ವಿಶ್ವಸಂಸ್ಥೆ ಭಾಷಣದಲ್ಲಿ ಚಹಾ ಮಾರಿದ ದಿನ ನೆನೆದ ಮೋದಿ!
* ‘ಅಂದು ಚಹಾ ಮಾರಿದವನಿಂದ ಇಂದು ವಿಶ್ವಸಂಸ್ಥೆಯಲ್ಲಿ ಭಾಷಣ’
* ಚಹಾ ಮಾರಿದ ದಿನ ನೆನೆದ ಮೋದಿ!
ವಿಶ್ವಸಂಸ್ಥೆ(ಸೆ.26): ಪ್ರಜಾಪ್ರಭುತ್ವದ(Democracy) ತಾಯಿಯಾದ ಭಾರತ ದೇಶವನ್ನು ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಸುತ್ತಿರುವುದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಪ್ರತಿಪಾದಿಸಿದ್ದಾರೆ.
ರೈಲ್ವೆ ನಿಲ್ದಾಣವೊಂದರಲ್ಲಿ ತನ್ನ ತಂದೆಗೆ ಸಹಾಯ ಮಾಡಲು ಚಹಾ(Tea) ಮಾರುತ್ತಿದ್ದ ಹುಡುಗನೊಬ್ಬ ಇಂದು ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ 4ನೇ ಸಲ ಭಾಷಣ ಮಾಡುತ್ತಿರುವುದು ಭಾರತದ ಪ್ರಜಾಪ್ರಭುತ್ವದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಮೋದಿ ಅವರು ಬಣ್ಣಿಸಿದರು.
‘ಭಾರತವು(India) ಸಾವಿರಾರು ವರ್ಷಗಳಿಂದಲೇ ಪ್ರಜಾಪ್ರಭುತ್ವದ ಸಂಪ್ರದಾಯವನ್ನು ಪಾಲಿಸುತ್ತಿದೆ. ಪ್ರಜಾಪ್ರಭುತ್ವದ ತಾಯಿಯಂತಿರುವ ಭಾರತವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿ. ಇದೇ ವರ್ಷದ ಆ.15ರಂದು ಭಾರತವು 75ನೇ ಸ್ವಾತಂತ್ರ್ಯೋತ್ಸವಕ್ಕೆ ಕಾಲಿಟ್ಟಿದೆ. ನಮ್ಮ ವೈವಿದ್ಯತೆಯೇ ನಮ್ಮ ಪ್ರಜಾಪ್ರಭುತ್ವದ ಹೆಗ್ಗುರುತು.
ಭಾರತವು ಹತ್ತಾರು ಭಾಷೆಗಳು(languages), ನೂರಾರು ಆಡುಭಾಷೆಗಳು, ವಿವಿಧ ಜೀವನ ಕ್ರಮ ಹಾಗೂ ಪಾಕಪದ್ಧತಿಯನ್ನು ಒಳಗೊಂಡಿದೆ. ಇದೆಲ್ಲವೂ ಶಕ್ತಿಶಾಲಿ ಪ್ರಜಾಪ್ರಭುತ್ವಕ್ಕೆ ಉತ್ತಮ ನಿದರ್ಶನಗಳಾಗಿವೆ’ ಎಂದರು.