ವಾಷಿಂಗ್ಟನ್(ನ.14): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ಗೆ ಸೋಲಾಗುತ್ತಿದ್ದಂತೆ ಅವರಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿರುವ ಪತ್ನಿ ಮೆಲಾನಿಯಾ 3 ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಟ್ರಂಪ್‌ ಜೊತೆ ಅಂತರ ಕಾಯ್ದುಕೊಂಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ದೇಶ ಸೇವೆಯಲ್ಲಿ ಮಡಿದ ಯೋಧರ ಸ್ಮರಣಾರ್ಥ ನ.11ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಮೆಲಾನಿಯಾ ಅವರು ಟ್ರಂಪ್‌ ಜೊತೆ ಆಗಮಿಸಿದ್ದರಾದರೂ, ಸಾಕಷ್ಟುಅಂತರ ಕಾಪಾಡಿಕೊಂಡಿದ್ದರು. ಇದು ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ನಡೆದುಕೊಂಡ ರೀತಿ ಎಂಬ ವಿಶ್ಲೇಷಣೆ ಕೇಳಿಬಂದರೂ, ಕಾರ್ಯಕ್ರಮಕ್ಕೆ ಬಂದ ಮೆಲಾನಿಯಾ ಮಾಸ್ಕ್‌ ಧರಿಸಿರಲಿಲ್ಲ.

ಜೊತೆಗೆ ಮಳೆಯಿಂದ ರಕ್ಷಣೆಗೆ ಕೊಡೆ ಹಿಡಿದು ತನ್ನ ಜೊತೆಗೆ ಬಂದಿದ್ದ ಯೋಧನ ಕೈಹಿಡಿದುಕೊಂಡೇ ಮೆಲಾನಿಯಾ ಹೆಜ್ಜೆ ಹಾಕಿದ್ದರು. ಇದು ದಂಪತಿಗಳ ನಡುವೆ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆದಿದೆ.