ವಾಷಿಂಗ್ಟನ್‌ (ಫೆ.20): ಮಂಗಳ ಗ್ರಹದಲ್ಲಿ ಹಿಂದೆ ಜೀವಿಗಳು ವಾಸಿಸುತ್ತಿದ್ದವೇ ಎಂಬುದನ್ನು ಪತ್ತೆಹಚ್ಚಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳುಹಿಸಿದ ‘ಪರ್ಸೀವರೆನ್ಸ್‌’ ರೋವರ್‌ (ರೋಬೋಟಿಕ್‌ ಯಂತ್ರ) ಯಶಸ್ವಿಯಾಗಿ ಕೆಂಪು ಗ್ರಹದ ಮೇಲೆ ಇಳಿದಿದೆ. ವಿಶೇಷವೆಂದರೆ, ಈ ರೋವರ್‌ ಅನ್ನು ಮಂಗಳನಲ್ಲಿ ಇಳಿಸುವ ಸಂಕೀರ್ಣ ಯೋಜನೆಯ ಸಾರಥ್ಯ ವಹಿಸಿದ್ದುದು ಬೆಂಗಳೂರು ಮೂಲದ ಡಾ

ಸ್ವಾತಿ ಮೋಹನ್‌ ಎಂಬ ಕನ್ನಡತಿ. ಇವರೇ ಶುಕ್ರವಾರ ಬೆಳಗಿನ ಜಾವ ‘ಪರ್ಸೀವರೆನ್ಸ್‌’ ರೋವರ್‌ ಯಶಸ್ವಿಯಾಗಿ ಮಂಗಳ ಗ್ರಹದ ಮೇಲೆ ಲ್ಯಾಂಡ್‌ ಆಗಿರುವುದನ್ನು ಪ್ರಕಟಿಸಿದರು.

2020ರ ಜುಲೈ 30ರಂದು ನಾಸಾ ಹಾರಿಬಿಟ್ಟಿದ್ದ ರಾಕೆಟ್‌ನಲ್ಲಿ ಪರ್ಸೀವರೆನ್ಸ್‌ ರೋವರ್‌ ಇತ್ತು. ಅದು 203 ದಿನಗಳ ಕಾಲ 47.2 ಕೋಟಿ ಕಿ.ಮೀ. ಕ್ರಮಿಸಿ ಈಗ ಮಂಗಳ ಗ್ರಹದ ಜೆಝೆರೋ ಕ್ರೇಟರ್‌ ಎಂಬ ಭಾಗದ ಮೇಲೆ ಇಳಿದಿದೆ. ಮುಂದಿನ ಒಂದೆರಡು ತಿಂಗಳ ಕಾಲ ಈ ರೋವರ್‌ನಲ್ಲಿರುವ ರೋಬೋಟಿಕ್‌ ಯಂತ್ರಗಳು ಮಂಗಳ ಗ್ರಹದ ಕಲ್ಲು-ಮಣ್ಣುಗಳನ್ನು ಕೆರೆದು, ಸಂಗ್ರಹಿಸಿ, ಅವುಗಳ ಹೈ ರೆಸಲ್ಯೂಷನ್‌ ಫೋಟೋ ತೆಗೆದು ಮಂಗಳ ಗ್ರಹದ ಮೇಲೆ ಯಾವತ್ತಾದರೂ ಜೀವಿಗಳು ನೆಲೆಸಿದ್ದವೇ ಎಂಬುದನ್ನು ಶೋಧಿಸಲಿವೆ.

ಮಂಗಳನ ಮೇಲೆ ನಾಸಾ ರೋವರ್‌ ಇಳಿಸಿದ್ದು ಬೆಂಗಳೂರಿನ ಸ್ವಾತಿ! ಬಿಂದಿ ಫೋಟೊ ವೈರಲ್ .

ನಂತರ ಇಲ್ಲಿ ಸಂಗ್ರಹಿಸಿದ ಕಲ್ಲು ಹಾಗೂ ಮಣ್ಣುಗಳನ್ನು ಭೂಮಿಗೂ ತರಲಾಗುತ್ತದೆ. ಅದು ಹೇಗೆ ಎಂಬುದರ ಗುಟ್ಟನ್ನು ನಾಸಾ ಇನ್ನೂ ಬಿಟ್ಟುಕೊಟ್ಟಿಲ್ಲ. ಅಂದಹಾಗೆ ಅಮೆರಿಕವು ಮಂಗಳ ಗ್ರಹದ ಮೇಲೆ ರೋವರ್‌ ಇಳಿಸುತ್ತಿರುವುದು ಇದೇ ಮೊದಲೇನೂ ಅಲ್ಲ. 1997ರಲ್ಲೇ ನಾಸಾ ಮಂಗಳ ಗ್ರಹಕ್ಕೆ ರೋವರ್‌ ಕಳುಹಿಸಿತ್ತು.

ವಿಜ್ಞಾನಿಗಳ ಊಹೆಯ ಪ್ರಕಾರ 350 ಲಕ್ಷ ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಜೆಝೆರೋ ಕ್ರೇಟರ್‌ನಲ್ಲಿ (ಸುಮಾರು 45 ಕಿ.ಮೀ. ಉದ್ದದ ಭಾಗ) ನದಿ ಹರಿಯುತ್ತಿತ್ತು. ಅಲ್ಲಿ ಜೀವಿಗಳು ವಾಸಿಸುತ್ತಿದ್ದವು. ನಂತರ ಅವು ನಶಿಸಿವೆ. ಈಗ ಅದನ್ನು ಸಾಕ್ಷ್ಯಸಮೇತ ಸಾಬೀತುಪಡಿಸಿದರೆ ಮುಂದೆ ಯಾವತ್ತಾದರೂ ಅನ್ಯಗ್ರಹದಲ್ಲಿ ಮನುಷ್ಯನ ವಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ಸಾಧ್ಯವೇ ಎಂಬುದರ ಬಗ್ಗೆ ಸಂಶೋಧನೆ ನಡೆಸಲು ಸಾಧ್ಯವಾಗುತ್ತದೆಯೆಂಬುದು ನಾಸಾದ ಯೋಚನೆಯಾಗಿದೆ.

‘ಪರ್ಸೀವರೆನ್ಸ್‌’ ವಿಶೇಷವೇನು?

1026 ಕೆ.ಜಿ. ತೂಕದ, ಒಂದು ಕಾರಿನ ಗಾತ್ರದ ರೋವರ್‌ ಇದು. ಇದರಲ್ಲಿ ‘ರೋಬೋಟಿಕ್‌ ಭೂಗರ್ಭಶಾಸ್ತ್ರಜ್ಞ ಹಾಗೂ ಅಂತರಿಕ್ಷ ಜೀವಶಾಸ್ತ್ರಜ್ಞ’ರಿದ್ದಾರೆ. ಇವರು ಮಂಗಳ ಗ್ರಹದ ನೆಲದ ಮೇಲೆ ಇಳಿದು, ಕಲ್ಲು-ಮಣ್ಣನ್ನು ಕೆದಕಿ, ಜೀವಾಣುಗಳಿಗಾಗಿ ಶೋಧ ನಡೆಸಲಿದ್ದಾರೆ. ಪರ್ಸೀವರೆನ್ಸ್‌ ಇಲ್ಲಿಯವರೆಗೆ ಅನ್ಯಗ್ರಹಕ್ಕೆ ಭೂಮಿಯಿಂದ ಕಳುಹಿಸಲಾದ ರೋವರ್‌ಗಳ ಪೈಕಿ ಅತ್ಯಾಧುನಿಕ ರೋವರ್‌ ಆಗಿದ್ದು, ಇದು ನಾಸಾಕ್ಕೆ ಮಂಗಳದ ಕಲ್ಲು ಮತ್ತು ಮಣ್ಣನ್ನು ಮರಳಿ ಕಳುಹಿಸುವ ಸಿದ್ಧತಾ ಕಾರ್ಯಗಳನ್ನೂ ನಡೆಸಲಿದೆ. ಈ ರೋವರ್‌ನಲ್ಲಿ ಹೈ ರೆಸಲ್ಯೂಷನ್‌ ಕ್ಯಾಮೆರಾಗಳು, ಮೈಕ್ರೋಫೋನ್‌, ನಾಸಾ ಜೊತೆ ಸಂಪರ್ಕ ಸಾಧಿಸುವ ರಿಮೋಟ್‌ ಸೆನ್ಸಿಂಗ್‌ ಉಪಕರಣಗಳಿವೆ.