ಕಾಠ್ಮಂಡು(ಜು.15): ಶ್ರೀರಾಮ ಭಾರತೀಯನಲ್ಲ. ಆತ ವಾಸ್ತವವಾಗಿ ನೇಪಾಳ ಮೂಲದವ ಎಂಬ ನೇಪಾಳ ಪ್ರಧಾನಿ ಕೆ. ಪಿ ಶರ್ಮಾ ಓಲಿ ವಿವಾದಾತ್ಮಕ ಹೇಳಿಕೆಯು ನೇಪಾಳದಲ್ಲೇ ತೀವ್ರ ಟೀಕೆ ಮತ್ತು ವಿರೋಧಗಳಿಗೆ ತುತ್ತಾಗಿದೆ.

ಶ್ರೀರಾಮ ಜನ್ಮಸ್ಥಳದ ಕುರಿತ ಓಲಿ ಹೇಳಿಕೆಯು ಎಲ್ಲ ರೀತಿಯ ಮಿತಿಗಳನ್ನು ಉಲ್ಲಂಘಿಸಿದೆ ಎಂದು ನೇಪಾಳ ಮಾಜಿ ಪ್ರಧಾನಿ ಬಾಬುರಾಮ್‌ ಭಟ್ಟಾರಾಯ್‌ ಕಿಡಿಕಾರಿದ್ದಾರೆ. ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿದ ಬಾಬುರಾಮ್‌, ‘ಪ್ರಧಾನಿ ಓಲಿ ಅವರಿಂದ ಕಲಿಯುಗದ ಹೊಸ ರಾಮಾಯಣ ಕೇಳಲು ಕಾತರನಾಗಿದ್ದೇನೆ’ ಎಂದು ಪ್ರಧಾನಿಯ ಕಾಲೆಳೆದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ನೇಪಾಳದ ಕಮ್ಯುನಿಸ್ಟ್‌ ಪಕ್ಷದ ಹಿರಿಯ ಮುಖಂಡ ಬಾಮ್‌ ದೇವ ಗೌತಮ್‌, ‘ನೇಪಾಳ ಮತ್ತು ಭಾರತದಲ್ಲಿ ಶ್ರೀರಾಮನ ಭಕ್ತರು ಇದ್ದಾರೆ. ಇಂಥ ಹೇಳಿಕೆಗಳಿಂದ ಜನ ಸಾಮಾನ್ಯರ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ಯಾರೊಬ್ಬರು ಧಕ್ಕೆ ಮಾಡುವುದು ಸರಿಯಲ್ಲ. ಅಲ್ಲದೆ, ಯಾವುದೇ ಸಾಕ್ಷ್ಯಾಧಾರ ಹಾಗೂ ದಾಖಲೆಗಳಿಲ್ಲದೆ ನಿಜವಾದ ಅಯೋಧ್ಯೆ ಇರುವುದು ಭಾರತದಲ್ಲಲ್ಲ, ನೇಪಾಳದಲ್ಲಿ ಎಂಬ ಹೇಳಿಕೆಯನ್ನು ಹಿಂಪಡೆಯಬೇಕು. ಜೊತೆಗೆ, ಈ ಸಂಬಂಧ ಪ್ರಧಾನಿ ಕೆ.ಪಿ ಶರ್ಮಾ ಓಳಿ ಅವರು ಕ್ಷಮಾಪಣೆ ಕೋರಬೇಕು’ ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಓಲಿ ಹೇಳಿಕೆಗೆ ಭಾರತದಲ್ಲೂ ವಿಶ್ವಹಿಂದೂ ಪರಿಷತ್‌ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.