ವಾಷಿಂಗ್ಟನ್(ಜು.28)‌: ಕೊರೋನಾ ವೈರಸ್‌ಗೆ ಜಗತ್ತಿನಾದ್ಯಂತ ಶೋಧಿಸಲಾಗುತ್ತಿರುವ ಲಸಿಕೆಗಳ ಪೈಕಿ ಜಗತ್ತಿನಲ್ಲೇ ಅತಿ ದೊಡ್ಡದು ಎನ್ನಲಾದ ಅಂತಿಮ ಹಂತದ ಪ್ರಯೋಗ ಅಮೆರಿಕದಲ್ಲಿ ಸೋಮವಾರ ಆರಂಭವಾಗಿದೆ.

ಅಮೆರಿಕ ಸರ್ಕಾರದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಮತ್ತು ಮಾಡರ್ನಾ ಇಂಕ್‌ ಎಂಬ ಖಾಸಗಿ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆ ಇದಾಗಿದ್ದು, 30,000 ಸ್ವಯಂಸೇವಕರಿಗೆ ನೀಡಿ ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಲಸಿಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಸರ್ಕಾರದ ಮೂಲಕ ಕೊರೋನಾ ಲಸಿಕೆ ವಿತರಣೆ, ಖಾಸಗಿ ಆಸ್ಪತ್ರೆಗಿಲ್ಲ ಔಷಧಿ!

ಅಮೆರಿಕ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಈ ಲಸಿಕೆಯನ್ನು ಎರಡು ಗುಂಪುಗಳ ಮೇಲೆ ಪ್ರಯೋಗಿಸಲಾಗುತ್ತದೆ. ಒಂದು ಸ್ವಯಂಸೇವಕರ ಗುಂಪಿಗೆ ಎರಡು ಡೋಸ್‌ ಡಮ್ಮಿ (ನಕಲಿ) ಲಸಿಕೆ ನೀಡಲಾಗುತ್ತದೆ. ಇನ್ನೊಂದು ಸ್ವಯಂಸೇವಕರ ಗುಂಪಿಗೆ ಎರಡು ಡೋಸ್‌ ನಿಜವಾದ ಲಸಿಕೆ ನೀಡಲಾಗುತ್ತದೆ.

ಲಸಿಕೆ ಪಡೆದವರಿಗೆ ತಮಗೆ ನೀಡಿದ್ದು ಅಸಲಿ ಲಸಿಕೆಯೋ ನಕಲಿಯೋ ಎಂಬುದು ತಿಳಿದಿರುವುದಿಲ್ಲ. ನಂತರ ನಿರ್ದಿಷ್ಟ ಅವಧಿಯವರೆಗೆ ಎರಡೂ ಗುಂಪುಗಳನ್ನು ವಿಜ್ಞಾನಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಿಜವಾದ ಲಸಿಕೆ ಪಡೆದ ಗುಂಪಿನ ಸ್ವಯಂಸೇವಕರಿಗೆ ಕೊರೋನಾ ಸೋಂಕು ತಗಲದಿದ್ದರೆ ಲಸಿಕೆ ಯಶಸ್ವಿಯಾಗಿದೆ ಎಂದರ್ಥ.

ಭಾರತದ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಪ್ರಯೋಗ ಯಶಸ್ವಿ!

ಈಗಾಗಲೇ ಚೀನಾ ಹಾಗೂ ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿವಿಯ ಲಸಿಕೆಗಳೂ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಅನೇಕ ಲಸಿಕೆಗಳ ಅಂತಿಮ ಹಂತದ ಪ್ರಯೋಗ ಆರಂಭವಾಗಿದೆ. ಆದರೆ, ಅಮೆರಿಕದಲ್ಲಿ ನಡೆಸುತ್ತಿರುವಷ್ಟುದೊಡ್ಡ ಪ್ರಮಾಣದ ಪ್ರಯೋಗವನ್ನು ಅವು ನಡೆಸುತ್ತಿಲ್ಲ. ಅಮೆರಿಕದಲ್ಲೇ ಜಾನ್ಸನ್‌ ಅಂಡ್‌ ಜಾನ್ಸನ್‌, ನೋವಾವಾಕ್ಸ್‌, ಫೈಸರ್‌ ಮುಂತಾದ ಲಸಿಕೆಗಳು ಕೂಡ ಅಂತಿಮ ಹಂತದಲ್ಲಿದ್ದು, 1,50,000 ಸ್ವಯಂಸೇವಕರು ಪ್ರಯೋಗಕ್ಕೆ ಒಳಪಡಲು ನೋಂದಣಿ ಮಾಡಿಕೊಂಡಿದ್ದಾರೆ.