ಭಾರತ ತಮ್ಮ ಶೇ.50 ತೆರಿಗೆಗೂ ಬಗ್ಗದ ಕಾರಣ ಹತಾಶರಾಗಿರುವ ಅಮೆರಿಕದ ಅಧ್ಯಕ್ಷ ಟ್ರಂಪ್‌ರ ವ್ಯಾಪಾರ ಸಲಹೆಗಾರ ಪೀಟರ್ ನವರೋ, ‘ಭಾರತವು ಬ್ಲಡ್ ಮನಿ ನೀಡಿ ರಷ್ಯಾದಿಂದ ತೈಲ ಖರೀದಿಸುತ್ತಿದೆ’ ಎಂದಿದ್ದಾರೆ.
ವಾಷಿಂಗ್ಟನ್: ಭಾರತ ತಮ್ಮ ಶೇ.50 ತೆರಿಗೆಗೂ ಬಗ್ಗದ ಕಾರಣ ಹತಾಶರಾಗಿರುವ ಅಮೆರಿಕದ ಅಧ್ಯಕ್ಷ ಟ್ರಂಪ್‌ರ ವ್ಯಾಪಾರ ಸಲಹೆಗಾರ ಪೀಟರ್ ನವರೋ, ‘ಭಾರತವು ಬ್ಲಡ್ ಮನಿ ನೀಡಿ ರಷ್ಯಾದಿಂದ ತೈಲ ಖರೀದಿಸುತ್ತಿದೆ’ ಎಂದಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನವರೋ, ‘ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುವುದಕ್ಕೂ ಮುನ್ನ ಭಾರತ ರಷ್ಯಾದ ತೈಲವನ್ನು ಇಷ್ಟು ಪ್ರಮಾಣದಲ್ಲಿ ತರಿಸುತ್ತಿರಲಿಲ್ಲ. ಅಲ್ಲಿ(ಉಕ್ರೇನ್‌ನಲ್ಲಿ) ಜನ ಸಾಯುತ್ತಿದ್ದರೂ ಭಾರತ ಬ್ಲಡ್ ಮನಿ(ಕೊಲೆಯಾದವರ ಕಡೆಯವರಿಗೆ ಪರಿಹಾರವಾಗಿ ನೀಡುವ ಹಣ) ನೀಡಿ ತೈಲ ಖರೀದಿ ಮುಂದುವರೆಸಿದೆ’ ಎಂದು ಹೇಳಿದ್ದಾರೆ. ಅತ್ತ ಭಾರತದ ತೈಲ ಖರೀದಿ ಬಗ್ಗೆ ನವರೋ ಹೇಳಿಕೆ ಸುಳ್ಳು ಎಂದ ಎಕ್ಸ್ ಮೇಲೂ ಅವರು ಅಸಮಾಧಾನ ಹೊರಹಾಕಿದ್ದಾರೆ.
ದಿಢೀರ್ ಭಾರತದ ಕುರಿತು ಮೆತ್ತಗಾದ ಡೊನಾಲ್ಡ್ ಟ್ರಂಪ್!
ನ್ಯೂಯಾರ್ಕ್/ವಾಷಿಂಗ್ಟನ್ : ರಷ್ಯಾ ತೈಲ ಖರೀದಿ ವಿಷಯದಲ್ಲಿ ಹಾಗೂ ಶೇ.50 ಪ್ರತೀಕಾರ ತೆರಿಗೆ ಹೇರಿಕೆ ವಿಚಾರದಲ್ಲಿ ಕಳೆದ 3 ತಿಂಗಳಿನಿಂದ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಢೀರ್ ಮೆತ್ತಗಾಗಿದ್ದಾರೆ.
‘ನರೇಂದ್ರ ಮೋದಿ ಅವರೊಬ್ಬ ಅತ್ಯುತ್ತಮ ಪ್ರಧಾನಿ. ನಾನು ಯಾವತ್ತಿಗೂ ಅವರ ಗೆಳೆಯನಾಗಿಯೇ ಇರುತ್ತೇನೆ. ಭಾರತ ಮತ್ತು ಅಮೆರಿಕ ನಡುವೆ ವಿಶೇಷ ಬಾಂಧವ್ಯವಿದೆ. ಆ ಕುರಿತು ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕೆಲವೊಮ್ಮೆ ಎರಡೂ ದೇಶಗಳ ನಡುವೆ ಕೆಲ ಕ್ಷಣಗಳು ಬಂದು ಹೋಗುತ್ತವೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಶಾಂಘೈ ಶೃಂಗದಲ್ಲಿ ಭಾರತ- ರಷ್ಯಾ- ಚೀನಾ ಅಪರೂಪದ ಮೈತ್ರಿ ಜಾಗತಿಕ ಗಮನ ಸೆಳೆದ ಬೆನ್ನಲ್ಲೇ, ‘ಚೀನಾದಿಂದಾಗಿ ಭಾರತ ನಮ್ಮ ಕೈತಪ್ಪಿದಂತಿದೆ’ ಎಂಬ ಹೇಳಿಕೆ ಬೆನ್ನಲ್ಲೇ ಅವರೀಗ ಮೋದಿಯ ಬಗ್ಗೆ ಹಾಗೂ ತಮ್ಮಿಬ್ಬರ ನಡುವಣ ಸ್ನೇಹದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

