ಅಮೆರಿಕದ ಡಲ್ಲಾಸ್‌ನಲ್ಲಿ ಸೆ.10ರಂದು ಪತ್ನಿ, ಪುತ್ರನ ಎದುರೇ ಭೀಕರವಾಗಿ ಹತ್ಯೆಗೀಡಾಗಿರುವ ಬೆಂಗಳೂರು ಮೂಲದ ಹೋಟೆಲ್‌ ವ್ಯವಸ್ಥಾಪಕ ಚಂದ್ರಮೌಳಿ ‘ಬಾಬ್‌’ ನಾಗಮಲ್ಲಯ್ಯ ಅವರ ಕುಟುಂಬದ ನೆರವಿಗೆ ಇದೀಗ ಅಮೆರಿಕದಲ್ಲಿ ನೆಲೆಸಿರುವ ಯುವ ಗುಜರಾತಿ ಉದ್ಯಮಿಗಳು ಮುಂದೆ ಬಂದಿದ್ದಾರೆ.

ಸೂರತ್‌: ಅಮೆರಿಕದ ಡಲ್ಲಾಸ್‌ನಲ್ಲಿ ಸೆ.10ರಂದು ಪತ್ನಿ, ಪುತ್ರನ ಎದುರೇ ಭೀಕರವಾಗಿ ಹತ್ಯೆಗೀಡಾಗಿರುವ ಬೆಂಗಳೂರು ಮೂಲದ ಹೋಟೆಲ್‌ ವ್ಯವಸ್ಥಾಪಕ ಚಂದ್ರಮೌಳಿ ‘ಬಾಬ್‌’ ನಾಗಮಲ್ಲಯ್ಯ ಅವರ ಕುಟುಂಬದ ನೆರವಿಗೆ ಇದೀಗ ಅಮೆರಿಕದಲ್ಲಿ ನೆಲೆಸಿರುವ ಯುವ ಗುಜರಾತಿ ಉದ್ಯಮಿಗಳು ಮುಂದೆ ಬಂದಿದ್ದಾರೆ. ಈವರೆಗೆ 4 ಕೋಟಿ ರು. ದೇಣಿಗೆ ಸಂಗ್ರಹಿಸಿದ್ದಾರೆ.

ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಟೆಲ್‌ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಗುಜರಾತ್‌ನ ಯುವ ಉದ್ಯಮಿಗಳು ಆನ್‌ಲೈನ್‌ ನಿಧಿ ಸಂಗ್ರಹಕ್ಕೆ ಇಳಿದಿದ್ದಾರೆ. ಏಷ್ಯನ್‌ ಅಮೆರಿಕನ್‌ ಹೋಟೆಲ್‌ ಓನರ್ಸ್‌ ಅಸೋಸಿಯೇಷನ್‌(ಎಎಎಚ್ಒಎ) ಚಾರಿಟೆಬಲ್‌ ಫೌಂಡೇಷನ್‌ ಕೂಡ ಚಂದ್ರಮೌಳಿ ಅವರ ಪುತ್ರನ ಶಿಕ್ಷಣಕ್ಕೆ ಹಣಕಾಸು ನೆರವು ನೀಡಲು ಮುಂದೆ ಬಂದಿದೆ.

ಚಂದ್ರಮೌಳಿ ಹಾಗೂ ಅವರ ಕುಟುಂಬದ ಕುರಿತು ಮಾಹಿತಿ ಇರುವವರು ಆನ್‌ಲೈನ್‌ ಮೂಲಕ ‘ಗೋಫಂಡ್‌ ಮಿ’ ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ.

‘ಚಂದ್ರಮೌಳಿ ಅವರ ಕುಟುಂಬ ದುಡಿವ ವ್ಯಕ್ತಿಯನ್ನು ಕಳೆದುಕೊಂಡಿದೆ. ಅವರ ಪುತ್ರ ಈಗಷ್ಟೇ ಹೈಸ್ಕೂಲ್‌ ಮುಗಿಸಿದ್ದಾನೆ. ವಿಶ್ವಾದ್ಯಂತ ಚಂದ್ರಮೌಳಿ ಅವರ ಕುಟುಂಬಕ್ಕೆ ನೆರವು ಹರಿದು ಬರುತ್ತಿರುವುದನ್ನು ನೋಡಿ ಖುಷಿಯಾಗಿದೆ’ ಎಂದು ಈ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ತನ್ಮಯ್‌ ಎಂಬುವರು ಹೇಳಿಕೊಂಡಿದ್ದಾರೆ.

- ಅಮೆರಿಕದಲ್ಲಿರುವ ಯುವ ಗುಜರಾತಿ ಉದ್ಯಮಿಗಳಿಂದ ಸಹಾಯ

- ಆನ್‌ಲೈನ್‌ ಫಂಡಿಂಗ್‌ ಮೂಲಕ ಈಗಾಗಲೇ ₹4 ಕೋಟಿ ಸಂಗ್ರಹ

- ಅಮೆರಿಕದಲ್ಲಿ ಹಂತಕನ ಗುಂಡಿಗೆ ಬಲಿಯಾಗಿದ್ದ ಚಂದ್ರಮೌಳಿ