ನವದೆಹಲಿ (ಮಾ.01):  ಭಾರತದಲ್ಲಿ ನಡೆದಿರುವ ರೈತರ ಹೋರಾಟಕ್ಕೆ ಪಾಕಿಸ್ತಾನದ ಹೋರಾಟಗಾರ್ತಿ ಹಾಗೂ ನೊಬೆಲ್‌ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್‌ಝೈ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನೀತಿಗಳ ವಿರುದ್ಧ ದನಿ ಎತ್ತಿದ ಹೋರಾಟಗಾರರ ಬಂಧನ ಹಾಗೂ ಇಂಟರ್‌ನೆಟ್‌ ನಿರ್ಬಂಧವನ್ನು ಪ್ರಶ್ನಿಸಿದ್ದಾರೆ.

ತಮ್ಮ ಕುರಿತ ಪುಸ್ತಕವೊಂದರ ಕಾರ್ಯಕ್ರಮದಲ್ಲಿ ವರ್ಚುವಲ್‌ ಭಾಷಣ ಮಾಡಿದ ಅವರು, ‘ಭಾರತದಲ್ಲಿ ಇಂಟರ್ನೆಟ್‌ ನಿರ್ಬಂಧ ಹಾಗೂ ಶಾಂತಿಯುತ ಹೋರಾಟ ಮಾಡುತ್ತಿರುವ ಕಾರ್ಯಕರ್ತರ ಬಂಧನ ಕಳವಳಕಾರಿ’ ಎಂದರು. ಈ ಮೂಲಕ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಿಶಾ ರವಿ ಬಂಧನವನ್ನು ಪರೋಕ್ಷವಾಗಿ ಖಂಡಿಸಿದರು.

ನೊಬೆಲ್‌ ಶಾಂತಿ ಪುರಸ್ಕೃತೆ ಮಲಾಲಾಗೆ ತಾಲಿಬಾನ್‌ ಮತ್ತೆ ಹತ್ಯೆ ಬೆದರಿಕೆ! .

‘ನೀವು ಒಬ್ಬರ ರಾಜಕೀಯ ಅಭಿಪ್ರಾಯವನ್ನು ಒಪ್ಪದೇ ಇರಬಹುದು. ಆದರೆ ಹಾಗಂತ ಅವರನ್ನು ಜೈಲಿಗೆ ತಳ್ಳುವುದು ಸರಿಯಲ್ಲ. ಪ್ರಜಾಸತ್ತೆಯಲ್ಲಿ ಮಹಿಳೆಯರು, ಬಾಲಕಿಯರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಹೀಗಾಗಿ ಸರ್ಕಾರವು ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿ, ಅವರ ದನಿ ಕೇಳುತ್ತದೆ ಎಂಬ ವಿಶ್ವಾಸ ನನ್ನದು’ ಎಂದರು.

ಈ ನಡುವೆ, ‘ಪಾಕಿಸ್ತಾನ-ಭಾರತ ನೈಜ ಸ್ನೇಹಿತರಾಗುವುದನ್ನು ನೋಡುವುದು ನನ್ನ ಕನಸು’ ಎಂದ ಮಲಾಲಾ, ‘ಭಾರತ-ಪಾಕ್‌ನಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಮಾಡಬೇಕು’ ಎಂದು ಮನವಿ ಮಾಡಿದರು.