ಲೈಬ್ರರಿಯಿಂದ ಪುಸ್ತಕ ತೆಗೆದುಕೊಂಡ್ರೆ ಅದನ್ನು ಸರಿಯಾದ ಟೈಂಗೆ ವಾಪಸ್ ಮಾಡ್ಬೇಕು. ಇಲ್ಲ ಅಂದ್ರೆ ದಂಡ ವಿಧಿಸಲಾಗುತ್ತೆ. 150 ವರ್ಷಗಳ ಹಿಂದೆ ತೆಗೆದುಕೊಂಡಿದ್ದ ಬುಕನ್ನು ಈಗ ಲೈಬ್ರರಿಗೆ ಹಿಂತಿರುಗಿಸಲಾಗಿದೆ. ಅವ್ರಿಗೆ ವಿಧಿಸಿದ ದಂಡ ಎಷ್ಟು?
ಲೈಬ್ರರಿ ಪುಸ್ತಕವನ್ನು ಸರಿಯಾಗಿ ಕಾಪಾಡಿಕೊಳ್ಬೇಕು. ಸರಿಯಾದ ಸಮಯಕ್ಕೆ ಅದನ್ನು ಹಿಂತಿರುಗಿಸ್ಬೇಕು. ಹಾಗೆಯೇ ಬುಕ್ ಹಾಳಾಗದಂತೆ ನೋಡ್ಕೊಳ್ಭೇಕು. ಒಂದ್ವೇಳೆ ನೀವು ಪುಸ್ತಕ ವಾಪಸ್ ಕೊಡದೆ ಹೋದ್ರೆ ದಂಡ ವಿಧಿಸ್ತಾರೆ. ಲಾಸ್ಟ್ ಡೇಟ್ ನಂತ್ರ ಪ್ರತಿ ದಿನದ ಲೆಕ್ಕದಲ್ಲಿ ದಂಡ ವಸೂಲಿ ಮಾಡಲಾಗುತ್ತೆ. ನೀವೂ ಲೈಬ್ರರಿಯಿಂದ ಬುಕ್ ತಂದು ವಾರಗಟ್ಟಲೆ ವಾಪಸ್ ಮಾಡ್ದೆ ಮರೆತಿರಬಹುದು. ಆದ್ರೆ ಆಸ್ಟ್ರೇಲಿಯಾದಲ್ಲಿ ಒಂದು ಎರಡು ವಾರ ಅಲ್ಲ, 150 ವರ್ಷ ಬುಕ್ ವಾಪಸ್ ಮಾಡಿಲ್ಲ.
150 ವರ್ಷದ ನಂತ್ರ ಸಿಕ್ತು ಬುಕ್
ಆಸ್ಟ್ರೇಲಿಯಾದ ಗ್ರಂಥಾಲಯದಿಂದ Antiquities of Athens ಹೆಸರಿನ ಪುಸ್ತಕವನ್ನು 1858 ರಲ್ಲಿ ಯಾರೋ ತೆಗೆದುಕೊಂಡು ಹೋಗಿದ್ರು. ಕಿಯಾಮಾದಲ್ಲಿರುವ ಗ್ರಂಥಾಲಯಕ್ಕೆ ಈ ಬುಕ್ ವಾಪಸ್ ಮಾಡಿರಲಿಲ್ಲ. ಇತ್ತೀಚಿಗೆ ವ್ಯಕ್ತಿಯೊಬ್ಬರು ಮುಚ್ಚಿದ್ದ ಚಿಮಣಿ ತೆಗೆದಾಗ ಒಂದು ಪೆಟ್ಟಿಗೆ ಕಾಣಿಸಿದೆ. ಈ ಪೆಟ್ಟಿಗೆಯಲ್ಲಿ ಅವರಿಗೆ ಲೈಬ್ರರಿ ಬುಕ್ ಸಿಕ್ಕಿದೆ. ಈ ಪುಸ್ತಕವನ್ನು ಅವರು ತಕ್ಷಣ ಲೈಬ್ರರಿಗೆ ಹಿಂತಿರುಗಿಸಿದ್ದಾರೆ.
ದಂಡ ಎಷ್ಟು?
ಪುಸ್ತಕದ ಒಳಗೆ ಮುದ್ರಿಸಲಾದ ಹಳೆಯ ನಿಯಮಗಳ ಪ್ರಕಾರ, ಶುಲ್ಕ ಲೆಕ್ಕಹಾಕಿದರೆ, ದಂಡ ಸರಿಸುಮಾರು 18.7 ಲಕ್ಷ ರೂಪಾಯಿಗಳು ಅಥವಾ 28,000 ಆಸ್ಟ್ರೇಲಿಯನ್ ಡಾಲರ್ ಆಗುತ್ತೆ. ಆದ್ರೆ ದಂಡ ವಸೂಲಿ ಯಾರಿಂದ ಮಾಡ್ಬೇಕು ಎನ್ನುವ ಪ್ರಶ್ನೆ ಬರುತ್ತದೆ. ಈ ಪುಸ್ತಕವನ್ನು ಯಾರು ತೆಗೆದುಕೊಂಡು ಹೋಗಿದ್ರು ಎನ್ನುವ ಮಾಹಿತಿ ಇಲ್ಲ. ಲೈಬ್ರರಿಯಲ್ಲಿ ಇದ್ರ ಬಗ್ಗೆ ಯಾವುದೇ ದಾಖಲೆ ಇಲ್ಲ. ರಿಜಿಸ್ಟರ್ ಕಳೆದುಹೋಗಿದೆ. ಹಾಗಾಗಿ ಯಾರಿಗೂ ದಂಢ ವಿಧಿಸದಿರಲು ನಿರ್ಧರಿಸಲಾಗಿದೆ.
ಪುಸ್ತಕಕ್ಕೆ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. 150 ವರ್ಷಗಳ ನಂತ್ರ ಬುಕ್ ವಾಪಸ್ ಸಿಕ್ಕಿದ್ದು ಖುಷಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದ್ರೆ ಲೈಬ್ರರಿ ಇದನ್ನು ಮತ್ತೆ ಓದಲು ನೀಡದಿರುವ ನಿರ್ಧಾರ ಮಾಡಿದೆ. ಇದನ್ನು ಪ್ರದರ್ಶನಕ್ಕೆ ಇಡುವ ತೀರ್ಮಾನಕ್ಕೆ ಬಂದಿದೆ. ಇನ್ಮುಂದೆ ಈ ಪುಸ್ತಕ ಜನರಿಗೆ ಓದಲು ಸಿಗೋದಿಲ್ಲ.
ಲೈಬ್ರರಿ ನಿಯಮ ಏನಿತ್ತು?
1870 ರ ದಶಕದ ಗ್ರಂಥಾಲಯದ ಹಳೆಯ ನಿಯಮಗಳ ಪ್ರಕಾರ, ಮನೆಯಲ್ಲಿ ಕನಿಷ್ಠ ಆರು ಜನರಿಗೆ ಓದಲು ಬರ್ತಿದ್ದರೆ ಮಾತ್ರ ಕುಟುಂಬಕ್ಕೆ ಮೂರು ಪುಸ್ತಕಗಳನ್ನು ಎರವಲು ನೀಡಲಾಗ್ತಿತ್ತು. ಮದ್ಯ ಸೇವಿಸಿ ಬಂದವರಿಗೆ ಪುಸ್ತಕ ನೀಡಲಾಗ್ತಿರಲಿಲ್ಲ.


