China Conspiracy: ಉಗಾಂಡದ ಬೆನ್ನಲ್ಲೇ, ಚೀನಾದ ಸಾಲದ ಸುಳಿಗೆ ಸಿಕ್ಕ ಲಾವೋಸ್‌!

* ಚೀನಾದ ಸಾಲದಿಂದ ಲಾವೋಸ್‌ ರೈಲು ಮಾರ್ಗ ನಿರ್ಮಾಣ

* 1035 ಕಿ.ಮೀ ಉದ್ದದ ರೈಲು ಮಾರ್ಗ ಉದ್ಘಾಟನೆಗೆ ಚೀನಾ ಒತ್ತಡ

* ಉಗಾಂಡದ ಬೆನ್ನಲ್ಲೇ, ಚೀನಾದ ಸಾಲದ ಸುಳಿಗೆ ಸಿಕ್ಕ ಲಾವೋಸ್‌!

* ಜನ ಸಂಚಾರ ಇಲ್ಲದ್ದಾಗ್ಯೂ, ರೈಲು ಮಾರ್ಗ ಉದ್ಘಾಟನೆಗೆ ನಿರ್ಧಾರ

Laos China railway to launch as debt to Beijing mounts pod

ಬೀಜಿಂಗ್‌(ಡಿ.03): ಆಫ್ರಿಕಾದ ಉಗಾಂಡದ (Uganda) ಬೆನ್ನಲ್ಲೇ, ಇದೀಗ ಚೀನಾ (China) ಸಾಲದ ರಾಜತಾಂತ್ರಿಕತೆಯ ಸುಳಿವಿಗೆ ಲಾವೋಸ್‌ ಸಿಲುಕಿಕೊಂಡಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸಾಲದ ನೆರವಿನಲ್ಲಿ ಲಾವೋಸ್‌ 44 ಸಾವಿರ ಕೋಟಿ ರು.(5.9 ಬಿಲಿಯನ್‌ ಡಾಲರ್‌) ವೆಚ್ಚದಲ್ಲಿ 1035 ಕಿ.ಮೀ. ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡಿದೆ. ಆದರೆ ಕೊರೋನಾ (Coronavirus) ಕಾರಣಕ್ಕೆ ಜನ-ಸಾಮಾನ್ಯರ ಸಂಚಾರಕ್ಕೆ ಅನುಮತಿಯಿಲ್ಲ. ಆದಾಗ್ಯೂ, ಚೀನಾದ ಒತ್ತಡಕ್ಕೆ ಮಣಿದಿರುವ ಲಾವೋಸ್‌ (Laos), ಚೀನಾದ ವಾಣಿಜ್ಯ-ವ್ಯವಹಾರಕ್ಕೆ ನೆರವಾಗುವ ಈ ರೈಲು ಮಾರ್ಗದ ಉದ್ಘಾಟನೆಗೆ ಮುಂದಾಗಿದೆ.

ಈ ರೈಲು ಮಾರ್ಗದಿಂದ ಭವಿಷ್ಯದ ದಿನಗಳಲ್ಲಿ ಲಾವೋಸ್‌ ಅಕ್ಕಪಕ್ಕದ ದೇಶಗಳಾದ ವಿಯೆಟ್ನಾಂ, ಥಾಯ್ಲೆಂಡ್‌, ಮ್ಯಾನ್ಮಾರ್‌, ಮಲೇಷಿಯಾ ಮತ್ತು ಸಿಂಗಾಪುರಗಳಿಗೆ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುವುದು ಚೀನಾದ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ರೈಲು ಮಾರ್ಗದಿಂದ ಈವರೆಗೆ ಪ್ರತ್ಯೇಕವಾಗಿದ್ದ ತಮ್ಮ ಆರ್ಥಿಕತೆಯು ಚೀನಾ ಮತ್ತು ಇತರೆ ಬೃಹತ್‌ ಮಾರುಕಟ್ಟೆಗಳಿಗೆ ನೇರ ಸಂಪರ್ಕ ಕಲ್ಪಿಸಿಕೊಡುತ್ತದೆ ಎಂದು ಲಾವೋಸ್‌ ನಾಯಕರು ಹರ್ಷಿಸುತ್ತಿದ್ದಾರೆ. ಚೀನಾ ಮತ್ತು ಇತರೆ ದೇಶಗಳಿಗೆ ಹೆಚ್ಚು ಲಾಭವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಲಾವೋಸ್‌ಗೆ ಎಷ್ಟುಲಾಭವಾಗಲಿದೆ ಎಂಬುದು ಚೀನಾದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ವಿದೇಶಾಂಗ ತಜ್ಞರು ವಿಶ್ಲೇಷಿಸಿದ್ದಾರೆ.

ಬೆಲ್ಟ್‌ ಮತ್ತು ರಸ್ತೆ ಯೋಜನೆಯಡಿ ಬಂದರುಗಳು, ರೈಲು ಮಾರ್ಗಗಳ ಮುಖಾಂತರ ಏಷ್ಯಾ, ಆಫ್ರಿಕಾ ಮತ್ತು ಪೆಸಿಫಿಕ್‌ಗಳಿಗೆ ಜಾಲ ವಿಸ್ತರಿಸುವುದು ಚೀನಾದ ಮಹತ್ವಾಕಾಂಕ್ಷೆಯಾಗಿದೆ. ಒಂದು ಬೆಲ್ಟ್‌ ಒಂದು ರಸ್ತೆಯ ಯೋಜನೆಯಡಿಯ ನೂರಾರು ಯೋಜನೆಗಳಲ್ಲಿ ಲಾವೋಸ್‌ ರಾಜಧಾನಿ, ವಿಯೆಟ್ನಾಂನಿಂದ ಚೀನಾದ ಕುನ್ಮಿಂಗ್‌ಗೆ ಸಂಪರ್ಕ ಕಲ್ಪಿಸುವ ಈ ರೈಲು ಮಾರ್ಗವೂ ಒಂದಾಗಿದೆ.

ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ: ಏಕೈಕ ವಿಮಾನ ನಿಲ್ದಾಣವೂ ಡ್ರ್ಯಾಗನ್ ವಶಕ್ಕೆ?

ದೇಶದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಕಳೆದುಕೊಳ್ಳುವ ಭೀತಿಯಲ್ಲಿ ಉಗಾಂಡ ಸರ್ಕಾರ ಇದೆ. ಈ ನಡುವೆ ಈಗಾಗಲೇ ಉಗಾಂಡದಿಂದ ಚೀನಾ ವಿಮಾನ ನಿಲ್ದಾಣ ವಶಪಡಿಸಿಕೊಂಡಿದೆ ಎಂಬ ವರದಿಗಳನ್ನು ಚೀನಾ ಮತ್ತು ಉಗಾಂಡ ಎರಡೂ ದೇಶಗಳು ಸ್ಪಷ್ಟವಾಗಿ ತಳ್ಳಿಹಾಕಿವೆ.

ಏನಿದು ಪ್ರಕರಣ?:

ತನ್ನ ಎಂಟೆಬ್ಬೆ ವಿಮಾನ ನಿಲ್ದಾಣ ವಿಸ್ತರಣೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಉಗಾಂಡ ಸರ್ಕಾರ ಚೀನಾದ ಎಕ್ಸ್‌ಪೋರ್ಟ್‌- ಇಂಪೋರ್ಟ್‌ ಬ್ಯಾಂಕ್‌ನಿಂದ 1550 ಕೋಟಿ ರು. ಸಾಲ ಪಡೆದುಕೊಂಡಿತ್ತು. ಈ ಸಾಲ ಮರುಪಾವತಿಗೆ ಮೊದಲ 7 ವರ್ಷ ಮಾರಟೋರಿಯಂ ಇತ್ತು. ನಂತರ ಶೇ.2ರಷ್ಟುಬಡ್ಡಿಯೊಂದಿಗೆ ಹಣ ಮರುಪಾವತಿ ಮಾಡಬೇಕಿತ್ತು. ಒಂದು ವೇಳೆ ಹಣ ಮಾರುಪಾವತಿ ಮಾಡದೇ ಇದ್ದರೆ, ಯಾವುದೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಇಲ್ಲದೆಯೇ, ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯುವ ಷರತ್ತನ್ನು ಚೀನಾ ಹಾಕಿತ್ತು.

ಮರುಪಾವತಿ ಇಲ್ಲ:

ಈ ನಡುವೆ ನಾನಾ ಕಾರಣಗಳಿಂದಾಗಿ ಉಗಾಂಡ ಸರ್ಕಾರ ಹಣ ಮರುಪಾವತಿ ಮಾಡಲು ವಿಫಲವಾಗಿತ್ತು. ಹೀಗಾಗಿ ಅದು ನಿಲ್ದಾಣವನ್ನು ಚೀನಾಕ್ಕೆ ಒಪ್ಪಿಸುವ ಭೀತಿ ಎದುರಿಸುತ್ತಿತ್ತು. ಇದನ್ನು ತಪ್ಪಿಸಲು ಕೆಲ ತಿಂಗಳ ಹಿಂದೆ ಉಗಾಂಡ ಅಧಿಕಾರಿಗಳು ಚೀನಾಕ್ಕೆ ತೆರಳಿ ಕೆಲವೊಂದು ವಿನಾಯ್ತಿ ಕೋರಿದ್ದರು. ಆದರೆ ಯಾವುದೇ ವಿನಾಯ್ತಿಗೆ ಚೀನಾ ಸ್ಪಷ್ಟವಾಗಿ ನಿರಾಕರಿಸಿತ್ತು. ಹೀಗಾಗಿ ಯಾವುದೇ ಕ್ಷಣದಲ್ಲಿ ವಿಮಾನ ನಿಲ್ಧಾಣ ಕಳೆದುಕೊಳ್ಳುವ ಭೀತಿಯಲ್ಲಿ ಆ ದೇಶವಿದೆ.

Latest Videos
Follow Us:
Download App:
  • android
  • ios