ಸಿಡಿಲೊಂದು ಮರಕ್ಕೆ ಬಡಿದ ಭಯಾನಕ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ವಂಡರ್ ಆಫ್ ಸೈನ್ಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಮಳೆಗಾಲದಲ್ಲಿ ಗುಡುಗು ಮಿಂಚುಗಳು ಭಯಾನಕ ಗಾಳಿ ಮಳೆ ಸಾಮಾನ್ಯ. ಗಾಳಿ ಮಳೆಯೊಂದಿಗೆ ಬರುವ ಗುಡುಗು ಮಿಂಚುಗಳು ಭಯ ಮೂಡಿಸುವುದರ ಜೊತೆ ಅನೇಕೆ ಪ್ರಾಣವನ್ನೇ ಕೊಂಡೊಯ್ಯುತ್ತವೆ. ಸಿಡಿಲು ಬಡಿದು ಪ್ರಾಣಿ ಪಕ್ಷಿಗಳು ಮನುಷ್ಯರು ಸಾವನ್ನಪ್ಪಿದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಎತ್ತರದ ಮರಗಳಿಗೆ ಸಿಡಿಲು ಬೀಳುವುದನ್ನು ನಾವು ನೋಡಿದ್ದೇವೆ. ಅದೇ ಕಾರಣಕ್ಕೆ ಮಳೆ ಸಿಡಿಲು ಗುಡುಗು ಮಿಂಚುಗಳಿದ್ದಾಗ ಮರದಡಿ ನಿಲ್ಲಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಮರದಡಿ ನಿಲ್ಲುವುದು ಕೂಡ ಅಪಾಯಕಾರಿಯೇ. ಹಾಗೆಯೇ ಮರವೊಂದಕ್ಕೆ ಸಿಡಿಲು ಬಡಿದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಭಯ ಮೂಡಿಸುತ್ತಿದೆ.
ವಂಡರ್ ಆಫ್ ಸೈನ್ಸ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಯಾರೋ ತಮ್ಮ ಮನೆಯ ಕಿಟಕಿಯಿಂದ ಹೊರಭಾಗದಲ್ಲಿ ಸುರಿಯುತ್ತಿರುವ ಮಳೆಯ ಸುಂದರ ಕ್ಷಣಗಳನ್ನು ವಿಡಿಯೋ ಮಾಡುತ್ತಿರುತ್ತಾರೆ. ಅಷ್ಟರಲ್ಲೇ ಅಲ್ಲೇ ಇದ್ದ ಮರವೊಂದರ ಮೇಲೆ ಸಿಡಿಲು ಬಡಿದಿದ್ದು, ಇದರ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಡಿಲು ಬಡಿದ ರಭಸಕ್ಕೆ ಇಡೀ ಮರಕ್ಕೆ ಬೆಂಕಿ ವ್ಯಾಪಿಸುತ್ತದೆ.
ಈ ವಿಡಿಯೋ ಪೋಸ್ಟ್ ಆದಾಗಿನಿಂದ 30,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ವಿಡಿಯೋ ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ. ಸಿಡಿಲಿನಿಂದ ಹಾನಿಗೊಳಗಾದ ಈ ಮರವು ಮತ್ತೆ ಎಲೆಗಳನ್ನು ಚಿಗುರಿಸಲಾರದು ಎಂದು ಒಬ್ಬರು ಬಳಕೆದಾರರು ಬರೆದರೆ ಇನ್ನೊಬ್ಬರು ಸಿಡಿಲು ಗುಡುಗಿನ ಸಮಯದಲ್ಲಿ ಮರದ ಕೆಳಗೆ ನಿಲ್ಲುವುದು ಅಕ್ಷರಶಃ ಕೆಟ್ಟ ನಿರ್ಧಾರ ಎಂದು ಪ್ರತಿಕ್ರಿಯಿಸಿದ್ದಾರೆ. ಮರದ ಬುಡವ ಚಂಡಮಾರುತದ ಸಮಯದಲ್ಲಿ ಅತ್ಯಂತ ಅಸುರಕ್ಷಿತ ಸ್ಥಳವಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ (2021) ಇಂಡೋನೇಷ್ಯಾ (Indonesia)ದ ಜಕಾರ್ತದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ನಡೆದಿತ್ತು. ವ್ಯಕ್ತಿಯೊಬ್ಬನಿಗೆ ಸಿಡಿಲು ಬಡಿದ ದೃಶ್ಯವೊಂದು ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಘಟನೆಯ ಭಯಾನಕ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಿಡಿಲು ಬಡಿತಕ್ಕೊಳಗಾದ ವ್ಯಕ್ತಿಗೆ ಸುಟ್ಟ ಗಾಯಗಳಾಗಿದ್ದು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂಡೋನೇಷಿಯಾದ ಜಕಾರ್ತಾದಲ್ಲಿ ಈ ಘಟನೆ ನಡೆದಿತ್ತು, 35 ವರ್ಷದ ವ್ಯಕ್ತಿ ಅಬ್ದುಲ್ ರೋಸಿದ್ ಎಂಬವರಿಗೆ ಸಿಡಿಲು ಬಡಿದಿತ್ತು.
ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಬ್ದುಲ್ ರೋಸಿದ್ ಮಳೆಗೆ ಕೊಡೆಯನ್ನು ಹಿಡಿದುಕೊಂಡು ಬೃಹತ್ ಟ್ರಕ್‌ಗಳಿರುವ ಕಾರ್ಖಾನೆಯ ಪಾರ್ಕಿಂಗ್ ಸ್ಥಳದ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದಾಗ ಸಿಡಿಲು ಇವರ ಕೊಡೆಗೆ ಬಡಿದು ಇವರ ಮೇಲೆರಗಿದೆ, ಸ್ಥಳದಲ್ಲೇ ಇವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿಗೆ ಧಾವಿಸಿದ ಉಳಿದ ಸೆಕ್ಯೂರಿಟಿ ಗಾರ್ಡ್‌ಗಳು ತಕ್ಷಣವೇ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.