* ಆಫ್ಘನ್ನರೇ ದೇವರು ನಿಮ್ಮನ್ನು ಕಾಪಾಡಲಿ...* ಯುದ್ಧೋತ್ಸಾಹದೊಂದಿಗೆ ಆಗಮಿಸಿ ಸೋತು ಸುಣ್ಣವಾದ ಅಮೆರಿಕ* 20 ವರ್ಷಗಳ ಬಳಿಕ ವಿದೇಶಿ ಪಡೆಗಳು ಔಟ್‌

ಕಾಬೂಲ್‌(ಆ.31): ತಾಲಿಬಾನ್‌ ಭಯೋತ್ಪಾದಕರ ಆಳ್ವಿಕೆಯನ್ನು ಕೊನೆಗಾಣಿಸುವ ಉದ್ದೇಶದೊಂದಿಗೆ 20 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಬಂದಿದ್ದ ಅಮೆರಿಕದ ಯೋಧರ ಕಡೆಯ ತಂಡ ಮಂಗಳವಾರ ದೇಶವನ್ನು ತೊರೆದು ತವರಿಗೆ ಮರಳಲಿದೆ. ಇದರೊಂದಿಗೆ ಅಮೆರಿಕ ನಡೆಸಿದ ಸುದೀರ್ಘ ಯುದ್ಧಕ್ಕೆ ತೆರೆ ಬೀಳಲಿದೆ. ಅಮೆರಿಕದ ಜೊತೆ ಯುದ್ಧದ ಭಾಗವಾಗಿದ್ದ ಸುಮಾರು 40 ದೇಶಗಳ ಸೈನಿಕರು ಈಗಾಗಲೇ ತವರಿಗೆ ಮರಳಿದ್ದು ಕಡೆಯದಾಗಿ ದೇಶ ಬಿಡುವ ಸರದಿ ಅಮೆರಿಕದ್ದಾಗಿರಲಿದೆ. ಇದರೊಂದಿಗೆ ಸರಿಸುಮಾರು 4 ಕೋಟಿ ಅಫ್ಘಾನಿಸ್ತಾನ ಪ್ರಜೆಗಳು ಮರಳಿ ತಾಲಿಬಾನ್‌ ಕಪಿಮುಷ್ಟಿಗೆ ಸಿಲುಕಲಿದ್ದಾರೆ.

ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕ ಹಾಗೂ ತಾಲಿಬಾನ್‌ ಉಗ್ರರ ನಡುವೆ ಏರ್ಪಟ್ಟಿರುವ ಒಪ್ಪಂದದ ಪ್ರಕಾರ, ದೇಶದಲ್ಲಿರುವ ಎಲ್ಲ ವಿದೇಶಗಳ ಸೈನಿಕರು ಆ.31ರೊಳಗೆ ಅಫ್ಘಾನಿಸ್ತಾನವನ್ನು ತೊರೆಯಬೇಕಿದೆ. ಈ ಒಪ್ಪಂದಕ್ಕೆ ಬದ್ಧ ಎಂದು ಅಮೆರಿಕ ಕೂಡ ಈಗಾಗಲೇ ಘೋಷಿಸಿದೆ.

ಅಮೆರಿಕದ ವಿಶ್ವ ವಾಣಿಜ್ಯ ಗೋಪುರಗಳ ಮೇಲೆ 2001ರ ಸೆ.11ರಂದು ವಿಮಾನಗಳನ್ನು ಡಿಕ್ಕಿ ಹೊಡೆಸಿ ಸಹಸ್ರಾರು ನಾಗರಿಕರನ್ನು ಅಲ್‌ಖೈದಾ ಭಯೋತ್ಪಾದಕರು ಕೊಂದಿದ್ದರು. ಅಲ್‌ಖೈದಾ ನೇತಾರರಿಗೆ ತಾಲಿಬಾನ್‌ ಆಶ್ರಯ ನೀಡಿತ್ತು. ಹೀಗಾಗಿ ಅಫ್ಘಾನಿಸ್ತಾನದ ಮೇಲೆ ಅಮೆರಿಕ ನೇತೃತ್ವದಲ್ಲಿ 40 ದೇಶಗಳನ್ನು ಒಳಗೊಂಡ ನ್ಯಾಟೋ ಪಡೆಗಳು ದಾಳಿ ನಡೆಸಿದ್ದವು.

ತಾಲಿಬಾನ್‌ನ ಕ್ರೂರ ಆಡಳಿತದಿಂದ ನಲುಗಿದ್ದ ಸ್ಥಳೀಯ ಜನರು ತಾಲಿಬಾನ್‌ ಆಳ್ವಿಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಸಂತೋಷಗೊಂಡಿದ್ದರು. ಪ್ರಜಾಪ್ರಭುತ್ವ ಸರ್ಕಾರ ರಚನೆ ಕೂಡ ಆಗಿತ್ತು. ಇತರೆ ದೇಶಗಳ ರೀತಿ ಸ್ವಾತಂತ್ರ್ಯವನ್ನು ಆಫ್ಘನ್ನರು ಅನುಭವಿಸಿದ್ದರು.

ಆದರೆ 20 ವರ್ಷಗಳ ಹೋರಾಟದ ಹೊರತಾಗಿಯೂ ಯುದ್ಧದಲ್ಲಿ ಏನು ಸಾಧಿಸಲಾಗದ ಕಾರಣ, ಸ್ವತಃ ಅಮೆರಿಕವೇ ಉಗ್ರರ ಜೊತೆ ಸಂಧಾನ ನಡೆಸಿ, ಅವರಿಗೆ ಅಧಿಕಾರದ ಹಸ್ತಾಂತರದ ಹೆಜ್ಜೆ ಇಟ್ಟಿತ್ತು. ಅದರ ಭಾಗವಾಗಿ ಇದೀಗ ತಾಲಿಬಾನ್‌ ಮತ್ತೆ ದೇಶವನ್ನು ವಶಕ್ಕೆ ತೆಗೆದುಕೊಂಡಿದೆ. ಹಲವು ಕಟ್ಟುಪಾಡುಗಳನ್ನು ಹೇರಲು ಆರಂಭಿಸಿದೆ. ದೇಶ ತೊರೆದು ಹೋಗಲು ಸಾಕಷ್ಟುಜನರು ಪ್ರಯತ್ನಿಸುತ್ತಿದ್ದಾರಾದರೂ ಅವಕಾಶ ಸಿಗುತ್ತಿಲ್ಲ.

20 ವರ್ಷಗಳ ಬಳಿಕ ವಿದೇಶಿ ಪಡೆಗಳು ಔಟ್‌

ಉಗ್ರರನ್ನು ಮಣಿಸುವ ಭಾರೀ ಉತ್ಸಾಹದೊಂದಿಗೆ 20 ವರ್ಷಗಳ ಹಿಂದೆ ಅಷ್ಘಾನಿಸ್ತಾನಕ್ಕೆ ಕಾಲಿಟ್ಟಿದ್ದ ಅಮೆರಿಕ ಮತ್ತು ನ್ಯಾಟೋ ಪಡೆಗಳ ಯೋಧರು ಸೋಲಿನ ಕಹಿನೆನಪಿನೊಂದಿಗೆ ಮಂಗಳವಾರ ದೇಶವನ್ನು ತೊರೆಯಲಿದ್ದಾರೆ. ಇದರೊಂದಿಗೆ ಅಮೆರಿಕ ನಡೆಸಿದ ಸುದೀರ್ಘ ಯುದ್ಧಕ್ಕೆ ತೆರೆ ಬಿದ್ದಿದೆ. ಈ ಯುದ್ಧ ಯೋಧರು, ನಾಗರಿಕರು, ಉಗ್ರರು ಸೇರಿ 1.72 ಲಕ್ಷ ಜನರನ್ನು ಬಲಿ ಪಡೆಯಿತು. ವಿವಿಧ ದೇಶಗಳಿಗೆ ಅಂದಾಜು 80 ಲಕ್ಷ ಕೋಟಿ ರು. ವೆಚ್ಚವಾಯ್ತು. ಅದನ್ನು ಹೊರತುಪಡಿಸಿದರೆ ವಿದೇಶಿ ಪಡೆಗಳು ಸಾಧಿಸಿದ್ದು ಏನೂ ಇಲ್ಲ. ಯಾರನ್ನು ಮಣಿಸಬೇಕೆಂಬ ಹೆಬ್ಬಯಕೆಯೊಂದಿಗೆ ಕಾಲಿಡಲಾಗಿತ್ತೋ ಅದೇ ಉಗ್ರರೊಂದಿಗೆ ಸಂಧಾನ ಮಾತುಕತೆ ನಡೆಸಿ, ದೇಶದ 4 ಕೋಟಿ ಅಮಾಯಕ ನಾಗರಿಕರನ್ನು ಮತ್ತೆ ಅವರ ತೆಕ್ಕೆಗೆ ವಹಿಸಿ, ಇಂದು ಅಮೆರಿಕ ಕಡೆಯದಾಗಿ ಅಷ್ಘಾನಿಸ್ತಾನದಿಂದ ಹೊರ ನಡೆಯುತ್ತಿದೆ. ಹೀಗಾಗಿ ಕ್ರೂರ, ಹೇಯ ಕೃತ್ಯಗಳಿಗೆ ಹೆಸರಾದ ತಾಲಿಬಾನಿಗಳಿಂದ ದೇಶದ ಜನತೆ ಕಾಪಾಡುವುದು ಇನ್ನು ದೇವರ ಹೊಣೆಯಷ್ಟೇ...