22 ವರ್ಷಗಳ ಹಿಂದೆ ನಾಸಾ ಉಡಾವಣೆ ಮಾಡಿದ್ದ ನೀಲ್ ಗೆರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ದೂರದರ್ಶಕವು ಭೂಮಿಯತ್ತ ನುಗ್ಗಿ ಬರುತ್ತಿದೆ. ಇದು ಭೂಮಿಯ ವಾತಾವರಣ ಪ್ರವೇಶಿಸುವಾಗ ಸುಟ್ಟುಹೋಗುವ ಸಾಧ್ಯತೆಯಿದ್ದರೂ, ಇದರ ಕೆಲವು ಅವಶೇಷಗಳು ಬೆಂಗಳೂರು ಸೇರಿದಂತೆ ಭಾರತದ ಹಲವು ನಗರಗಳ ಮೇಲೆ ಬೀಳುವ ಆತಂಕವಿದೆ.

  • 22 ವರ್ಷದ ಹಿಂದೆ ನಾಸಾ ಹಾರಿಬಿಟ್ಟಿದ್ದ ನೀಲ್‌ ಗೆರೆಲ್ಸ್‌ ಸ್ವಿಫ್ಟ್‌ ಅಬ್ಸವೇಟರಿ ದೂರದರ್ಶಕ
  • ಗಾಮಾ ರೇ ಎಫೆಕ್ಟ್‌, ಬ್ಲಾಕ್‌ಹೋಲ್‌ ಕುರಿತ ಅಧ್ಯಯನಕ್ಕೆ ಹಾರಿಬಿಡಲಾಗಿದ್ದ ದೂರದರ್ಶಕ
  • 1500 ಕೆ.ಜಿ ತೂಕದ ಟೆಲಿಸ್ಕೋಪ್‌ ಬುಧವಾರ ಬೆಳಗಿನ ಜಾವ ಭೂಮಿ ವಾತಾವರಣಕ್ಕೆ
  • ಈ ವೇಳೆ ಭಾರೀ ಉಷ್ಣತೆಯ ಪರಿಣಾಮ ವಾತಾವರಣದಲ್ಲೇ ಸುಟ್ಟು ಬೂದಿಯಾಗುವ ಸಂಭವ
  • ಆದರೂ ಅದರ ಕೆಲವು ತುಣುಕುಗಳು ಭಾರತದ ಹಲವು ಪ್ರದೇಶಗಳ ಮೇಲೆ ಬೀಳುವ ಆತಂಕ
  • ಇಂಥ ಸಂಭವನೀಯ ಪ್ರದೇಶಗಳ ಪಟ್ಟಿಯಲ್ಲಿ ಬೆಂಗಳೂರು, ಹೈದ್ರಾಬಾದ್‌ ಮತ್ತಿತರೆ ನಗರ

ವಾಷಿಂಗ್ಟನ್‌ (ನ.4): 22 ವರ್ಷದ ಹಿಂದೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾರಿಸಿದ್ದ ನೀಲ್ ಗೆರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ(Neil Gehrels Swift Observatory) ದೂರದರ್ಶಕವು ಭೂಮಿಯತ್ತ ನುಗ್ಗಿ ಬರುತ್ತಿದ್ದು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಕೆಲ ರಾಜ್ಯಗಳ ಮೇಲೆ ಅದರ ಅವಶೇಷಗಳು ಬೀಳುವ ಆತಂಕ ಮನೆಮಾಡಿದೆ.

ನೀಲ್‌ ಗೆರೆಲ್ಸ್‌ ಸ್ವಿಫ್ಟ್‌ ಅಬ್ಸವೇಟರಿ ದೂರದರ್ಶಕ

ನಾಸಾದ ಪ್ರಕಾರ 1,500 ಕೆ.ಜಿ.ಯ ಈ ದೂರದರ್ಶಕವು ಬುಧವಾರ ಬೆಳಗಿನ ಜಾವ 3.30- ಮಧ್ಯಾಹ್ನ 2 ಗಂಟೆ ನಡುವೆ ಭೂಮಿಯ ವಾತಾವರಣ ಪ್ರವೇಶಿಸಲಿದ್ದು, ಭೂಕಕ್ಷೆ ಪ್ರವೇಶಕ್ಕೂ ಮೊದಲೇ ಅದು ಬಹುತೇಕ ಸುಟ್ಟುಹೋಗುವ ಸಾಧ್ಯತೆ ಇದೆ. ಆದರೂ ಕೆಲ ಚೂರುಗಳು ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಲ್ಲೆಲ್ಲಾದರೂ ಬೀಳಬಹುದು. ಅಥವಾ, ಆಫ್ರಿಕಾ, ಆಸ್ಟ್ರೇಲಿಯಾ, ಆಗ್ನೇಯ ಏಷ್ಯಾ, ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಾದರೂ ಪತನವಾಗಬಹುದು ಎನ್ನಲಾಗಿದೆ. ಇದು ನಿರ್ಧರಿತವಾಗುವುದು, ಟೆಲಿಸ್ಕೋಪ್‌ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಯಾವ ಭಾಗದಲ್ಲಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಕೆಲ ತಜ್ಞರ ಪ್ರಕಾರ, ದೂರದರ್ಶಕದ ಅವಶೇಷಗಳು ಸಮುದ್ರಕ್ಕೆ ಬೀಳಬಹುದು. ಗಾಮಾ ರೇ ಎಫೆಕ್ಟ್‌ ಮತ್ತು ಬ್ಲಾಕ್‌ಹೋಲ್‌ ಕುರಿತ ಅಧ್ಯಯನಕ್ಕಾಗಿ ಈ ದೂರದರ್ಶಕವನ್ನು ನಾಸಾ ಹಾರಿಬಿಟ್ಟಿತ್ತು.

ಇಸ್ರೋ ಮೌನವೇಕೆ?

ಅಂತರಿಕ್ಷಕ್ಕೆ ಉಡಾವಣೆಯಾದ ರಾಕೆಟ್‌ ಅಥವಾ ಉಪಗ್ರಹಗಳು ಪತನವಾಗುವುದು ನಿರೀಕ್ಷಿತವಾದ ಕಾರಣ, ಅವುಗಳ ಮೇಲೆ ಕಣ್ಣಿಡುವ ವ್ಯವಸ್ಥೆ ಇಸ್ರೋ ಬಳಿ ಇದೆ. ಆದರೆ ಇದೀಗ ನಾಸಾದ ದೂರದರ್ಶಕದ ಮೇಲೆ ಇಸ್ರೋ ನಿಗಾ ವಹಿಸಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ವಾತಾವರಣಕ್ಕೆ ಸಮೀಪಿಸುತ್ತಿರುವ ವಸ್ತುಗಳನ್ನು ಮೇಲ್ವಿಚಾರಣೆ ಮಾಡಲು ಭಾರತವು ತನ್ನದೇ ಆದ ಮೂಲಸೌಕರ್ಯವನ್ನು ಹೊಂದಿದೆ. ಶ್ರೀಹರಿಕೋಟಾದಲ್ಲಿರುವ ಇಸ್ರೋದ ಮಲ್ಟಿ-ಆಬ್ಜೆಕ್ಟ್ ಟ್ರ್ಯಾಕಿಂಗ್ ರಾಡಾರ್ (MOTR), ವಾತಾವರಣಕ್ಕೆ ಪ್ರವೇಶಿಸುವ ಮೊದಲು ಅವುಗಳ ಕೊನೆಯ ಕೆಲವು ಕಕ್ಷೆಗಳಲ್ಲಿ ರಾಕೆಟ್ ಬಾಡಿಗಳು ಮತ್ತು ಉಪಗ್ರಹಗಳು ಸೇರಿದಂತೆ ಬಾಹ್ಯಾಕಾಶ ವಸ್ತುಗಳನ್ನು ಟ್ರ್ಯಾಕ್ ಮಾಡುತ್ತದೆ. ಆದ್ರೂ ಇಲ್ಲಿವರೆಗೆ ಇಸ್ರೋ ಮೌನವಾಗಿರುವುದು ಅಚ್ಚರಿ ಮೂಡಿಸಿದೆ. ಟ್ರ್ಯಾಕ್ ಮಾಡುತ್ತಿದೆಯೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ನೀಲ್ ಗೆಹ್ರೆಲ್ಸ್ ಸಾಗರದಲ್ಲಿ ಇಳಿಯುತ್ತದೆ ಎಂದು ಕೆಲವು ತಜ್ಞರು ನಂಬುತ್ತಾರೆ.