ನವದೆಹಲಿ (ಮೇ.28): ಆ್ಯಂಟಿಗುವಾದಿಂದ ಪರಾರಿಯಾಗಿ ಡೊಮಿನಿಕಾ ದೇಶದಲ್ಲಿ ಸಿಕ್ಕಿಬಿದ್ದಿರುವ ಭಾರತದ ದೇಶಭ್ರಷ್ಟಉದ್ಯಮಿ ಮೇಹುಲ್‌ ಚೋಕ್ಸಿ, ಡೊಮಿನಿಕಾದಿಂದ ನೇರವಾಗಿ ಭಾರತಕ್ಕೆ 2 ದಿನದಲ್ಲಿ ಗಡೀಪಾರಾಗುವ ಸಾಧ್ಯತೆ ಇದೆ ಎಂದು ಆ್ಯಂಟಿಗುವಾ ಪ್ರಧಾನಿ ಗ್ಯಾಸ್ಟನ್‌ ಬ್ರೌನ್‌ ಹೇಳಿದ್ದಾರೆ.

‘ಆ್ಯಂಟಿಗುವಾ ಕಾನೂನಿನಲ್ಲಿ ಚೋಕ್ಸಿಗೆ ಇರುವ ರಕ್ಷಣೆಗಳು ಡೊಮಿನಿಕಾದಲ್ಲಿ ಇಲ್ಲ. ಭಾರತಕ್ಕೆ ಅನೇಕ ಪ್ರಕರಣಗಳಲ್ಲಿ ಆತ ಬೇಕಾಗಿದ್ದಾನೆ. ಹೀಗಾಗಿ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಗಡೀಪಾರು ಮಾಡುವಂತೆ ಡೊಮಿನಿಕಾ ಪ್ರಧಾನಿಗೆ ನಾನು ತಿಳಿಸಿದ್ದೇನೆ. 2 ದಿನದಲ್ಲಿ ಆತ ಅಲ್ಲಿಂದ ಭಾರತಕ್ಕೆ ಗಡೀಪಾರು ಆಗಬಹುದು. ಇದಕ್ಕೆ ಕಾನೂನು ತೊಡಕಿಲ್ಲ ಎಂಬ ಭಾವನೆಯಿದೆ’ ಎಂದು ಬ್ರೌನ್‌ ತಿಳಿಸಿದ್ದಾರೆ.

ಮಲ್ಯ, ನೀರವ್, ಚೋಕ್ಸಿ; ಪರಾರಿಯಾದ ಉದ್ಯಮಿಗಳಿಗೆ ಭಾರತದ ಬಿಗಿ ಕಾನೂನು ಕುಣಿಕೆ! ...

ಈ ನಡುವೆ, ಈ ಬಗ್ಗೆ ಮಾತನಾಡಿರುವ ಡೊಮಿನಿಕಾ ಪೊಲೀಸರು, ‘ಚೋಕ್ಸಿ ನಮ್ಮ ವಶದಲ್ಲಿದ್ದಾನೆ. ಆತ ತನ್ನ ಮೂಲ ದೇಶಕ್ಕೆ ಗಡೀಪಾರು ಆಗಬಹುದು’ ಎಂದು ಹೇಳಿದ್ದಾರೆ.

ಗಡೀಪಾರು ಅಸಾಧ್ಯ- ವಕೀಲ:

ಮೇಹುಲ್‌ ಚೋಕ್ಸಿ ಪರ ವಕೀಲ ವಿಜಯ್‌ ಆಗರ್‌ವಾಲ್‌ ಅವರು ಗಡೀಪಾರು ಸಾಧ್ಯತೆ ತಳ್ಳಿಹಾಕಿದ್ದಾರೆ. ‘ಚೋಕ್ಸಿ ಈಗ ಆ್ಯಂಟಿಗುವಾ ನಾಗರಿಕ. ಆತ ಭಾರತೀಯ ಪೌರನಲ್ಲ. ಆ್ಯಂಟಿಗುವಾಗೆ ಆತನನ್ನ ಗಡೀಪಾರು ಮಾಡಲು ಅವಕಾಶವಿದೆಯೇ ವಿನಾ ಭಾರತಕ್ಕೆ ಗಡೀಪಾರು ಮಾಡಲು ಡೊಮಿನಿಕಾಗೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಸಮುದ್ರದಲ್ಲಿ ದಾಖಲೆ ನಾಡ ಮಾಡುತ್ತಿದ್ದ ಚೋಕ್ಸಿ!

ಡೊಮಿನಿಕಾ: ಡೊಮಿನಿಕಾದ ಕೇನ್‌ಫೀಲ್ಡ್‌ ಸಮುದ್ರ ತೀರದಲ್ಲಿ ಮೇಹುಲ್‌ ಚೋಕ್ಸಿ ಕೆಲವು ದಾಖಲೆಪತ್ರಗಳನ್ನು ಎಸೆಯುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಸಂದೇಹದಿಂದ ಆತನನ್ನು ವಶಕ್ಕೆ ತೆಗೆದುಕೊಂಡಾಗ ಗೊಂದಲದ ಉತ್ತರ ನೀಡಿದ್ದಾನೆ. ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆತ ಏನು ನಾಶ ಮಾಡಿದ್ದ ಎಂಬುದರ ಪತ್ತೆಗಾಗಿ ಡೈವರ್‌ಗಳನ್ನು ಸಮುದ್ರಕ್ಕೆ ಇಳಿಸಿ ಪರಿಶೀಲಿಸಲಾಗುತ್ತಿದೆ.

ಬೋಟ್‌ ಮೂಲಕ ಆಗಮನ ಶಂಕೆ:

ಡೊಮಿನಿಕಾದ ವಿಮಾನ ನಿಲ್ದಾಣ ಇಲ್ಲದ ಪ್ರದೇಶದಲ್ಲಿ ಆತ ಪತ್ತೆ ಆಗಿದ್ದಾನೆ. ಆತ ದೋಣಿ ಮೂಲಕ ಡೊಮಿನಿಕಾಗೆ ಬಂದಿರಬಹುದು ಎಂದು ತಿಳಿದುಬಂದಿದೆ. ಆತ ಅಲ್ಲಿಂದ ಕ್ಯೂಬಾಗೆ ಪರಾರಿ ಆಗುವ ಉದ್ದೇಶ ಹೊಂದಿದ್ದ ಎಂದು ತಿಳಿದುಬಂದಿದೆ