ನ್ಯೂಯಾರ್ಕ್(ಡಿ.21): ಕೊರೋನಾ ವಿಚಾರದಲ್ಲಿ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೇಸ್‌ಗಳು ಅಮೆರಿಕದಲ್ಲಿ ದಾಖಲಾಗುತ್ತಿವೆ. ಈ ನಡುವೆ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಹೀಗಿದ್ದರೂ ಕೊರೋನಾ ಮಾತ್ರ ನಿಯಂತ್ರಣ ಮೀರಿದೆ. ಇನ್ನು ನ್ಯೂಯಾರ್ಕ್‌ನಲ್ಲಿ ವರದಿಯಾಗುತ್ತಿರುವ ಪ್ರಕರಣಗಳು ಜನರನ್ನು ಬೆಚ್ಚಿ ಬೀಳಿಸಿವೆ. ಲಾಕ್‌ಡೌನ್‌ನಿಂದ ಅನೇಕ ಮಂದಿ ನಿರಾಶ್ರತಿತರಾಗಿದ್ದರೆ, ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದರೆ, ಇನ್ನು ಕೆಲವರು ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಆದರೀಗ ಸದ್ಯ ಬೆಳಕಿಗೆ ಬಂದಿರುವ ಘಟನೆ ಜನರನ್ನು ಭಾವುಕರನ್ನಾಗಿಸಿದೆ. ಇಲ್ಲಿ ತಾಯಿಯೊಬ್ಬಳು ತನ್ನ ಪುಟ್ಟ ಕಂದನಿಗೆ ಜನ್ಮ ನೀಡಿದ ಕೆಲ ದಿನಗಳಲ್ಲೇ ಮೃತಪಟ್ಟಿದ್ದಾಳೆ. ಈ ಮಹಿಳೆಗೆ ತನ್ನ ಕಂದನ ಮಡಿಲಲ್ಲಿ ಆಡಿಸಲೂ ಸಾಧ್ಯವಾಗಿಲ್ಲ.

ಮಗುವಿಗೆ ಜನ್ಮ ಕೊಟ್ಟ ಬಳಿಕ ತಾಯಿಗೆ ಕೊರೋನಾ

ಇಂಡಿಯಾ ಟೈಮ್ಸ್ ಅನ್ವಯ ಅಮೆರಿಕದ ನಿವಾಸಿ ವನೆಸಾ ಕಾರ್ಡೇನಸ್ ಗೊನ್ಸಾಲ್ವಿಸ್ ಇತ್ತೀಚೆಗಷ್ಟೇ ಪುಟ್ಟ ಕಂದನಿಗೆ ಜನ್ಮ ಕೊಟ್ಟಿದ್ದಳು. ನವೆಂಬರ್ 9 ರಂದು ಈಕೆಗೆ ಹೆರಿಗೆಯಾಗಿ ಆರೋಗ್ಯವಂ ಹೆಣ್ಣು ಮಗು ಅವರ ಕುಟುಂಬಕ್ಕೆ ಎಂಟ್ರಿ ನೀಡಿತ್ತು. ಇಡೀ ಕುಟುಂಬ ಖುಷಿಯಿಂದ ಇತ್ತು. ಆದರೆ ಇದಾಧ ಐದು ದಿನಗಳಲ್ಲೇ ತಾಯಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಡೆಲಿವರಿ ವೇಳೆ ಅವರಿಗೆ ಸೋಂಕು ತಗುಲಿತ್ತೆನ್ನಲಾಗಿದೆ.

ವಿಡಿಯೋ ಕಾಲ್‌ನಲ್ಲಷ್ಟೇ ಕಂದನ ನೋಡಿದ್ದು

ವನೆಸಾಗೆ ತನ್ನ ಮಗುವನ್ನು ಮಡಿಲಲ್ಲಿ ಎತ್ತಿಕೊಳ್ಳಲೂ ಸಾಧ್ಯವಾಗಲಿಲ್ಲ. ಆಕೆಗೆ ಅಷ್ಟೂ ಸಮಯ ಸಿಕ್ಕಿರಲಿಲ್ಲ. ಅಷ್ಟರಲ್ಲೇ ಕೊರೋನಾ ವೈರಸ್‌ನಿಂದಾಗಿ ಆಕೆ ಮೃತಪಟ್ಟಿದ್ದಾಳೆ. ಕೇವಲ ವಿಡಿಯೋ ಕಾಲ್‌ ಮೂಲಕವಷ್ಟೇ ಆಕೆ ತನ್ನ ಮಗುವನ್ನು ನೋಡಿದ್ದಳು.

ಕಂದನ ತಾಯಿಯಿಂದ ದೂರವಿಟ್ಟಿದ್ದರು

nbclosangeles.com ವರದಿಯನ್ವಯ ವನೆಸಾಗೆ ಕೊರೋನಾ ಇದೆ ಎಂಬುವುದು ದೃಢಪಟ್ಟ ಬೆನ್ನಲ್ಲೇ ವೈದ್ಯರು ಆಕೆಯಿಂದ ಮಗುವನ್ನು ದೂರವಿಟ್ಟಿದ್ದರು. ಈ ಮೂಲಕ ಮಗುವಿಗೆ ಕೊರೋನಾ ತಗುಲದಂತೆ ನಿಗಾ ವಹಿಸಿದ್ದರು. ಅಂತಿಮ ಕ್ಷಣದವರೆಗೂ ತಾನು ಗುಣಮುಖಳಾಗುತ್ತೇನೆ, ಮಗುವನ್ನು ಮುದ್ದಿಸುತ್ತೇನೆಂದು ವನೆಸಾಗೆ ನಂಬಿಕೆ ಇತ್ತು. ಆದರೆ ವಿಧಿಯಾಟ ಇದ್ಯಾವುದೂ ನಡೆಯಲಿಲ್ಲ.