ಮಹಿಳಾ ಸಹೋದ್ಯೋಗಿಗಳನ್ನು ಬೆಂಬಲಿಸಿದ ಪುರುಷ ಸಹೋದ್ಯೋಗಿಗಳು ತಾವು ಕೂಡ ಮಾಸ್ಕ್‌ ಧರಿಸಿದ ಅಫ್ಘಾನ್ ಪುರುಷ ನಿರೂಪಕರು ತಾಲಿಬಾಲ್ ವಿರುದ್ಧ ಸಡ್ಡು ಹೊಡೆದ ಪುರುಷ ನಿರೂಪಕರು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಜಾರಿಗೆ ಬಂದ ನಂತರ ಮಹಿಳೆಯರ ಸ್ಥಿತಿಗತಿ ಸ್ಥಾನಮಾನವನ್ನು ಕೇಳುವವರೇ ಇಲ್ಲವಾಗಿದ್ದಾರೆ. ದೇಹವನ್ನು ಸಂಪೂರ್ಣ ಕವರ್‌ ಮಾಡಿ ಮುಖ ಮಾತ್ರ ತೋರಿಸುತ್ತಿದ್ದ ಮಹಿಳಾ ನಿರೂಪಕರಿಗೆ ಮುಖವನ್ನು ಮುಚ್ಚಿಕೊಳ್ಳಬೇಕು ಎಂದು ಇತ್ತೀಚೆಗೆ ತಾಲಿಬಾನ್ ಸೂಚಿಸಿತ್ತು. ತಾಲಿಬಾನ್‌ನ ಈ ಕ್ರಮಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಪುರುಷ ನಿರೂಪಕರು ಕೂಡ ಮಹಿಳೆಯ ವಿರುದ್ಧದ ಈ ತಾಲಿಬಾನ್ ನಿರ್ಧಾರವನ್ನು ವಿರೋಧಿಸುವ ಹಾಗೂ ತಮ್ಮ ಮಹಿಳಾ ಸಹೋದ್ಯೋಗಿಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ತಾವು ಕೂಡ ಮಾಸ್ಕ್‌ ಧರಿಸಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್‌ನ ಈ ನಿರ್ಧಾರ ವಿರೋಧಿಸಿ ಅಭಿಯಾನ ಶುರುವಾಗಿದ್ದು, ತಾವು ಕೂಡ ಮಾಸ್ಕ್ ಧರಿಸಿರುವ ಫೋಟೋಗಳನ್ನು ಪುರುಷ ಆಂಕರ್‌ಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಅಂಜಿಕೆ ಇಲ್ಲದೇ ಪೋಸ್ಟ್ ಮಾಡುತ್ತಿದ್ದಾರೆ. #FreeHerFace ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಭಿಯಾನದ ಭಾಗವಾಗಿ, ವಾರ್ತಾ ಪ್ರಸಾರದ ಸಮಯದಲ್ಲಿಯೂ ಪುರುಷ ಆಂಕರ್‌ಗಳು ಫೇಸ್ ಮಾಸ್ಕ್ ಧರಿಸುವುದನ್ನು ಕಾಣಬಹುದು. 

Scroll to load tweet…

ತಾಲಿಬಾನ್‌ನ ಈ ತೀರ್ಪು ವಿರೋಧಿಸಿ ಅಫ್ಘಾನ್‌ ಪುರುಷ ನಿರೂಪಕರು ಮಾಡುತ್ತಿರುವ ಈ ಅಭಿಯಾನ ಡಾಯ್ಚ ವೆಲ್ಲೆ (Deutsche Welle) ಸೇರಿದಂತೆ ಜಾಗತಿಕ ಮಟ್ಟದ ಪತ್ರಕರ್ತರ ಗಮನ ಸೆಳೆದಿದೆ. ಹಲವಾರು ಪುರುಷ ಮತ್ತು ಮಹಿಳಾ ಪತ್ರಕರ್ತರು ಮತ್ತು ಸುದ್ದಿ ನಿರೂಪಕರು ತಮ್ಮ ಮುಖವನ್ನು ಮುಚ್ಚಿಕೊಂಡು ಸೆಲ್ಫಿ ತೆಗೆದು ಟ್ವಿಟ್ ಮಾಡುತ್ತಿದ್ದಾರೆ. ಅಲ್ಲದೇ ಅಫ್ಘಾನಿಸ್ತಾನದಲ್ಲಿ ಮಹಿಳೆಯರನ್ನು ಬೆಂಬಲಿಸಿ ಟ್ವಿಟ್ ಮಾಡುತ್ತಿದ್ದಾರೆ.

Scroll to load tweet…

ಸಾರ್ವಜನಿಕ ಸ್ಥಳಗಳಲ್ಲಿ ಅಡಿಯಿಂದ ಮುಡಿವರೆಗೆ ಮಹಿಳೆಯರಿಗೆ ಬುರ್ಖಾ ಕಡ್ಡಾಯ ಮಾಡಿದ ತಾಲಿಬಾನ್!

ಇತ್ತೀಚೆಗೆ ತಾಲಿಬಾನ್‌ನ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಯು ಮಹಿಳೆಯರು ಮತ್ತು ವಯಸ್ಸಿನ ಹುಡುಗಿಯರು ಮನೆಯಿಂದ ಹೊರಗೆ ಹೋಗುವಾಗ ತಲೆಯಿಂದ ಕಾಲಿನ ಬೆರಳಿನವರೆಗೆ ಮುಚ್ಚಿಕೊಳ್ಳುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಒಂದು ವೇಳೆ ಈ ನಿಯಮವನ್ನು ಹೆಣ್ಣು ಮಕ್ಕಳು ಮೀರಿದರೆ ಅವರ ಪುರುಷ ಕುಟುಂಬ ಸದಸ್ಯರಿಗೆ ಶಿಕ್ಷೆಯನ್ನು ಕಡ್ಡಾಯಗೊಳಿಸುವ ನಿಯಮವನ್ನು ಜಾರಿಗೆ ತಂದಿತ್ತು. 

ಮೇ 7 ರಂದು ಹೊರಡಿಸಲಾದ ಸುಗ್ರೀವಾಜ್ಞೆಯ ಪ್ರಕಾರ, ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂದ್ಜಾದಾ (Hibatullah Akhundzada) ಸಾಂಪ್ರದಾಯಿಕ ಬುರ್ಖಾದೊಂದಿಗೆ ಸಾರ್ವಜನಿಕವಾಗಿ ತಮ್ಮನ್ನು ಸಂಪೂರ್ಣವಾಗಿ ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಮಹಿಳೆಯರಿಗೆ ಆದೇಶಿಸಿದ್ದ. ಅಗತ್ಯವಿಲ್ಲದಿದ್ದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆಯೂ ಆದೇಶದಲ್ಲಿ ತಿಳಿಸಲಾಗಿತ್ತು. ಇದಕ್ಕೂ ಮೊದಲು ತಾಲಿಬಾನ್ ಉಗ್ರರು ಹುಡುಗಿಯರಿಗೆ ಮಾಧ್ಯಮಿಕ ಶಿಕ್ಷಣವನ್ನು ನಿಷೇಧಿಸಿದ್ದರು. ಆದರೆ ಪುರುಷರೊಂದಿಗೆ ಮಹಿಳೆಯರು ಪಾರ್ಕ್‌ಗೆ ಹೋಗುವಂತಿಲ್ಲ ಎಂದು ಕೂಡ ಆದೇಶಿಸಿದ್ದರು. 

ಅಫ್ಘಾನಿಸ್ತಾನ: ಮಹಿಳಾ ಟಿವಿ ನಿರೂಪಕರಿಗೆ ಮುಖ ಮುಚ್ಚಿಕೊಳ್ಳುವಂತೆ ತಾಲಿಬಾನ್ ಆದೇಶ!