ನ್ಯೂಯಾರ್ಕ್(ಸೆ.06): 1969ರಿಂದ 1974ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದ ರಿಚರ್ಡ್‌ ನಿಕ್ಸನ್‌ ಅವರು ಭಾರತೀಯ ಮಹಿಳೆಯರ ಕುರಿತಾಗಿ ಕೀಳಾಗಿ ನೀಡಿದ್ದ ಹೇಳಿಕೆಗಳು ಇದೀಗ ಬಹಿರಂಗವಾಗಿವೆ. ನಿಕ್ಸನ್‌ ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್‌ ಅವರ ಜೊತೆ ನಡೆಸಿದ ಸಂಭಾಷಣೆಗಳ ರಹಸ್ಯ ದಾಖಲೆಯನ್ನು ಅಮೆರಿಕದ ಶ್ವೇತ ಭವನ ಬಿಡುಗಡೆ ಮಾಡಿದೆ.

1971ರಲ್ಲಿ ನಡೆದ ಈ ಸಂಭಾಷಣೆಯಲ್ಲಿ ಕರುಣಾಜನಕ ಸ್ಥಿತಿಯಲ್ಲಿರುವ ಭಾರತೀಯ ಮಹಿಳೆಯರು ವಾಕರಿಕೆ ತರಿಸುವಂತಿದ್ದಾರೆ. ಭಾರತೀಯ ಹೆಣ್ಣು ಮಕ್ಕಳು ಕಂಡರೆ, ಲೈಂಗಿಕ ಬಯಕೆಯೇ ಆಗಲ್ಲ. ಕಾಮೋದ್ವೇಗವೇ ಇಲ್ಲದಿರುವ ಮಹಿಳೆಯರು ನಪುಂಸಕರಂತೆ ಕಾಣುತ್ತಾರೆ ಎಂದೆಲ್ಲಾ ಭಾರತೀಯ ಹೆಣ್ಣು ಮಕ್ಕಳ ಬಗ್ಗೆ ನಿಕ್ಸನ್‌ ಅವಹೇಳನ ಮಾಡಿದ್ದಾರೆ. ಅಲ್ಲದೆ, ದೇಶದ ಮೊದಲ ಮಹಿಳಾ ಪ್ರಧಾನಿ ಹೆಗ್ಗಳಿಕೆಯ ಇಂದಿರಾ ಗಾಂಧಿ ಅವರ ಬಗ್ಗೆಯೂ ನಿಕ್ಸನ್‌ ತನ್ನ ನಾಲಗೆ ಹರಿಬಿಟ್ಟಿದ್ದು, ಇದೀಗ ಬಹಿರಂಗವಾಗಿದೆ.

ನಿಕ್ಸನ್‌ರ ಈ ಕೀಳು ಅಭಿರುಚಿಯ ಹೇಳಿಕೆಗಳ ಬಗ್ಗೆ ಹಲವು ಭಾರತೀಯರು ಮತ್ತು ಈ ಹಿಂದೆ ಅಮೆರಿಕದಲ್ಲಿ ಭಾರತೀಯ ರಾಯಭಾರಿಗಳಾಗಿದ್ದ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಆಗ ಕೇಳಿಬಂದಿದ್ದ ವಾಟರ್‌ಗೇಟ್‌ ಹಗರಣದಲ್ಲಿ ವಾಗ್ದಂಡನೆಗೆ ಗುರಿಯಾಗಿದ್ದ ರಿಚರ್ಡ್‌ ನಿಕ್ಸನ್‌ ಅವರು 1974ರಲ್ಲಿ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.