ಭಾರತದ ಜೈಲಲ್ಲಿ ನೀರವ್ ಮೋದಿ ಆತ್ಮಹತ್ಯೆ ಸಾಧ್ಯತೆ| ಖಿನ್ನತೆಯಲ್ಲಿರುವ ವಜ್ರೋದ್ಯಮಿಗೆ ಚಿಕಿತ್ಸೆ ಅಗತ್ಯವಿದೆ| ವೆಸ್ಟ್‌ಮಿನ್‌ಸ್ಟರ್ ಕೋರ್ಟಲ್ಲಿ ನೀಮೋ ವಕೀಲರ ವಾದ
ಲಂಡನ್(ಸೆ.09): ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರು. ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತಕ್ಕೆ ಗಡೀಪಾರು ಆಗುವ ಭೀತಿ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್ ಮೋದಿ ಇದರಿಂದ ಪಾರಾಗಲು ಹೊಸ ವರಾತ ಆರಂಭಿಸಿದ್ದಾನೆ. ಹೌದು, ಭಾರತದ ಜೈಲಿನಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ನೀಮೋ ಆತ್ಮಹತ್ಯೆಗೆ ಶರಣಾಗುವ ಆತಂಕವಿದೆ. ಅಲ್ಲದೆ, ನೀರವ್ ಮೋದಿ ವಿರುದ್ಧದ ಪ್ರಕರಣವನ್ನು ಭಾರತದಲ್ಲಿ ರಾಜಕೀಯಕರಣಗೊಳಿಸುವ ಕಾರಣ, ತಮ್ಮ ಕಕ್ಷಿದಾರನ ವಿಚಾರಣೆಯು ಸರಿಯಾದ ಮಾರ್ಗದಲ್ಲಿ ನಡೆಯುವ ಸಾಧ್ಯತೆಯಿಲ್ಲ ಎಂದು ನೀಮೋ ಪರ ವಕೀಲರು ಬ್ರಿಟನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇಲ್ಲಿನ ವೆಸ್ಟ್‌ಮಿನ್‌ಸ್ಟರ್ ನ್ಯಾಯಾಲಯದಲ್ಲಿ ಸೋಮವಾರದಿಂದ ಆರಂಭವಾಗಿರುವ ನೀಮೋ ಗಡೀಪಾರು ಅರ್ಜಿ ವಿಚಾರಣೆಯು ಇನ್ನೂ ಮೂರು ದಿನಗಳ ಕಾಲ ನಡೆಯಲಿದೆ. 2ನೇ ದಿನವಾದ ಮಂಗಳವಾರದ ವಿಚಾರಣೆ ವೇಳೆ ನೀಮೋ ಭಾರತಕ್ಕೆ ಗಡೀಪಾರು ಆದಲ್ಲಿ, ಅವರನ್ನು ಸೆರೆವಾಸಕ್ಕೆ ಗುರಿಪಡಿಸಲಾಗುವ ಮುಂಬೈನ ಆರ್ಥೂರ್ ರಸ್ತೆ ಜೈಲಿನಲ್ಲಿ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಸೇರಿದಂತೆ ಇನ್ನಿತರ ಅಂಕಿ ಸಂಖ್ಯೆಗಳನ್ನು ನ್ಯಾಯಾಧೀಶ ಸ್ಯಾಮ್ಯುವೆಲ್ ಗೂಝಿ ವೀಕ್ಷಿಸಿದರು. ಅಲ್ಲದೆ, ಆರ್ಥೂರ್ ಜೈಲಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂಬ ಭಾರತದ ವಾದಕ್ಕೆ ಹೇಗೆಲ್ಲಾ ಪ್ರತಿ ವಾದ ಮಂಡಿಸಬೇಕು ಎಂಬ ಸಿದ್ಧತೆಯಲ್ಲಿ ನೀಮೋ ವಕೀಲರ ತೊಡಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ನೀರವ್ ಪರ ವಾದ ಮಂಡಿಸಿದ ಬ್ಯಾರಿಸ್ಟರ್ ಕ್ಲಾರೆ ಮೊಂಟ್‌ಗೊಮೆರಿ, ‘ಭಾರತದಲ್ಲಿ ನೀಮೋ ವಿಚಾರವನ್ನು ಈಗಾಗಲೇ ರಾಜಕೀಯಕರಣಗೊಳಿಸಲಾಗಿದ್ದು, ನೀಮೋರ ಖಂಡನೆ ಮತ್ತು ತಪ್ಪಿತಸ್ಥ ಎಂಬುದಾಗಿ ಬಿಂಬಿಸುವುದು ಭಾರತದ ರಾಜಕೀಯಕ್ಕೆ ಈಗ ಅನಿವಾರ್ಯವಾಗಿದೆ. ಹೀಗಾಗಿ, ಭಾರತದಲ್ಲಿ ನೀಮೋಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲ. ಜೊತೆಗೆ, ನೀಮೋ ಖಿನ್ನತೆಯಿಂದ ಬಳಲುತ್ತಿದ್ದು, ಅವರಿಗೆ ಅಗತ್ಯ ಚಿಕಿತ್ಸೆಯ ಅನಿವಾರ್ಯತೆಯಿದೆ. ಇಂಥ ಪರಿಸ್ಥಿತಿಯಲ್ಲಿ ನೀಮೋ ಭಾರತಕ್ಕೆ ಗಡೀಪಾರಾದರೆ, ಅವರು ಆತ್ಮಹತ್ಯೆಗೆ ಶರಣಾಗುವ ಆತಂಕವಿದೆ’ ಎಂದು ವಾದಿಸಿದರು.
