ಆಕಾಶದಲ್ಲಿ ವಿಮಾನ ಹಾರಾಟ: ವಿಮಾನದೊಳಗೆ ಪ್ರಯಾಣಿಕರ ಹೋರಾಟ
ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕಳ ಮೇಲೆ ಮೂತ್ರ ಮಾಡಿದ ಘಟನೆ ಮಾಸುವ ಮೊದಲೇ ಹಾರಾಡುವ ವಿಮಾನದೊಳಗೆ ನಡೆದ ಮತ್ತೊಂದು ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಿ ಆಗಿದೆ.
ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕಳ ಮೇಲೆ ಮೂತ್ರ ಮಾಡಿದ ಘಟನೆ ಮಾಸುವ ಮೊದಲೇ ಹಾರಾಡುವ ವಿಮಾನದೊಳಗೆ ನಡೆದ ಮತ್ತೊಂದು ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಿ ಆಗಿದೆ. ವಿಮಾನದಲ್ಲಿ ಪ್ರಯಾಣಿಕನೋರ್ವ ತನ್ನ ಶರ್ಟ್ ಬಿಚ್ಚಿ ಬರಿ ಮೈಯಲ್ಲಿ ಸಹ ಪ್ರಯಾಣಿಕನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬಾಂಗ್ಲಾದೇಶಕ್ಕೆ ಸೇರಿದ ಬಿಮನ್ ಬಾಂಗ್ಲಾದೇಶ್ ಏರ್‌ಲೈನ್ಸ್‌ನಲ್ಲಿ ಈ ಘಟನೆ ನಡೆದಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಶರ್ಟ್ ಇಲ್ಲದ ಪ್ರಯಾಣಿಕನೋರ್ವ ವಿಮಾನ ಮಧ್ಯ ಆಗಸದಲ್ಲಿ ಹಾರಾಡುತ್ತಿದ್ದ ವೇಳೆ ವಿಮಾನದ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹಲ್ಲೆ ಮಾಡುತ್ತಾನೆ. ಈ ವೇಳೆ ಸಹ ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಆತನನ್ನು ತಡೆಯಲು ಯತ್ನಿಸುತ್ತಾರೆ. @Bitanko_Biswas ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನೋಡುವುದಕ್ಕೆ ಅಸಮಾಧಾನಗೊಂಡವನಂತೆ ಕಾಣುವ ಶರ್ಟ್ ಇಲ್ಲದ ಪ್ರಯಾಣಿಕ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಹಲ್ಲೆ ಮಾಡುತ್ತಾನೆ. ಈ ವೇಳೆ ವಿಮಾನದ ಸಿಬ್ಬಂದಿ ಸೇರಿದಂತೆ ಹಲವರು ಆತನನ್ನು ಬಿಡಿಸಲು ನೋಡುತ್ತಾರೆ. ಈ ವೇಳೆ ಪರಸ್ಪರ ಹೊಡೆದಾಟ ನಡೆಯುತ್ತದೆ. ಬಾಂಗ್ಲಾದೇಶ ವಿಮಾನಯಾನ ಸಂಸ್ಥೆಯಾದ ಬಿಮನ್ ಬಾಂಗ್ಲಾದೇಶ್ ಏರ್‌ಲೈನ್ಸ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ವಿಮಾದಲ್ಲಿ ಇಂತಹ ಘಟನೆಗಳು ಇತ್ತೀಚೆಗೆ ಸಾಮಾನ್ಯ ಎನಿಸಿಬಿಟ್ಟಿವೆ. ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ದಕ್ಷಿಣ ಏಷ್ಯಾದಾದ್ಯಂತ ಇರುವ ಸಮಸ್ಯೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೆಲವರಿಗೆ ಶಿಕ್ಷಣದ ಮೇರೆಗೆ ಸಾಗರೋತ್ತರದಲ್ಲಿ ಉದ್ಯೋಗ ಸಿಗುತ್ತದೆ. ಆದರೆ ನಾಗರಿಕತೆಯ ಶಿಕ್ಷಣ ಅವರ ಬಳಿ ಇಲ್ಲ. ಇಂತಹ ಘಟನೆಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಸ್ಟ್ಯಾಂಡರ್ಡ್ ಎಂಬುದೇ ಇಲ್ಲವಾಗಿದೆ. ಶಿಕ್ಷಿತರು (Educated) ಅಶಿಕ್ಷಿತರು ಎಲ್ಲರೂ ವಿಮಾನದ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಇದು ವಿಮಾನಕ್ಕೂ ಹಾಗೂ ವಿಮಾನ ಸಿಬ್ಬಂದಿ (Airhostess) ಹಾಗೂ ಪ್ರಯಾಣಿಕರ ಪಾಲಿಗೆ ಅಪಾಯಕಾರಿ. ಇಂತಹ ಘಟನೆಗಳಲ್ಲಿ ಆರೋಪಿಗಳಿಗೆ ಜೀವಾವಧಿಯವರೆಗೆ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಬೇಕು. ಅಲ್ಲದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕಳೆದ ಕೆಲ ದಿನಗಳಿಂದ ವಿಮಾನದೊಳಗೆ ನಡೆಯುತ್ತಿರುವ ಈ ರೀತಿಯ ಆಘಾತಕಾರಿ ಘಟನೆಗಳು ಹೆಚ್ಚು ಹೆಚ್ಚು ವರದಿಯಾಗುತ್ತಿವೆ. ಕೆಲದಿನಗಳ ಹಿಂದೆ ಕೋಲ್ಕತ್ತಾಕ್ಕೆ ಹೊರಟಿದ್ದ ಥೈ ಸ್ಮೈಲ್ ಏರ್‌ವೇಸ್‌ನ (Thai Smile Airways) ಬ್ಯಾಂಕಾಕ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಹೊಡೆದಾಡಿಕೊಂಡ ಘಟನೆ ನಡೆದಿತ್ತು.
ಸಾಮಾನ್ಯವಾಗಿ ವಿಮಾನದಲ್ಲಿ ಓಡಾಡುವವರನ್ನು ಸುಶಿಕ್ಷಿತರು, ಸಮಾಜದ ಉನ್ನತ ಸ್ಥಾನಮಾನದಲ್ಲಿ ಇರುವವರು, ವಿದ್ಯಾವಂತರು, ಶ್ರೀಮಂತರು ಇವರೆಲ್ಲರೂ ಹೈ ಫೈ ಸ್ಟ್ಯಾಂಡರ್ಡ್ ಜೀವನ ನಡೆಸುತ್ತಾರೆ ನಿಯಮಬದ್ಧವಾಗಿ ನಡೆದುಕೊಳ್ಳುತ್ತಾರೆ ಎಂಬುದೇ ಬಹುತೇಕರ ಭಾವನೆ. ಆದರೆ ಉನ್ನತ ಶಿಕ್ಷಣ ಪಡೆದ ಎಲ್ಲರಿಗೂ ಸಂಸ್ಕಾರ ಇರುತ್ತದೆ ಎಂದು ಹೇಳಲಾಗದು ಕಾಮನ್‌ಸೆನ್ಸ್ ಇಸ್ ನಾಟ್ ಸೋ ಕಾಮನ್ ಎಂಬ ಮಾತನನ್ನು ಮತ್ತೆ ಮತ್ತೆ ನೆನಪು ಮಾಡುವಂತೆ ಮಾಡುತ್ತದೆ ಕೆಲವರ ವರ್ತನೆಗಳು. ನಾವು ಸುಶಿಕ್ಷಿತರು ಅಂದುಕೊಂಡ ಜನಗಳೇ ಕೆಲವೊಮ್ಮೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ವಿಮಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಲವರನ್ನು ಕಿರಿಕಿರಿಗೆ ಇಡು ಮಾಡುವ ಹಲವು ಘಟನೆಗಳೇ ಇದಕ್ಕೆ ಸಾಕ್ಷಿ.