*   ದೇಶಾದ್ಯಂತ ಹಿಂಸಾಚಾರ, 200 ಜನಕ್ಕೆ ಗಾಯ*   ರಾಜಕಾರಣಿಗಳ ಮನೆಗೆ ಬೆಂಕಿ: ಕರ್ಫ್ಯೂ ಜಾರಿ*  ಸರ್ಕಾರದ ವಿರುದ್ಧ ಆಕ್ರೋಶ ತಣ್ಣಗಾಗಿಸಲು ಪ್ರಧಾನಿ ರಾಜೀನಾಮೆ 

ಕೊಲೊಂಬೋ(ಮೇ.10): ತೀವ್ರ ಆರ್ಥಿಕ(Economic Crisis) ಬಿಕ್ಕಟ್ಟಿನಿಂದಾಗಿ ಹಲವು ತಿಂಗಳಿನಿಂದ ಸರಣಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ(Sri Lanka) ಸೋಮವಾರ ಭಾರೀ ಹಿಂಸಾಚಾರ ಭುಗಿಲೆದ್ದಿದೆ. ಘಟನೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದ ಸೇರಿ ಮೂವರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಡಳಿತಾರೂಢ ಪಕ್ಷದ ಹಲವು ನಾಯಕರ ಮನೆ, ಕಚೇರಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ದೇಶಾದ್ಯಂತ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ದೇಶಾದ್ಯಂತ ಜಾರಿಯಲ್ಲಿರುವ ತುರ್ತುಪರಿಸ್ಥಿತಿ ಜೊತೆಗೆ ಕರ್ಫ್ಯೂ ಹೇರಲಾಗಿದೆ. ಇದೆಲ್ಲದರ ನಡುವೆಯೇ ದೇಶದ ಹಾಲಿ ಪರಿಸ್ಥಿತಿಗೆ ಕಾರಣಕರ್ತ ಎಂಬ ಟೀಕೆಗೆ ಗುರಿಯಾಗಿದ್ದ ಪ್ರಧಾನಿ ಮಹಿಂದ ರಾಜಪಕ್ಸೆ(Mahinda Rajapaksa) ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಶ್ರೀಲಂಕಾದಲ್ಲಿ ಮಧ್ಯರಾತ್ರಿಯಿಂದಲೇ ಮತ್ತೆ ತುರ್ತು ಪರಿಸ್ಥಿತಿ ಜಾರಿ!

ಪ್ರಧಾನಿ ಬೆಂಬಲಿಗರಿಂದ ದಾಳಿ:

ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಸೋಮವಾರ ಕೊಲಂಬೋ(Colomb) ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾರ್ವಜನಿಕರು ಶಾಂತಿಯುತ ಪ್ರತಿಭಟನೆ(Potest) ನಡೆಸುತ್ತಿದ್ದರು. ಈ ವೇಳೆ ಪ್ರಧಾನಿ ಮಹಿಂದಾ ಅವರ ಬೆಂಬಲಿಗರ ಗುಂಪು ಕೊಲಂಬೋದಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಸುದ್ದಿ ಕೆಲವೇ ಹೊತ್ತಿನಲ್ಲಿ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿದ ಪರಿಣಾಮ ಎಲ್ಲೆಡೆ ಹಿಂಸಾಚಾರ ಭುಗಿಲೆದ್ದಿತು.

ಸರ್ಕಾರ ವಿರೋಧಿ ಪ್ರತಿಭಟನಾಕಾರರು, ಅಡಳಿತಾರೂಢ ಪಕ್ಷದ ಸಂಸದರು, ಸಚಿವರು, ನಾಯಕರ ಮೇಲೆ, ಅವರಿಗೆ ಸೇರಿದ ಕಟ್ಟಡ, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡರು.

ಸಂಸದ ಸೇರಿ ಮೂವರ ಬಲಿ:

ಈ ನಡುವೆ ನಿಟ್ಟಂಬುವಾ ನಗರದಲ್ಲಿ ‘ಶ್ರೀಲಂಕಾ ಪೊಡುಜನ ಪೆರುಮುನ’ ಪಕ್ಷದ ಸಂಸದ ಅಮರಕೀರ್ತಿ ಅಥುಕೊರಾಲಾ (57) ಸೇರಿ ಮೂವರ ಶವ ಪತ್ತೆಯಾಗಿದೆ. ಅಮರಕೀರ್ತಿ ಪ್ರಯಾಣಿಸುತ್ತಿದ್ದ ಕಾರನ್ನು ಸಾವಿರಾರು ಪ್ರತಿಭಟನಾಕಾರರು ಸುತ್ತುವರೆದು ಕಾರನ್ನು ಬುಡಮೇಲು ಮಾಡಿದ್ದಾರೆ. ಈ ವೇಳೆ ಸಂಸದ ಅಮರಕೀರ್ತಿ ಸ್ಥಳದಿಂದ ಪರಾರಿಯಾಗಿ ಸಮೀಪದ ಕಟ್ಟಡವೊಂದಕ್ಕೆ ಹೋಗಿ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಬಳಿಕ ಘಟನಾ ಸ್ಥಳದಲ್ಲಿ ಅವರ ಬಾಡಿಗಾರ್ಡ್‌ ಹಾಗೂ ಮತ್ತೊಬ್ಬ ಯುವಕನ ಶವ ಕೂಡಾ ಪತ್ತೆಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆದರೆ ಅಮರಕೀರ್ತಿ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿ ಸಾವನ್ನಪ್ಪಿದರೋ ಎಂಬುದು ಖಚಿತಪಟ್ಟಿಲ್ಲ.

Sri Lanka Crisis ಲಂಕಾದ ರಾಜಪಕ್ಸೆ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ, ಅವಿಶ್ವಾಸ ಮಂಡನೆ

ಪ್ರಧಾನಿ ಮಹಿಂದಾ ರಾಜೀನಾಮೆ:

ಇದೆಲ್ಲದರ ನಡುವೆಯೇ, ತಮ್ಮ ಬೆಂಬಲಿಗರು ತೀವ್ರ ಹಿಂಸಾಚಾರ ನಡೆಸಿದ ಬೆನ್ನಲ್ಲೇ ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಈ ಮೂಲಕ ಸರ್ಕಾರದ ವಿರುದ್ಧ ಭುಗಿಲೆದ್ದಿರುವ ಆಕ್ರೋಶ ತಣ್ಣಗಾಗಿಸುವ ಯತ್ನ ಮಾಡಿದ್ದಾರೆ. ಮಹಿಂದಾ ಜೊತೆಗೆ ಅವರ ಸಂಪುಟದ ಇನ್ನಿಬ್ಬರು ಸಚಿವರು ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.

ಏಕೆ ಹಿಂಸಾಚಾರ?

- ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಕುಸಿತದಿಂದ ಜನರಿಗೆ ಸಂಕಷ್ಟ
- ದೇಶದಲ್ಲಿ ತುರ್ತುಸ್ಥಿತಿ ಜಾರಿ, ಸರ್ಕಾರದ ವಿರುದ್ಧ ಪ್ರತಿಭಟನೆ
- ಪ್ರತಿಭಟನಾಕಾರರ ಮೇಲೆ ಪ್ರಧಾನಿ ಬೆಂಬಲಿಗರಿಂದ ದಾಳಿ
- ದೇಶಾದ್ಯಂತ ತೀವ್ರ ಹಿಂಸಾಚಾರ, ಸಂಸದ ಸೇರಿ 3 ಜನ ಸಾವು
- ಸರ್ಕಾರದ ವಿರುದ್ಧ ಆಕ್ರೋಶ ತಣ್ಣಗಾಗಿಸಲು ಪ್ರಧಾನಿ ರಾಜೀನಾಮೆ