Asianet Suvarna News Asianet Suvarna News

ಲಂಡನ್ನಲ್ಲಿ ಮೊಳಗಲಿದೆ ಕನ್ನಡ ಬಳಗದ ಡಿಂಡಿಮ..!

ಕನ್ನಡ ಬಳಗ ಯು.ಕೆ. ಎನ್ನುವ ಚಾರಿಟಬಲ್ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲಸಿರುವ ಸಹಸ್ರಾರು ಕನ್ನಡಿಗರಿಗೆ ಎರಡನೇಯ ಮನೆಯಂತೆ ಕೆಲಸ ಮಾಡುತ್ತಿದೆ ಎನ್ನುವುದು ಇಲ್ಲಿನ ಹಲವು ಕನ್ನಡಿಗರ ಅಭಿಪ್ರಾಯವಾಗಿದೆ. 

Kannada Balaga Organization Will Be Held Ruby Festival in London grg
Author
First Published Sep 28, 2023, 11:01 AM IST

ಲಂಡನ್‌(ಸೆ.28):  ಯುನೈಟೆಡ್ ಕಿಂಗ್ಡಮ್‌ನ ಕನ್ನಡ ಬಳಗ ಸಂಸ್ಥೆ ಪ್ರಪಂಚದ ಹಲವೆಡೆ ಇರುವ ಅನಿವಾಸಿ ಕನ್ನಡಿಗರ ಕೂಟಗಳಲ್ಲಿ ಒಂದು ಹಿರಿಯ ಸಂಸ್ಥೆಯಾಗಿದೆ. ಇದೇ ವಾರಾಂತ್ಯ ಈ ಸಂಸ್ಥೆ ನಲವತ್ತರ ಮೈಲಿಗಲ್ಲನ್ನು ತಲುಪಿದ ಸಂತೋಷವನ್ನು ಆಚರಿಸಲು ಒಂದು ಅದ್ಧೂರಿ ಸಮಾರಂಭದ ತಯಾರಿಯಲ್ಲಿದೆ.

ಈ ರೂಬಿ ಉತ್ಸವವನ್ನು ಸೆ.30 ಮತ್ತು ಅ.01ರ ವಾರಾಂತ್ಯದಂದು ಇಂಗ್ಲೆಂಡಿನ ರಾಜಧಾನಿ, ಲಂಡನ್ ಮಹಾನಗರದ ಕ್ರೆಸ್‌ಟ್ ಚರ್ಚ್ ಅವೆನ್ಯೂದಲ್ಲಿರುವ ಬೈರನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದೇವೆ ಎಂದು ಕನ್ನಡ ಬಳಗದ ಹಾಲಿ ಅಧ್ಯಕ್ಷೆ ಸುಮನಾ ಗಿರೀಶ್ ಅವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

ಎನ್‌ಆರ್‌ಐ ಫೋರಂಗೆ ಬಲ ತುಂಬಲು ಅನಿವಾಸಿ ಕನ್ನಡಿಗರ ಆಗ್ರಹ

ಕನ್ನಡ ಬಳಗ ಯು.ಕೆ. ಎನ್ನುವ ಚಾರಿಟಬಲ್ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನೆಲಸಿರುವ ಸಹಸ್ರಾರು ಕನ್ನಡಿಗರಿಗೆ ಎರಡನೇಯ ಮನೆಯಂತೆ ಕೆಲಸ ಮಾಡುತ್ತಿದೆ ಎನ್ನುವುದು ಇಲ್ಲಿನ ಹಲವು ಕನ್ನಡಿಗರ ಅಭಿಪ್ರಾಯವಾಗಿದೆ. 1983ನೇ ಇಸವಿಯಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವ ಈ ಸಂಘ ವಿದೇಶೀ ನೆಲದಲ್ಲಿ ಕನ್ನಡ ತೇರನ್ನು ಎಳೆಯುವ ಕೆಲಸದಲ್ಲಿ ಅವಿರತ ತೊಡಗಿಕೊಂಡಿದೆ. ದೂರ ದೇಶವೊಂದರಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಕನ್ನಡ ನಾಡಿನ ಮೌಲ್ಯಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬೆರಳೆಣಿಕೆಯ ಉತ್ಸಾಹಿ ಕನ್ನಡಿಗರಿಂದ ಶುರುವಾದ ಕನ್ನಡ ಬಳಗದಲ್ಲಿ ಇಂದು ಸುಮಾರು 2500 ಜನ (800 ಕುಟುಂಬಗಳು) ಸಂಸ್ಥೆಯ ಸದಸ್ಯತ್ವ ಪಡೆದವರಾಗಿದ್ದಾರೆ ಎನ್ನಲಾಗಿದೆ.

ಕನ್ನಡ ಬಳಗದ ಚಟುವಟಿಕೆಗಳು

ಕರ್ನಾಟಕದ ಹೊರಗೆ ಪ್ರಥಮ ವಿಶ್ವ ಕನ್ನಡ ಸಮ್ಮೇಳನ 1988ರ ಆಗಸ್ಟ್‌ 27ರಿಂದ 29ರವರೆಗೆ ನಡೆಯಿತು. ಕನ್ನಡ ಬಳಗ, ಯು.ಕೆ ಸಂಸ್ಥೆಯು ಮ್ಯಾಂಚೆಸ್ಟೆರಿನಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಿದ ಹೆಗ್ಗಳಿಕೆಯನ್ನು ಹೊಂದಿದೆ. ಅಮೆರಿಕ, ಯೂರೋಪ್, ಇಸ್ರೇಲ್, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಭಾರತ ಮತ್ತು ಬ್ರಿಟಿಷ್ ಸಂಯುಕ್ತ ಸಂಸ್ಥಾನದ ಅನಿವಾಸಿ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಬಹು ಉತ್ಸಾಹದಿಂದ ಭಾಗವಹಿಸಿದ್ದರು. ಕರ್ನಾಟಕದ ಆಗಿನ ಜನಪ್ರಿಯ ಮುಖ್ಯಮಂತ್ರಿಗಳಾದ ಎಸ್. ಆರ್.ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಎಂ.ಪಿ.ಪ್ರಕಾಶ್, ಜೆ.ಎಚ್.ಪಟೇಲ್, ಪ್ರಸಿದ್ದ ಸಾಹಿತಿಗಳಾದ ಶಿವರಾಮ ಕಾರಂತ, ಪ್ರಸಿದ್ಧ ಆಟಗಾರ ಜಿ.ಆರ್.ವಿಶ್ವನಾಥ್, ಜನಪ್ರಿಯ ಸಿನಿಮಾ ನಟ ದಿವಂಗತ ಶಂಕರ್ ನಾಗ್, ಗೀತಾ, ಶ್ರೀನಾಥ್, ಶ್ರೀನಿವಾಸ ಪ್ರಭು ಮತ್ತವರ ನಾಟಕ ತಂಡ, ಹಾಡುಗಾರರಾದ ಸಿ.ಅಶ್ವತ್ಥ್ ಇನ್ನಿತರ ಹಲವು ಗಣ್ಯರ ಸಾಲು ಸಾಲೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಸ್ರಾರು ಅನಿವಾಸಿ ಕನ್ನಡಿಗರ ಹೆಮ್ಮೆಗೆ ಕಾರಣರಾಗಿದ್ದರು.

ಕನ್ನಡ ಬಳಗದ ರಜತ ಮಹೋತ್ಸವ

ಕನ್ನಡ ಬಳಗ ಸಂಸ್ಥೆಯು ತನ್ನ ರಜತ ಮಹೋತ್ಸವ ಸಮಾರಂಭವನ್ನು ಇಂಗ್ಲೆಂಡಿನ ಚೆಶೈರ್ ನಗರದ ಆಲ್ವಸ್ಟನ್ ಹಾಲ್‌ನಲ್ಲಿ 2008ರ ಆಗಸ್ಟ್‌ 22-25ರಂದು ಬಹಳ ಸಂಭ್ರಮದಿಂದ ಆಚರಿಸಿತ್ತು. ಕರ್ನಾಟಕದ ಸಚಿವರಾಗಿದ್ದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ, ಪ್ರಸಿದ್ಧ ಕವಿಗಳಾದ ನಿಸಾರ್ ಅಹಮದ್, ಸಾಹಿತಿ ಜಯಂತ ಕಾಯ್ಕಿಣಿ, ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಸಂಗೀತಕಾರರಾದ ಶಂಕರ್ ಶ್ಯಾನುಭೋಗ್, ಸಂಗೀತ ಕಟ್ಟಿ ಇತ್ಯಾದಿ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಾಗ್ಮಿ ಕೃಷ್ಣೇಗೌಡರು ಕೂಡ ಭಾಗವಹಿಸಿದ್ದರು. 

3ನೇ ದಶಮಾನೋತ್ಸವ ಸಮಾರಂಭ ಇಂಗ್ಲೆಂಡಿನ ಸ್ಟೋಕ್ ಆನ್ ಟ್ರೆಂಟ್ ನಗರದ ಕಿಂಗ್‌ಸ್ ಹಾಲ್‌ನಲ್ಲಿ ಕನ್ನಡ ಬಳಗದ 3ನೇ ದಶಮಾನೋತ್ಸವವನ್ನು 2013 ಮೇ 25-26ರಂದು ಅದ್ಧೂರಿಯಾಗಿ ಆಚರಿಸಲಾಯಿತು. ಕನ್ನಡ ನಾಡಿನ ಹಲವು ಪ್ರಸಿದ್ಧ ಸಾಹಿತಿಗಳು, ಹಾಡುಗಾರರು ಮತ್ತು ವಾಗ್ಮಿಗಳನ್ನು ಕರೆಸಲಾಗಿತ್ತು. ಪ್ರತಿ ವರ್ಷ ಯುಗಾದಿ, ದೀಪಾವಳಿ ಬಹಳ ವರ್ಷಗಳಿಂದ ಕನ್ನಡ ಬಳಗದ ವರ್ಷಕ್ಕೆರಡು ಸಮಾರಂಭಗಳನ್ನು ನಡೆಸಿಕೊಂಡು ಬಂದಿದೆ. ಪ್ರತಿ ಯುಗಾದಿ ಮತ್ತು ದೀಪಾವಳಿ ಸಮಾರಂಭಗಳಲ್ಲಿ ಕರ್ನಾಟಕದ ಅನೇಕ ಪ್ರತಿಭಾವಂತ ಗಣ್ಯರು ಭಾಗವಹಿಸುತ್ತ ಬಂದಿದ್ದಾರೆ. ಈ ಸಮಾರಂಭಗಳಲ್ಲಿ ಪ್ರಸಿದ್ಧ ಸಾಹಿತಿಗಳಾದ ಎಸ್.ಎಲ್.ಬೈರಪ್ಪ, ಎಚ್,ಎಸ್.ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷಣರಾವ್, ಡುಂಡಿರಾಜ್, ಹಾಸ್ಯ ವಾಗ್ಮಿಗಳಾದ ಪ್ರಾಣೇಶ್, ಸುಧಾ ಬರಗೂರು, ಸಿನಿಮಾ ನಟರಾದ ರಮೇಶ್ ಅರವಿಂದ್, ಸುದೀಪ್, ಯಶ್, ಗಣೇಶ್, ಸೃಜನ್ ಲೋಕೇಶ್, ಖ್ಯಾತ ರಂಗ ಮತ್ತು ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಾಗಾಭರಣ, ಖ್ಯಾತ ಶಿಕ್ಷಣವಾದಿ ಗುರುರಾಜ ಕರ್ಜಗಿ, ಅಮೆರಿಕದ ಅನಿವಾಸಿ ಸಾಹಿತಿ ಮೈ.ನಟರಾಜ, ಪ್ರಸಿದ್ಧ ಹಾಡುಗಾರರಾದ ಮಂಜುಳಾ ಗುರುರಾಜ್, ಅಜಯ್ ವಾರಿಯರ್, ಬಿ.ಆರ್.ಛಾಯಾ, ಎಂ.ಡಿ.ಪಲ್ಲವಿ, ನೃತ್ಯಗಾರರಾದ ವಸುಂಧರಾ ದೊರಸ್ವಾಮಿ, ಸಂಗೀತಕಾರ ಪ್ರವೀಣ ಗೋಖ್ಖಂಡಿ ಇನ್ನೂ ಹಲವಾರು ಜನರು ಕರ್ನಾಟಕದಿಂದ ಇಲ್ಲಿಗೆ ಬಂದು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಕೋವಿಡ್ ವರ್ಷಗಳಲ್ಲಿ ಕೂಡ ಬಹಳಷ್ಟು ಆನ್‌ಲೈನ್ ಕಾರ್ಯಕ್ರಮಗಳನ್ನು ಸಂಘದಿಂದ ಹಮ್ಮಿಕೊಳ್ಳಲಾಯಿತು. ಪ್ರೊ. ಎಂ.ಜಿ.ಈಶ್ವರಪ್ಪ ಅವರು ಮಹಾ ಚೇತನ ಅಕ್ಕಮಹಾದೇವಿಯವರ ಬಗ್ಗೆ ಮಾತಾಡಿದರೆ, ಬೀಚಿ ಹಾಸ್ಯ ರಸಾಯನ ನಾಟಕವನ್ನು ಡ್ರಾಮಾಟ್ರಿಕ್‌ಸ್ ತಂಡ ನಡೆಸಿಕೊಟ್ಟರು. ಯೋಗ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಬಳಗ ತನ್ನ ಸದಸ್ಯರನ್ನು ಹೀಗೆ ನಲವತ್ತು ವರ್ಷಗಳಿಂದಲೂ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದೆ.

ನಲವತ್ತನೇ ವಾರ್ಷಿಕೋತ್ಸವ

ಬರುವ ವಾರಾಂತ್ಯ ಹಮ್ಮಿಕೊಂಡಿರುವ ನಾಲ್ಕನೇ ದಶಮಾನೋತ್ಸವದಲ್ಲಿ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶೈಕ್ಷಣಿಕ ತಜ್ಞರಾದ ಗುರುರಾಜ ಕರ್ಜಗಿ, ವಿಶ್ವವಾಣಿ ಸಂಸ್ಥೆಯ ಮುಖ್ಯಸ್ಥರಾದ ವಿಶ್ವೇಶ್ವರ ಭಟ್, ಪಾವಗಡದ ರಾಮಕೃಷ್ಣ ಸೇವಾಶ್ರಮದ ಸಂಸ್ಥಾಪಕರೂ, ಅಧ್ಯಕ್ಷರೂ ಆದ ಸ್ವಾಮಿ ಜಪಾನಂದ ಮಹಾರಾಜ್ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕರೂ, ನಟರೂ ಆದ ಮೆಲೊಡಿ ಕಿಂಗ್ ರಾಜೇಶ್ ಕೃಷ್ಣನ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಇವರ ಜೊತೆಯಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮುಖ್ಯ ಸಂಪಾದಕರಾದ ರವಿ ಹೆಗಡೆ, ಲಂಡನ್ ಮಹಾನಗರದ ಮೇಯರ್, ಇಂಡಿಯನ್ ಹೈ ಕಮಿಷನ್‌ನ ರಾಯಭಾರಿಗಳು ಮತ್ತು ಲಂಡನ್ನಿನ ಭಾರತೀಯ ವಿದ್ಯಾಭವನದ ಮುಖ್ಯಸ್ಥರಾದ ನಂದಕುಮಾರ್‌ಮತ್ತು ಕೂಡ ಭಾಗವಹಿಸುತ್ತಿದ್ದಾರೆ. 

450 ಕಾರುಗಳನ್ನು ನಿಲ್ಲಿಸಬಹುದಾದ ಈ ಸಭಾಂಗಣ ಇಂಗ್ಲೆಂಡ್, ಸ್ಕಾಟ್ಲಾಂಡ್ ಮತ್ತು ವೇಲ್‌ಸ್ ಸಂಯುಕ್ತ ಸಂಸ್ಥಾನ ಮತ್ತು ದೇಶ ವಿದೇಶಗಳಿಂದ ಭಾಗವಹಿಸಲು ಬರುತ್ತಿರುವ ಸಹಸ್ರಾರು ಅನಿವಾಸಿ ಕನ್ನಡಿಗರನ್ನು ಒಂದೆಡೆ ಸೇರಲು ಅನುಕೂಲಗಳಿರುವ ಜಾಗವಾಗಿದೆ. ಹೀಗೆ ಬರುತ್ತಿರುವ ಬಹುತೇಕ ಎಲ್ಲ ಕನ್ನಡಗರು ವಿದೇಶದಲ್ಲಿ ವೈದ್ಯರಾಗಿ, ಎಂಜಿನಿಯರುಗಳಾಗಿ, ಚಾರ್ಟೆಡ್ ಅಕೌಂಟೆಟ್‌ಸ್ ಆಗಿ, ಬ್ಯಾಂಕ್ ಉದ್ಯೋಗಿಗಳು, ಲಾಯರುಗಳು ಮತ್ತು ಉದ್ದಿಮೆದಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸುಮನಾ ತಿಳಿಸಿದ್ದಾರೆ.

Twitter Campaign : ವಿಶ್ವಾದ್ಯಂತ ನೆಲೆಸಿರುವ ಕನ್ನಡಿಗರಿಂದ ‘ಅಪೀಲ್‌ ಡೇ’

ಈ ಸುಂದರ ಸಮಯದಲ್ಲಿ ನಾಡಿನ ಹಲವು ಗಣ್ಯರು ಮತ್ತು ಹಲವು ಪ್ರತಿಭಾನ್ವಿತ ಅನಿವಾಸಿ ಕನ್ನಡಿಗರ ಬರಹಗಳಿರುವ ‘ಸಂಭ್ರಮ’ ಎನ್ನುವ ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆಗಡೆ ಆಗಲಿದೆ. ಈ ಸಂಸ್ಥೆಯನ್ನು ಕಟ್ಟಿ ಅದನ್ನು ನಡೆಸಲು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ಹಲವು ಹಿರಿಯರನ್ನು ಮತ್ತು ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತಿದೆ. ಅನಿವಾಸಿ ಕನ್ನಡಿಗರ ಅಸ್ಮಿತೆಯನ್ನು ಜಗತ್ತಿಗೆ ಸಾರುವಲ್ಲಿ ಮೈಲಿ ಗಲ್ಲಿನ ಇಂತಹ ಆಚರಣೆಗಳು ಅತ್ಯಂತ ಮುಖ್ಯ ಎಂದು ಸುಮನಾ ಗಿರೀಶ್ ಅವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ. 

ಕನ್ನಡ ಬಳಗ ಯು.ಕೆ. ಚಾರಿಟಬಲ್ ಸಂಸ್ಥೆಯು 40 ವರ್ಷಗಳಿಂದ ಯುನೈಟೆಡ್ ಕಿಂಗ್ ಡಮ್‌ನಲ್ಲಿ ನೆಲಸಿರುವ ಸಹಸ್ರಾರು ಕನ್ನಡಿಗರಿಗೆ ಎರಡನೆಯ ಮನೆಯಂತೆ ಕೆಲಸ ಮಾಡುತ್ತಿದೆ. 1983ನೇ ಇಸವಿಯಿಂದ ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವ ಈ ಸಂಘ ವಿದೇಶೀ ನೆಲದಲ್ಲಿ ಕನ್ನಡ ತೇರನ್ನು ಎಳೆಯುವ ಕೆಲಸದಲ್ಲಿ ಅವಿರತ ತೊಡಗಿಕೊಂಡಿದೆ: ಡಾ ಬಿ.ಪ್ರೇಮಲತಾ(ಇಂಗ್ಲೆಂಡ್)

Follow Us:
Download App:
  • android
  • ios