ಮನೆಯಲ್ಲಿ ಹೆಚ್ಚಾದ ಜಿರಳೆ ಕೊಲ್ಲಲು ಗೃಹಣಿ ಕಸರತ್ತು, ಆದರೆ ಸತ್ತಿದ್ದು ಪಕ್ಕದ ಮನೆಯ ಮಹಿಳೆ, ಈ ಘಟನೆಯಲ್ಲಿ 8 ಮಂದಿ ಅಸ್ವಸ್ಥಗೊಂಡಿದ್ದಾರೆ. 2 ತಿಂಗಳ ಮಗುವಿನ ತಾಯಿ ಮೃತಪಟ್ಟಿದ್ದಾರೆ. ಇದೀಗ ಪೊಲೀಸರು ಗೃಹಿಣಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಯೋಲ್ (ಅ.21) ನಗರ ಪ್ರದೇಶಗಳಲ್ಲಿ ಮನೆಯಲ್ಲಿ ಜಿರೆಳೆ ಕಾಟ ವಿಪರೀತ. ಇನ್ನು ಹಳ್ಳಿಗಳಲ್ಲ ಇಲ್ಲ ಎಂದಲ್ಲ. ಮನೆಯಲ್ಲಿ ಒಂದು ಜಿರೆಳೆ ಸೇರಿಕೊಂಡರೆ ಬಳಿಕ ಲೆಕ್ಕವಿಲ್ಲದಷ್ಟು ಜಿರಳೆಗಳು ಹುಟ್ಟಿಕೊಳ್ಳುತ್ತದೆ. ಮನೆಯ ವಸ್ತುಗಳು, ಆಹಾರ, ಬಟ್ಟೆ ಎಲ್ಲವೂ ಹಾಳಾಗುತ್ತದೆ. ಒಮ್ಮೆ ಜಿರಳೆ ಸಂಖ್ಯೆ ಹೆಚ್ಚಾದರೆ ಬಳಿಕ ನಿಯಂತ್ರಿಸುವುದು ಕಷ್ಟ. ಹೀಗೆ ಮನೆಯಲ್ಲಿ ಹೆಚ್ಚಾಗಿರುವ ಜಿರೆಳೆಯನ್ನು ಕೊಲ್ಲಲು ಗೃಹಿಣಿ ಪ್ಲಾನ್ ಮಾಡಿದ್ದಾಳೆ. ಆದರೆ ಈಕೆಯ ಪ್ಲಾನ್‌ಗೆ ಸತ್ತಿದ್ದು ಜಿರೆಳೆ ಅಲ್ಲ, ಪಕ್ಕದ ಮನೆಯ ಮಹಿಳೆ ಬಲಿಯಾದ ಘಟನೆ ಸೌತ್ ಕೊರಿಯಾದಲ್ಲಿ ನಡೆದಿದೆ.

ಜಿರಳೆ ಬದಲು ಪಕ್ಕದ ಮನೆ ಮಹಿಳೆ ಮೃತಪಟ್ಟಿದ್ದು ಹೇಗೆ?

ಒಸಾನ್ ನಗರದ ಅಪಾರ್ಟ್‌ಮೆಂಟ್ ಒಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದ ಮಹಿಳೆ ಎಂದಿನಂತೆ ಬೆಳಗ್ಗೆ ಮನೆ ಕ್ಲೀನ್ ಮಾಡಿದ್ದಾಳೆ. ಪ್ರತಿ ದಿನ ಮನೆ ಕ್ಲೀನ್ ಮಾಡುವಾಗ ಜೆರಳೆಗಳು ಸಿಗುತ್ತಿತ್ತು. ಆದರೆ ಬರಬರುತ್ತಾ ಜಿರಳೆ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಇಂದು ಜಿರಳೆಗೆ ಒಂದು ಗತಿ ಕಾಣಿಸಬೇಕು. ನಾಳೆಯಿಂದ ಮನೆಯಲ್ಲಿ ಜಿರೆಳೆ ಇರಬಾರದು ಎಂದು ದೃಢ ನಿರ್ಧಾರ ಮಾಡಿದ್ದಾರೆ. ಇದಕ್ಕೂ ಮೊದಲು ಜಿರಳೆ ನಾಶ ಮಾಡಲು ಪೇಸ್ಟ್, ಸ್ಪ್ರೇ ಸೇರಿದಂತೆ ಹಲವು ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಹೀಗಾಗಿ ಮಹಿಳೆ ಬೆಂಕಿ ಮೂಲಕ ಮನೆಯ ಜಿರಳೆಗೆ ಅಂತ್ಯಕಾಣಿಸಲು ಮುಂದಾಗಿದ್ದಾಳೆ.

ಅಗ್ನಿ ಸ್ಪ್ರೇ ಬಳಸಿದ ಮಹಿಳೆ

ಮನೆಯ ಎಲ್ಲಾ ಮೂಲೆ ಮೂಲೆ, ಅಡುಗೆ ಕೋಣೆ, ಬೆಡ್ ರೂಂ ಸೇರಿದಂತೆ ಎಲ್ಲೆಡೆ ಬೆಂಕಿಯ ಸ್ಪ್ರೇ ಬಳಸಿದ್ದಾರೆ. ಎಲ್ಲಾ ಕಡೆ ಈ ರೀತಿ ಬೆಂಕಿ ಬಳಸಿದ್ದಾರೆ. ಜೆರಳೆ ಒಡುತ್ತಿದ್ದಂತೆ ಅದರ ಹಿಂದೆ ಓಡೋಡಿ ಬೆಂಕಿ ಸ್ಪ್ರೇ ಹಾಕಿದ್ದಾರೆ. ಪರಿಣಾಮ ಕೆಲವೇ ಹೊತ್ತಲ್ಲೇ ಮನೆಯ ಒಂದೊಂದು ಮೂಲೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಆದರೆ ಈ ಮಹಿಳೆ ಜಿರಳೆ ಓಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ಇತ್ತ ಮನೆಯಲ್ಲಿ ಬೆಂಕಿ ವ್ಯಾಪಿಸಿದೆ. ಪರಿಣಾಮ ಮಹಿಳೆ ಮನೆಯಿಂದ ಹೊರಗೆ ಓಡಿದ್ದಾಳೆ.

5ನೇ ಮಹಡಿಯಲ್ಲಿದ್ದ ಮಹಿಳೆ ಸಾವು

ಜಿರೆಳೆಗೆ ಹಾಕಿದ ಬೆಂಕಿ ಮನೆಯನ್ನೇ ಸುಟ್ಟಿತ್ತು. ಇದರ ದಟ್ಟ ಹೊಗೆ 5ನೇ ಮಹಡಿಯಲ್ಲಿದ್ದ ಮನೆಗೆ ಹೊಕ್ಕಿತ್ತು. ಪತಿ ಹಾಗೂ ತನ್ನ 2 ತಿಂಗಳ ಕಂದನ ಜೊತೆಗಿದ್ದ ಮಹಿಳೆ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಿರುಚಾಡಿದ್ದಾಳೆ. ಹೊಗೆ ಆವರಿಸಿಕೊಳ್ಳುತ್ತಿದ್ದಂತೆ ದಂಪತಿಗಳು ಮಗುವನ್ನುಬಾಲ್ಕನಿ ಮೂಲಕ ಪಕ್ಕದ ಫ್ಲ್ಯಾಟ್‌ಗೆ ನೀಡಿದ್ದಾರೆ. ಬಳಿಕ ಪತಿ ಬಾಲ್ಕನಿಯ ಕಿಟಕಿ ಮೂಲಕ ಪಕ್ಕದ ಫ್ಲ್ಯಾಟ್‌ಗೆ ತೆರಳಿ ಬಾಲ್ಕನಿ ಗ್ರಿಲ್ ಹಿಡಿದು ಪತ್ನಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪತ್ನಿ ಗಾಬರಿಗೊಂಡ ಕಾರಣ ಕೆಳಕ್ಕೆ ಬಿದ್ದಿದ್ದಾರೆ.

ತೀವ್ರಗಾಯಗೊಂಡ ಮಹಿಳೆ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ

ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಮಹಿಳೆ ಮೃತಪಟ್ಟಿದ್ದಾರೆ. 2 ತಿಂಗಳ ಕಂದ ತಾಯಿಯನ್ನು ಕಳೆದುಕೊಂಡಿದೆ. ಇತ್ತ ಮಗುವಿನ ಆಗಮನದ ಖುಷಿಯಲ್ಲಿದ್ದ ಕುಟುಂಬದಲ್ಲಿ ಇದೀಗ ದುಃಖ ಮಡುಗಟ್ಟಿದೆ.

ಜಿರಳೆ ಓಡಿಸಿದ ಮಹಿಳೆ ನಾಪತ್ತೆ

ಮನೆ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೊರಗೆ ಓಡಿ ಬಂದ ಮಹಿಳೆ ಕೂಗಿಕೊಂಡಿದ್ದಾಳೆ. ಇತ್ತ ಅಪಾರ್ಟ್‌ಮೆಂಟ್ ಸಿಬ್ಬಂದಿಗಳು, ಬೇರೆ ನಿವಾಸಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 2 ತಿಂಗಳ ಮಗುವಿನ ತಾಯಿ ಬಿದ್ದು ಗಾಯಗೊಳ್ಳುತ್ತಿದ್ದಂತೆ ಜಿರಳೆ ಓಡಿಸಿದ ಮಹಿಳೆ ನಾಪತ್ತೆಯಾಗಿದ್ದಾಳೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.