* ಮೊದಲ ಹಂತದ ಯುದ್ಧ ಮುಕ್ತಾಯ ಎಂದಿದ್ದು ಇದೇ ಕಾರಣಕ್ಕೆ?* ಮರುದಾಳಿ ಸಂಘಟನೆಗೆ ರಷ್ಯಾ ಹೊಸ ಪ್ಲ್ಯಾನ್‌?

ವಾಷಿಂಗ್ಟನ್‌(ಮಾ.27): ಉಕ್ರೇನ್‌ ರಾಜಧಾನಿ ಕೀವ್‌ ಮೇಲೆ ಕಣ್ಣಿಟ್ಟು ನಿರಂತರ ದಾಳಿ ನಡೆಸುತ್ತಿದ್ದ ರಷ್ಯಾ ಸದ್ಯ ತನ್ನ ಗುರಿಯನ್ನು ಬದಲಾಯಿಸಿದಂತಿದೆ. ಕೀವ್‌ ಬದಲಿಗೆ ದೇಶದ ಪೂರ್ವದಲ್ಲಿರುವ ಕೈಗಾರಿಕಾ ಪ್ರದೇಶ ಡೋನ್‌ಬಾಸ್‌ ಸ್ವತಂತ್ರಕ್ಕೆ ಕರೆ ನೀಡುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಇದು ಯುದ್ಧದ ಅಂತ್ಯ ಅಂತೂ ಅಲ್ಲ. ರಷ್ಯಾ ಪಡೆಗಳು ಉಕ್ರೇನಿನ ಮೇಲೆ ಯೋಜಿತವಾಗಿ ಹಂತ ಹಂತವಾಗಿ ಮರುದಾಳಿ ನಡೆಸಲು ನಡೆಸುತ್ತಿರುವ ಪೂರ್ವಸಿದ್ಧತೆ ಇರಬಹುದು. ಆರಂಭಿಕ ವೈಫಲ್ಯಗಳಿಂದ ಸೇನೆಯನ್ನು ಮರುಸಂಘಟಿಸುವ ಉದ್ದೇಶದಿಂದ ಡೋನ್‌ಬಾಸ್‌ನಿಂದ ಹೊಸದಾಗಿ ಯುದ್ಧ ಆರಂಭಿಸಬಹುದು’ ಎಂದು ಅಮೆರಿಕದ ವಿಶ್ಲೇಷಕರೊಬ್ಬರು ಅಂದಾಜಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾದ ಜನರಲ್‌ ಸ್ಟಾಫ್‌ ಉಪ ಮುಖ್ಯಸ್ಥ ಕ| ಜ| ಸೆರ್ಗೆಯ… ರುಡುಸ್ಕೋಯ…, ‘ಉಕ್ರೇನಲ್ಲಿ ರಷ್ಯಾ ನಡೆಸಿದ ಮೊದಲ ಹಂತದ ಮಿಲಿಟರಿ ಕಾರಾರ‍ಯಚರಣೆಯ ಉದ್ದೇಶಗಳು ಈಡೇರಿವೆ. ರಷ್ಯಾ ಪಡೆಗಳು ಉಕ್ರೇನಿನ ಮಿಲಿಟರಿ ಶಕ್ತಿಯನ್ನು ಗಣನೀಯವಾಗಿ ಕುಗ್ಗಿಸಿವೆ. ಹೀಗಾಗಿ ರಷ್ಯಾದ ಪಡೆಗಳು ಡೋನ್‌ಬಾಸ್‌ ವಿಮೋಚನೆಯಂಥ ತಮ್ಮ ಮುಖ್ಯ ಗುರಿಯನ್ನು ಸಾಧಿಸುವತ್ತ ಗಮನ ನೀಡುತ್ತಿವೆ’ ಎಂದು ಹೇಳಿದ್ದಾರೆ. ಅಲ್ಲದೆ ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಜೆಲೆನ್‌ಸ್ಕಿ ಅವರು ಮತ್ತೊಮ್ಮೆ ಸಂಧಾನ ಸಭೆಯ ಮಾತನಾಡಿದ್ದಾರೆ. ಆದರೆ ಉಕ್ರೇನಿನ ಯಾವುದೇ ಭೂಭಾಗವನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲದ ಕಾರಣ. ಹೀಗಾಗಿ ಮಾತುಕತೆ ಅದು ಮತ್ತೆ ವಿಫಲವಾಗಿದೆ ಎಂದು ತಿಳಿಸಿದರು.

ಉಕ್ರೇನ್‌ ಜೊತೆ ನಾವಿದ್ದೇವೆ: ಬೈಡೆನ್‌

 ರಷ್ಯಾ ತನ್ನ ನಿರಂತರ ದಾಳಿ ಮುಂದುವರೆÜಸಿರುವುದರಿಂದ ರಷ್ಯಾ ವಿರುದ್ಧ ದೀರ್ಘ ಹೋರಾಟಕ್ಕೆ ಉಕ್ರೇನ್‌ ಸಿದ್ಧವಾಗಬೇಕು. ಇದಕ್ಕಾಗಿ ಉಕ್ರೇನ್‌ ಜೊತೆ ಅಮೆರಿಕ ನಿಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಿಸಿದ್ದಾರೆ. ಪೋಲೆಂಡ್‌ಗೆ ಭೇಟಿ ವೇಳೆ ಬೈಡೆನ್‌, ‘ರಷ್ಯಾ ಮತ್ತು ಉಕ್ರೇನ್‌ ಯುದ್ಧ ದಿನಗಳು ಅಥವಾ ತಿಂಗಳುಗಳಲ್ಲಿ ಮುಗಿಯುವುದಿಲ್ಲ. ಹಾಗಾಗಿ ಮುಂಬರುವ ದೀರ್ಘ ಹೋರಾಟಕ್ಕೆ ನಾವು ಅಣಿಯಾಗಬೇಕು. ಉಕ್ರೇನ್‌ ಜನರು ತಮ್ಮ ದೇಶವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಈ ಸಮಯದಲ್ಲಿ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಶೀತಲ ಸಮರದೊಂದಿಗೆ ಪ್ರಜಾಪ್ರಭುತ್ವದ ಯುದ್ಧ ಕೊನೆಗೊಂಡಿಲ್ಲ. ನಿರಂಕುಶ ಶಕ್ತಿಗಳು ಕಳೆದ ದಶಕಗಳಲ್ಲಿ ಪುನರುಜ್ಜೀವನಗೊಂಡಿವೆ. ರಷ್ಯಾ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ’ ಎಂದು ಅವರು ಹೇಳಿದರು.

ಇದೇ ವೇಳೆ ರಷ್ಯಾ ಅಧ್ಯಕ್ಷ ಪುಟಿನ್‌ ವಿರುದ್ಧವೂ ಕೆಂಡಕಾರಿದ ಬೈಡೆನ್‌, ‘ಈ ವ್ಯಕ್ತಿಯನ್ನು ಹೀಗೆ ಅಧಿಕಾರದಲ್ಲಿ ಮುಂದುವರೆಯಲು ಬಿಡಲಾಗದು. ಅವರನ್ನು ಕಿತ್ತೊಗೆಯಲೇಬೇಕು’ ಎಂದು ಕರೆ ನೀಡಿದ್ದಾರೆ.