ಇಸ್ಲಾಮಾಬಾದ್‌(ಅ.07): ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ಪರ ವಾದ ಮಂಡಿಸಲು ಪಾಕಿಸ್ತಾನ ವಕೀಲರು ನಿರಾಕರಿಸಿದ್ದಾರೆ.

ಕುಲಭೂಷಣ್‌ ಪರ ವಾದ ಮಂಡಿಸಲು ಭಾರತೀಯ ವಕೀಲರೊಬ್ಬರನ್ನು ಅಥವಾ ಇನ್ನೊಂದು ದೇಶದ ವಕೀಲರನ್ನು ನೇಮಿಸಲು ಅವಕಾಶ ನೀಡುವಂತೆ ಭಾರತ ಕೇಳಿಕೊಂಡಿತ್ತು. ಆದರೆ, ಈ ಕೋರಿಕೆಯನ್ನು ನಿರಾಕರಿಸಿದ್ದ ಇಸ್ಲಾಮಾಬಾದ್‌ ಹೈಕೋರ್ಟ್‌, ಮಖ್ದೂಮ್‌ ಅಲಿ ಖಾನ್‌ ಹಾಗೂ ಅಬಿದ್‌ ಹಸನ್‌ ಮಿಂಟೋ ಎಂಬ ಇಬ್ಬರು ಹಿರಿಯ ವಕೀಲರ ನೆರವು ಪಡೆಯುವಂತೆ ಸೂಚಿಸಿತ್ತು.

ಆದರೆ, ತಾನು ಬಹಳ ಹಿಂದೆಯೇ ನಿವೃತ್ತಿ ಆಗಿದ್ದು, ವಕೀಲಿಕೆ ಮಾಡುತ್ತಿಲ್ಲ ಎಂದು ಅಬಿದ್‌ ಹಸನ್‌ ಮಿಂಟೋ ನೆಪ ಹೇಳಿದರೆ, ಮಖ್ದೂಮ್‌ ಅಲಿ ಖಾನ್‌ ತಮಗೆ ಪೂರ್ವ ಯೋಜಿತ ಕೆಲಸಗಳು ಇವೆ ಎಂದು ಹೇಳಿ ಕುಲಭೂಷಣ್‌ ಪರ ವಾದ ಮಂಡನೆಯಿಂದ ತಪ್ಪಿಸಿಕೊಂಡಿದ್ದಾರೆ.