ ಮೆಕ್ಕಾವನ್ನು ಪ್ರವೇಶಿಸಿದರು ಮತ್ತು ಯಾವುದೇ ಅವಮಾನವಿಲ್ಲದೆ ಚಿತ್ರೀಕರಣ ಮಾಡಿದ್ದಾರೆ" ಎಂದು ಸೌದ್ ಅವರು ನಿರರ್ಗಳವಾಗಿ ಹೀಬ್ರೂ ಭಾಷೆಯಲ್ಲಿ ವೀಡಿಯೊ ಭಾಷಣದಲ್ಲಿ ಹೇಳಿದರು.
ದೇಶದ ಈಗಿನ ಪರಿಸ್ಥಿತಿ ನನಗೆ ಭಯ ಮೂಡಿಸಿದೆ ಎಂದ ಅಮರ್ತ್ಯ ಸೆನ್!
ಕ್ಷಮೆ ಕೇಳಿದ ಇಸ್ರೇಲ್ ಪತ್ರಕರ್ತ: ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಚಾನೆಲ್ 13 (Channel 13) ಈ ಕುರಿತಾಗಿ ಕ್ಷಮೆ ಯಾಚಿಸಿದೆ. ವರದಿಯಿಂದಾಗಿ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತಿದ್ದೇವೆ ಎಂದು ಬರೆದುಕೊಂಡಿದೆ. "ನಮ್ಮ ವರ್ಲ್ಡ್ ನ್ಯೂಸ್ ಎಡಿಟರ್ ಗಿಲ್ ತಮರಿ ಅವರ ಮೆಕ್ಕಾ ಭೇಟಿಯು ಒಂದು ಪ್ರಮುಖ ಪತ್ರಿಕೋದ್ಯಮದ ಸಾಧನೆಯಾಗಿದೆ, ಇದು ಮುಸ್ಲಿಮರನ್ನು ಬೇಸರ ಮಾಡುವ ಉದ್ದೇಶವನ್ನು ಹೊಂದಿಲ್ಲ" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
'ಹಿಂದುಗಳೇ, ಅದು ನಿಮ್ಮ ದೇಶ, ನಿಮ್ಮ ತಾಯ್ನೆಲ' ಉದಯಪುರ ಹತ್ಯೆಯನ್ನು ಖಂಡಿಸಿದ ಡಚ್ ಸಂಸದ!
ಈ ಮೆಕ್ಕಾ ಭೇಟಿಯು ಮುಸ್ಲಿಮರನ್ನು ಅಥವಾ ಯಾವುದೇ ವ್ಯಕ್ತಿಯನ್ನು ಕೆಟ್ಟದಾಗಿ ತೋರಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಈ ವೀಡಿಯೋಗೆ ಯಾರಾದರೂ ಮನನೊಂದಿದ್ದರೆ, ನಾನು ತೀವ್ರವಾಗಿ ಕ್ಷಮೆಯಾಚಿಸುತ್ತೇನೆ. ಈ ಸಂಪೂರ್ಣ ಪ್ರಯತ್ನದ ಉದ್ದೇಶವು ಮೆಕ್ಕಾ ಮತ್ತು ಸೌಂದರ್ಯದ ಮಹತ್ವವನ್ನು ಪ್ರದರ್ಶಿಸುವುದಾಗಿತ್ತು ಎಂದು ಗಿಲ್ ತಮರಿ ಬರೆದುಕೊಂಡಿದ್ದಾರೆ.