* ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್‌-5 ಲಸಿಕೆ* ಸ್ಪುಟ್ನಿಕ್‌ನಿಂದ ಏಡ್ಸ್‌ ತಗುಲುವ ಭೀತಿ: 2 ದೇಶಗಳಲ್ಲಿ ನಿಷೇಧ

ಜೊಹಾನ್ಸ್‌ಬರ್ಗ್‌(ಅ.25): ರಷ್ಯಾ(Russia) ಅಭಿವೃದ್ಧಿಪಡಿಸಿದ ಸ್ಪುಟ್ನಿಕ್‌-5(Sputnik) ಲಸಿಕೆ ಪಡೆಯುವ ಪುರುಷರಲ್ಲಿ ಎಚ್‌ಐವಿ (Aids)) ಸೋಂಕು ತಗುಲುವ ಸಾಧ್ಯತೆ ಅಧಿಕವಿದೆ ಎಂಬ ಕಾರಣ ನೀಡಿ, ನಮೀಬಿಯಾ ಸರ್ಕಾರ ಲಸಿಕೆಯ ಮೇಲೆ ನಿಷೇಧ ಹೇರಿದೆ. ಇದೇ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ(South Africa) ಇದುವರೆಗೂ ಸ್ಪುಟ್ನಿಕ್‌ ಲಸಿಕೆಗೆ ಮಾನ್ಯತೆ ನೀಡಿಲ್ಲ. ಹೀಗಾಗಿ ಆಫ್ರಿಕಾದ ವರದಿಯನ್ನೇ ಆಧರಿಸಿ ಇದೀಗ ನಮೀಬಿಯಾ ಕೂಡಾ ಇಂಥ ಘೋಷಣೆ ಮಾಡಿದೆ.

ಆತಂಕಕ್ಕೆ ಕಾರಣವೇನು?:

ಸ್ಪುಟ್ನಿಕ್‌ ಲಸಿಕೆಯಲ್ಲಿ, ಸೋಂಕಿನ ವಿರುದ್ಧ ಹೋರಾಡಲು ದೇಹವನ್ನು ಸಜ್ಜುಗೊಳಿಸಲು ಅಗತ್ಯವಾದ ಸ್ಪೈಕ್‌ ಪ್ರೋಟೀನ್‌ಗಳನ್ನು(Protein) ರವಾನಿಸಲು ಅಡೆನೋವೈರಸ್‌ ಎಂಬ ದುರ್ಬಲಗೊಳಿಸಿದ ವೈರಸ್‌ ಅನ್ನು ವಾಹಕದ ರೂಪದಲ್ಲಿ ಬಳಸಲಾಗಿದೆ. ಈ ಅಡೆನೋವೈರಸ್‌, ಪುರುಷರಲ್ಲಿ ಎಚ್‌ಐವಿ ಸೋಂಕು ತಗಲುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ಅಧ್ಯಯನ ಪೂರ್ಣಗೊಳಿಸಲು ವಿಫಲವಾದ ಎರಡು ಅಧ್ಯಯನಗಳ ವೇಳೆ ಕಂಡುಬಂದಿತ್ತು.

ಇದರ ಆಧಾರದಲ್ಲೇ ಆಫ್ರಿಕಾ ಸರ್ಕಾರ ಸ್ಪುಟ್ನಿಕ್‌ಗೆ ಮಾನ್ಯತೆ ನೀಡಲು ನಿರಾಕರಿಸದೆ. ಆದರೆ ತಮ್ಮ ಲಸಿಕೆ(vaccine) ನೀಡಿಕೆಯನ್ನು ನಿಷೇಧಿಸುತ್ತಿರುವ ನಮೀಬಿಯಾ ಆರೋಗ್ಯ ಇಲಾಖೆ ನಿರ್ಧಾರ ವೈಜ್ಞಾನಿಕವಾಗಿಲ್ಲ ಎಂದು ಸ್ಪುಟ್ನಿಕ್‌ ಲಸಿಕೆ ಉತ್ಪಾದಕ ಸಂಸ್ಥೆ ಗಮಲೇಯಾ ಸಂಶೋಧನಾ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.

ರಷ್ಯಾದ ಸ್ಪುಟ್ನಿಕ್‌ ಲಸಿಕೆ ಖರೀದಿ ಆರ್ಡರ್‌ ರದ್ದು ಖಾಸಗಿ ಆಸ್ಪತ್ರೆ ನಿರ್ಧಾರ

ಸರ್ಕಾರ ಉಚಿತವಾಗಿ ವಿತರಿಸುವ ಕೋವಿಡ್‌ ಲಸಿಕೆ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ರಷ್ಯಾ ಮೂಲದ ಸ್ಪುಟ್ನಿಕ್‌ ಲಸಿಕೆ ಖರೀದಿಗೆ ಬಹುತೇಕ ಖಾಸಗಿ ಆಸ್ಪತ್ರೆಗಳು ಬ್ರೇಕ್‌ ಹಾಕಿವೆ. ಅಷ್ಟುಮಾತ್ರವಲ್ಲ, ಈಗಾಗಲೇ ನೀಡಿದ್ದ ಖರೀದಿ ಆದೇಶವನ್ನೂ ರದ್ದು ಪಡಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಬೇಡಿಕೆ ಇದ್ದಾಗ ಅಗತ್ಯ ಪ್ರಮಾಣದ ಸ್ಪುಟ್ನಿಕ್‌ ಪೂರೈಕೆ ಆಗಿರಲಿಲ್ಲ. ಇದೀಗ ಪೂರೈಕೆ ಆರಂಭವಾಗುತ್ತಿದ್ದರೆ, ಅತ್ತ ಸರ್ಕಾರ ಉಚಿತವಾಗಿ ನೀಡುವ ಲಸಿಕೆ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಜನರು ಉಚಿತ ಲಸಿಕೆ ಪಡೆಯಲು ಮುಂದಾಗುತ್ತಿರುವ ಖಾಸಗಿ ಆಸ್ಪತ್ರೆಗಳತ್ತ ಜನರು ಸುಳಿಯದೇ ಇರುವುದಕ್ಕೆ ಮುಖ್ಯ ಕಾರಣವಾಗಿ ಹೊರಹೊಮ್ಮಿದೆ.

ಮತ್ತೊಂದೆಡೆ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ಗೆ ಹೋಲಿಸಿದರೆ ಸ್ಪುಟ್ನಿಕ್‌ ಲಸಿಕೆ ಸಂಗ್ರಹ ಪ್ರಕ್ರಿಯೆಯೂ ಅತ್ಯಂತ ಕ್ಲಿಷ್ಟಕರ. ಕಾರಣ ಅತ್ಯಂತ ಕಡಿಮೆ ತಾಪಮಾನದಲ್ಲಿ ಅದನ್ನು ಸಂಗ್ರಹಿಸಿ ಇಡಬೇಕಾಗುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಸ್ಪುಟ್ನಿಕ್‌ ಖರೀದಿಗೆ ಹಿಂದೇಟು ಹಾಕುತ್ತಿವೆ.

ಇದುವರೆಗೆ ದೇಶದಲ್ಲಿ 86 ಕೋಟಿ ಡೋಸ್‌ನಷ್ಟುಲಸಿಕೆ ವಿತರಿಸಲಾಗಿದೆ. ಆದರೆ ಈ ಪೈಕಿ ಖಾಸಗಿ ಆಸ್ಪತ್ರೆಗಳ ಪಾಲು ಕೇವಲ ಶೇ.6ರಷ್ಟಿದೆ. ಲಸಿಕೆಗೆ ದುಬಾರಿ ದರ ಇರುವ ಕಾರಣ, ಬಹುತೇಕ ಜನರು ಸರ್ಕಾರ ನೀಡುವ ಉಚಿತ ಲಸಿಕೆಯತ್ತಲೇ ಒಲವು ತೋರುತ್ತಿದ್ದಾರೆ.