ಚೀನಾ ಲ್ಯಾಬ್‌ನಿಂದಲೇ ವೈರಸ್ ಲೀಕ್: ಏಡ್ಸ್ ಔಷಧ ತಯಾರಿ ವೇಳೆ ಎಡವಟ್ಟು!
ಏಡ್ಸ್ ಔಷಧಕ್ಕಾಗಿ ಚೀನಾದಿಂದ ಕೊರೋನಾ ವೈರಸ್ ತಯಾರಿ!| ಅಕಸ್ಮಾತಾಗಿ ಸೋರಿಕೆಯಾಗಿರಬಹುದು: ನೊಬೆಲ್ ವಿಜ್ಞಾನಿ| ಮನುಷ್ಯನಿಂದ ವೈರಸ್ ತಯಾರಿಸಲು ಸಾಧ್ಯವಿಲ್ಲ: ಚೀನಾ
ನವದೆಹಲಿ(ಏ.20): ಕೊರೋನಾ ವೈರಸ್ಸನ್ನು ಚೀನಾ ತನ್ನ ಪ್ರಯೋಗಾಲಯದಲ್ಲಿ ತಯಾರಿಸಿದೆ ಎಂದು ವಿವಿಧ ದೇಶಗಳು ಶಂಕಿಸುತ್ತಿರುವಾಗಲೇ ಫ್ರಾನ್ಸ್‌ನ ನೊಬೆಲ್ ವಿಜೇತ ವೈದ್ಯಕೀಯ ವಿಜ್ಞಾನಿ ಲುಕ್ ಮಾಂಟೆಗ್ನೇರ್ ಇದು ಮಾನವ ನಿರ್ಮಿತ ವೈರಸ್ ಆಗಿದ್ದು, ಚೀನಾದ ಪ್ರಯೋಗಾಲಯದಲ್ಲೇ ತಯಾರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಏಡ್ಸ್‌ಗೆ ಔಷಧ ಕಂಡುಹಿಡಿಯುವ ಪ್ರಯತ್ನದಲ್ಲಿ ಚೀನಾ ಈ ವೈರಸ್ ತಯಾರಿಸಿರಬಹುದು. ಅದು ಅಕಸ್ಮಾತಾಗಿ ಸೋರಿಕೆಯಾಗಿರಬಹುದು ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕೊರೋನಾ ವೈರಸ್ ಚೀನಾದಲ್ಲೇ ತಯಾರಾಗಿರಬಹುದು, ನಾವು ಅದರ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದೇವೆ ಎಂದು ಶನಿವಾರ ಪುನರುಚ್ಚರಿಸಿದ್ದಾರೆ. ಈ ಎಲ್ಲ ಆರೋಪಗಳಿಗೆ ಮೊಟ್ಟಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವುಹಾನ್‌ನಲ್ಲಿರುವ ನ್ಯಾಷನಲ್ ಬಯೋಸೇಫ್ಟಿಲ್ಯಾಬೋರೇಟರಿ ಮುಖ್ಯಸ್ಥ ಯುವಾನ್ ಜಿಮಿಂಗ್, ಯಾವುದೇ ವೈರಸ್ಸನ್ನು ಮನುಷ್ಯ ತಯಾರಿಸಲು ಸಾಧ್ಯವಿಲ್ಲ. ನಮ್ಮ ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿದೆ ಎಂಬುದಕ್ಕೆ ಯಾರ ಬಳಿಯೂ ಸಾಕ್ಷ್ಯವಿಲ್ಲ ಎಂದು ಹೇಳಿದ್ದಾರೆ.
ಕೋವಿಡ್‌ನಲ್ಲಿ ಏಡ್ಸ್, ಮಲೇರಿಯಾ ರೋಗಾಣು:
ಫ್ರಾನ್ಸ್‌ನಲ್ಲಿ ಸಂದರ್ಶನ ನೀಡಿರುವ ಲುಕ್ ಮಾಂಟೆಗ್ನೇರ್, ಕೊರೋನಾ ವೈರಸ್‌ನಲ್ಲಿ ಏಡ್ಸ್ ಮತ್ತು ಮಲೇರಿಯಾ ವೈರಸ್ಸಿನ ವಂಶವಾಹಿನಿಗಳೂ ಇವೆ. ಈ ವೈರಸ್ಸಿನ ಲಕ್ಷಣಗಳನ್ನು ನೋಡಿದರೆ ಇದು ನೈಸರ್ಗಿಕವಾಗಿ ಮೂಡಿರಲು ಸಾಧ್ಯವಿಲ್ಲ. ಏಡ್ಸ್‌ಗೆ ಔಷಧ ಕಂಡುಹಿಡಿಯುವ ಪ್ರಯತ್ನದಲ್ಲಿ ವುಹಾನ್ ಪ್ರಯೋಗಾಲಯ ಇದನ್ನು ತಯಾರಿಸಿರಬಹುದು. ಪ್ರಯೋಗದ ವೇಳೆ ಏನಾದರೂ ಸಮಸ್ಯೆಯಾಗಿ ಅದು ಸೋರಿಕೆಯಾಗಿರಬಹುದು ಎಂದು ಹೇಳಿದ್ದಾರೆ. ಮಾಂಟೆಗ್ನೇರ್ ಅವರು ಏಡ್ಸ್ ವೈರಾಣುವಿನ ಶೋಧಕ್ಕಾಗಿಯೇ 2008ರಲ್ಲಿ ನೊಬೆಲ್ ಪಡೆದಿದ್ದಾರೆ. ಹೀಗಾಗಿ ಅವರ ಹೇಳಿಕೆಗೆ ಮಹತ್ವ ಬಂದಿದೆ.
ಬೇಕಂತಲೇ ದಾರಿತಪ್ಪಿಸುತ್ತಿದ್ದಾರೆ-ಚೀನಾ:
ಚೀನಾದ ಸರ್ಕಾರಿ ಸ್ವಾಮ್ಯದ ಸಿಜಿಟಿಎನ್ ಟೀವಿಗೆ ಸಂದರ್ಶನ ನೀಡಿರುವ ವುಹಾನ್ ವೈರಾಲಜಿ ಸಂಸ್ಥೆಯ ನಿರ್ದೇಶಕ ಯುವಾನ್ ಜಿಮಿಂಗ್, ‘ನಮ್ಮ ಪ್ರಯೋಗಾಲಯದಲ್ಲಿ ಏನು ಸಂಶೋಧನೆ ನಡೆಯುತ್ತಿದೆ, ನಾವು ವೈರಸ್ ಹಾಗೂ ಸ್ಯಾಂಪಲ್‌ಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ನಮಗೆ ಗೊತ್ತು. ನಮ್ಮಿಂದ ವೈರಸ್ ಸೋರಿಕೆಯಾಗಿರಲು ಸಾಧ್ಯವೇ ಇಲ್ಲ. ಕೆಲವರು ಉದ್ದೇಶಪೂರ್ವಕವಾಗಿ ದಾರಿತಪ್ಪಿಸುತ್ತಿದ್ದಾರೆ. ವುಹಾನ್‌ನಲ್ಲೇ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರಿಂದ ಹಾಗೂ ನಮ್ಮ ಪ್ರಯೋಗಾಲಯ ವುಹಾನ್‌ನಲ್ಲೇ ಇರುವುದರಿಂದ ಅನುಮಾನ ಬಂದಿರಬಹುದು. ಆದರೆ, ಅದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ವೈರಸ್ಸನ್ನು ಮನುಷ್ಯ ತಯಾರಿಸಲು ಸಾಧ್ಯವಿಲ್ಲ. ವೈರಸ್ಸನ್ನು ಕೃತಕವಾಗಿ ತಯಾರಿಸಲು ಅಸಾಧಾರಣ ಬುದ್ಧಿವಂತಿಕೆ ಹಾಗೂ ಅಸಾಮಾನ್ಯ ಪ್ರಯೋಗಗಳ ಅವಶ್ಯಕತೆಯಿದೆ ಎಂದು ಕೆಲ ವಿಜ್ಞಾನಿಗಳು ನಂಬುತ್ತಾರೆ. ಈ ಹಂತದಲ್ಲಿ ಮನುಷ್ಯರಿಗೆ ಅಂತಹ ಸಾಮರ್ಥ್ಯವಿದೆಯೆಂದು ನನಗೆ ಅನ್ನಿಸುವುದಿಲ್ಲ’ ಎಂದು ಹೇಳಿದ್ದಾರೆ.