ಅಮೆರಿಕದ ತೆರಿಗೆ ನಿರ್ಧಾರಕ್ಕೆ ಮೋದಿಯೇ ಕಾರಣ ಎಂದು ಸಚಿವ ಎಂಬಿ ಪಾಟೀಲ್ ಆರೋಪಿಸಿದ್ದಾರೆ. ಭೀಮಾ ನದಿ ಪ್ರವಾಹ, ಜಾತಿ ಸಮೀಕ್ಷೆ ಗೊಂದಲ, ಪೊಲೀಸ್ ನೇಮಕಾತಿ ವಿಳಂಬ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಮಾತನಾಡಿದ್ದು, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.
ಬೆಂಗಳೂರು: ಅಮೆರಿಕವು ಭಾರತೀಯ ಔಷಧಗಳ ಮೇಲೆ 100% ತೆರಿಗೆ ವಿಧಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್, ಈ ನಿರ್ಧಾರದಿಂದ ಭಾರತದ ಐಟಿ ವಲಯ ಹಾಗೂ ಔಷಧ ತಯಾರಿಕಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ನೇರ ಕಾರಣ. ಟ್ರಂಪ್‌ನ್ನು ಒಲಿಸಿಕೊಳ್ಳಲು, ಅವರ ಚುನಾವಣಾ ಪ್ರಚಾರಕ್ಕೂ ಹೋಗಿ ಬೆಂಬಲ ನೀಡಿದ ಮೋದಿ ಈಗ ದೇಶವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಉತ್ಪಾದನಾ ವಲಯಕ್ಕೆ ಇದು ಭಾರೀ ಹೊಡೆತವಾಗಲಿದೆ. ಆದರೆ ದೇಶ ಎದುರಿಸುವ ಶಕ್ತಿ ಹೊಂದಿದೆ, ನಾವು ಒಟ್ಟಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭೀಮಾ ನದಿ ಪ್ರವಾಹಕ್ಕೆ ಜಾಗೃತಿಯ ಅವಶ್ಯಕತೆ
ಭೀಮಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ 3.5 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದರು. ಸಿಎಂ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ವಹಣಾ ಕ್ರಮಗಳನ್ನು ರೂಪಿಸಲಾಗಿದೆ. ಡಿಸಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸುವತ್ತ ತೊಡಗಿದ್ದಾರೆ. ಅಗತ್ಯವಿದ್ದರೆ ನಾನು ಸ್ವತಃ ಪ್ರವಾಸ ಕೈಗೊಳ್ಳುತ್ತೇನೆ. ಪ್ರಕೃತಿಯ ಮುಂದೆ ನಾವು ಚಿಕ್ಕವರು, ಜಾಗರೂಕತೆಯೇ ಪರಿಹಾರ ಎಂದರು. ಪ್ರವಾಹದಿಂದ ಸಾಕಷ್ಟು ಬೆಳೆ ಹಾಗೂ ರಸ್ತೆ ಹಾನಿ ಉಂಟಾಗಿದೆ, ಆದರೆ ನಷ್ಟದ ಅಂದಾಜು ಇನ್ನೂ ಮಾಡಲಾಗಿಲ್ಲ ಎಂದು ಹೇಳಿದರು.
ಜಾತಿ ಸಮೀಕ್ಷೆ ಗೊಂದಲ ಶೀಘ್ರ ಬಗೆಹರಿಯಲಿದೆ
ಜಾತಿ ಸಮೀಕ್ಷೆಯ ಗೊಂದಲದ ಕುರಿತು ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಎಲ್ಲಾ ತಾಂತ್ರಿಕ ಸಮಸ್ಯೆಗಳು ಬಗೆಹರಿಯಲಿವೆ. ಸರ್ವರ್ ಹಾಗೂ ಆ್ಯಪ್ ಸಮಸ್ಯೆ, ಶಿಕ್ಷಕರ ಸಂಬಂಧಿತ ಅಡಚಣೆಗಳು ನಿವಾರಣೆಯಾಗುತ್ತವೆ. ಅಗತ್ಯವಿದ್ದರೆ ಗಡುವು ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇವೆ. ಆದರೆ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಕೋರ್ಟ್ ಸಮೀಕ್ಷೆ ಕಡ್ಡಾಯವಲ್ಲ ಎಂದು ಹೇಳಿದೆ. ಆದರೂ ಜನರು ಸಮೀಕ್ಷೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರತಾಪ್ ಸಿಂಹಗೆ ತಿರುಗೇಟು
ಪ್ರತಾಪ್ ಸಿಂಹ ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿದ ಎಂಬಿ ಪಾಟೀಲ್, ಪ್ರತಾಪ್ ಸಿಂಹ ಮೊದಲು ತಮ್ಮ ವಿಷಯಗಳನ್ನು ನೋಡಿಕೊಳ್ಳಲಿ. ಬಸವ ಧರ್ಮವನ್ನು ಯಾಕೆ ಬಸವಣ್ಣ ಸ್ಥಾಪಿಸಿದರು ಎಂಬುದನ್ನು ಅರ್ಥ ಮಾಡಿಕೊಂಡು ನಂತರ ಮಾತಾಡಲಿ” ಎಂದು ಕಿಡಿಕಾರಿದರು.
ಪೊಲೀಸ್ ಹುದ್ದೆಗಳ ನೇಮಕಾತಿ
ಧಾರವಾಡದಲ್ಲಿ ಪೊಲೀಸ್ ಹುದ್ದೆಗಳ ನೇಮಕಾತಿ ವಿಳಂಬದ ಕುರಿತು ಮಾತನಾಡಿದ ಅವರು, “ಒಳಮೀಸಲಾತಿ ಸಂಬಂಧಿತ ಗೊಂದಲದಿಂದ ಸಮಸ್ಯೆ ಉಂಟಾಗಿದೆ. ಆದರೆ ಸರ್ಕಾರ ಶೀಘ್ರದಲ್ಲೇ ಬಗೆಹರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಿದೆ” ಎಂದು ಭರವಸೆ ನೀಡಿದರು.
ಸಚಿವರ ಬದಲಾವಣೆ – ಹೈಕಮಾಂಡ್ ತೀರ್ಮಾನಕ್ಕೆ ಬದ್ಧತೆ
50% ಸಚಿವರ ಬದಲಾವಣೆ ಕುರಿತ ಎಂಎಲ್‌ಸಿ ಸಲೀಂ ಅಹಮದ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮದು ಹೈಕಮಾಂಡ್ ಸಂಸ್ಕೃತಿ. ಇದರ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಹಕ್ಕು. ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ” ಎಂದು ಸ್ಪಷ್ಟಪಡಿಸಿದರು.
