ಕೆನಡಾ ಚುನಾವಣೆಯಲ್ಲಿ ಲಿಬರಲ್ ಪಕ್ಷ ಗೆಲುವು ಸಾಧಿಸಿದೆ. ಮಾರ್ಕ್ ಕಾರ್ನೆ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಿದೆ. ಖಲಿಸ್ತಾನಿ ಪರ ನಾಯಕ ಜಗ್ಮೀತ್ ಸಿಂಗ್ ಸೋತಿದ್ದಾರೆ. ಕಾರ್ನೆ ಭಾರತದೊಂದಿಗೆ ಉತ್ತಮ ಸಂಬಂಧ ಬಯಸಿದ್ದು, ದ್ವಿಪಕ್ಷೀಯ ಸಂಬಂಧ ಮತ್ತೆ ಗಟ್ಟಿಗೊಳಿಸುವ ಭರವಸೆ ನೀಡಿದ್ದಾರೆ. ಆದರೆ ಇದು ಚುನಾವಣಾ ತಂತ್ರವೇ ಎಂಬುದು ಬೇಗನೆ ತಿಳಿಯಲಿದೆ.
ಕೆನಡಾ(ಏ.29) ಕೆನಾಡ ಚುನಾವಣೆ ಹಲವು ಅಚ್ಚರಿಗಳನ್ನು ನೀಡಿದೆ. ಖಲಿಸ್ತಾನಿಗಳ ಬೆಂಬಲದಿಂದಲೇ ಆಯ್ಕೆಯಾಗುತ್ತಿದ್ದ ಖಲಿಸ್ತಾನಿ ಪರ ನಾಯಕ ಜಗ್ಮಿತ್ ಸಿಂಗ್ ಸೋಲು ಕಂಡಿದ್ದಾರೆ. ಇದೇ ವೇಳೆ ಕೆನಡಾದ ಲಿಬರಲ್ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಗಿಟ್ಟಿಸಿಕೊಂಡಿದೆ. ಲಿಬರಲ್ ಪಾರ್ಟಿ ನಾಯಕ ಮಾರ್ಕ್ ಕಾರ್ನೆ ಇದೀಗ ಕನೆಡಾ ನೂತನ ಪ್ರಧಾನಿಯಾಗಿ ಮರಳು ಸಾಧ್ಯತೆ ದಟ್ಟವಾಗಿದೆ. ಕೆನಡಾ ಚುನಾವಣೆಗೂ ಮೊದಲು ನಡೆಸಿದ ಪ್ರಚಾರದಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ವಾರ್ನಿಂಗ್ ನೀಡಿದ್ದ ಮಾರ್ಕ್ ಕಾರ್ನೆ ಇದೀಗ ಕೆನಡಾ ಪ್ರಧಾನಿಯಾಗಿ ಮರಳುವುದು ಬಹುತೇಕ ಖಚಿತವಾಗಿದೆ.
ಭಾರತ-ಕನೆಡಾ ಸಂಬಂಧ ಸರಿಯಾಗುತ್ತಾ?
ಕೆನಡಾದಲ್ಲಿ ಲಿಬರಲ್ ಪಾರ್ಟಿ ಅಧಿಕಾರಕ್ಕೇರಿದೆ. ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇದೀಗ ಹಳಸಿ ಹೋಗಿರುವ ಭಾರತ ಹಾಗೂ ಕೆನಡಾ ಸಂಬಂಧ ಸರಿಯಾಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೋ ಅವಧಿಯಲ್ಲಿ ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ಹಳಸಿತ್ತು. ಪ್ರಮುಖಾಗಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಅನ್ನೋ ಆಧಾರ ರಹಿತ ಆರೋಪ ಮಾಡಿ ಸಂಬಂಧಕ್ಕೆ ಹುಳಿ ಹಿಂಡಿದ್ದರು. ಬಳಿಕ ಖಲಿಸ್ತಾನಿಗಳಿಗೆ ಬಹಿರಂಗ ಬೆಂಬಲ ಸೂಚಿಸಿ ಭಾರತದ ಆಕ್ರೋಶಕ್ಕೆ ತುತ್ತಾಗಿದ್ದರು.
ಮಾರ್ಕ್ ಕಾರ್ನೆಯಿಂದ ಭಾರತಕ್ಕೇನು ಲಾಭ?
ಮಾರ್ಕ್ ಕಾರ್ನೆ ಚುನಾವಣಾ ಪ್ರಚಾರದ ವೇಳೆ ಭಾರತದ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದಿದ್ದರು. ಆರ್ಥಿಕವಾಗಿ, ವ್ಯಾಪಾರ ವಹಿವಾಟುಗಳ ಮೂಲಕ ಹಾಗೂ ಬಾಂಧವ್ಯದ ಮೂಲಕ ಭಾರತ ಹಾಗೂ ಕೆನಡಾ ನಡುವೆ ಸಂಬಂಧ ಉತ್ತಮವಾಗಿರಬೇಕು. ಎರಡು ದೇಶಗಳು ಪರಸ್ಪರ ಒಗ್ಗಟ್ಟನಲ್ಲಿ ಮುನ್ನಡೆಯಬೇಕು. ಭಾರತೀಯರು ಕೆನಡಾದ ಭಾಗವಾಗಿದ್ದಾರೆ. ಕೆನಡಾ ಹಾಗೂ ಭಾರತೀಯರು ನಡುವೆ ಉತ್ತಮ ಸಂಬಂಧವಿದೆ. ಇದು ರಾಜತಾಂತ್ರಿಕ ಕಾರಣ, ದೇಶಗಳ ಕಾರಣದಿಂದ ಉದ್ವಿಘ್ನವಾಗಬಾರದು ಎಂದಿದ್ದರು.
ಅಧಿಕಾರಕ್ಕೆ ಬಂದರೆ ಭಾರತ-ಕೆನಡಾ ಸಂಬಂಧ ಗಟ್ಟಿ
ಪ್ರಚಾರದಲ್ಲಿ ತಾನು ಅಧಿಕಾರಕ್ಕೆ ಬಂದರೆ ಭಾರತ ಹಾಗೂ ಕೆನಡಾ ಸಂಬಂಧ ಗಟ್ಟಿಗೊಳಿಸುವುದಾಗಿ ಮಾರ್ಕ್ ಕಾರ್ನೆ ಹೇಳಿದ್ದರು. ಸದ್ಯ ಭಾರತ ಹಾಗೂ ಕೆನಡಾ ಸಂಬಂಧ ಬಿರುಕು ಬಿಟ್ಟಿದೆ. ಈ ಸಂಬಂಧವನ್ನು ಮತ್ತೆ ಪುನಸ್ಥಾಪಿಸಲಾಗುವುದು ಎಂದಿದ್ದರು. ಡೋನಾಲ್ಡ್ ಟ್ರಂಪ್ ತೆರಿಗೆ ನೀತಿಯಿಂದ ಕೆನಡಾವನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಕೆನಡಾ ಹಲವು ದೇಶಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲಿದೆ ಎಂದು ಮಾರ್ಕ್ ಕಾರ್ನೆ ಹೇಳಿದ್ದಾರೆ.
ಮಾರ್ಕ್ ಕಾರ್ನೆ ಹೇಳಿಕೆಗಳು ಹಾಗೂ ಇದೀಗ ಕಾರ್ನೆ ಪ್ರಧಾನಿಯಾಗಿ ಮರಳುತ್ತಿರುವ ನಡೆ ಭಾರತಕ್ಕೆ ಆಶಾದಾಯಕವಾಗಿದೆ ನಿಜ. ಆದರೆ ಇದು ಭಾರತೀಯ ಸಮುದಾಯದ ಮತ ಪಡೆಯಲು ಮಾಡಿದ ಕುತಂತ್ರವೇ ಅನ್ನೋದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
