ವಾಷಿಂಗ್ಟನ್ (ಆ. 17)  ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್‌ ಆಯ್ಕೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಕಮಲಾ ತಮ್ಮ ಪತ್ರಿಕಾ ಕಾರ್ಯದರ್ಶಿಯನ್ನಾಗಿ ಭಾರತ ಮೂಲದ ಸಬ್ರಿನಾ ಸಿಂಗ್‌ ಅವರನ್ನು ನೇಮಕ ಮಾಡಿಕೊಂಡಿದ್ದಾರೆ.

ಕಮಲಾ ಮೊದಲ ಹೆಜ್ಜೆಯಲ್ಲೇ ಭಾರತೀಯ ಮೂಲದವರಿಗೆ ಮಣೆ ಹಾಕಿದ್ದಾರೆ. 32 ವರ್ಷದ ಸಬ್ರಿನಾ ಸಿಂಗ್‌ ಇದಕ್ಕೂ ಮುನ್ನ ಡೆಮಾಕ್ರಟಿಕ್‌ ಪಕ್ಷದ ಇಬ್ಬರು ಅಭ್ಯರ್ಥಿಗಳಿಗೆ  ಮಾಧ್ಯಮ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 

ಉಪಾಧ್ಯಕ್ಷ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲಿಯೇ ಮಾಡಿದ ಬಹಿರಂಗ ಭಾಷಣದಲ್ಲಿ ಭಾರತದ ನಂಟನ್ನು ಸ್ಮರಿಸಿ ಭಾರತೀಯರಿಗೆ ಕಮಲಾ ಹ್ಯಾರಿಸ್‌ ಹತ್ತಿರವಾಗಿದ್ದರು. ಟ್ರಂಪ್ ಸಹ ಕಮಲಾ ಅವರಿಗೆ ಠಕ್ಕರ್ ಕೊಡುವ ರೀತಿಯಲ್ಲಿ ಮಾತನಾಡಿದ್ದರು.

ಇಡ್ಲಿ ತಿಂದು ಬೆಳೆದ ಭಾರತೀಯ ಸಂಜಾತೆ ಕಮಲಾ!

ಭಾರತೀಯ ಮೂಲದ ಮಹಿಳಾ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿಗೆ ಪತ್ರಿಕಾ ಕಾರ್ಯದರ್ಶಿಯಾಗಿದ್ದು ಅತೀವ ಸಂತಸ ತಂದಿದೆ ಎಂದು ಸಬ್ರಿನಾ ಸಿಂಗ್ ಟ್ವೀಟ್ ಮಾಡಿದ್ದಾರೆ.  ಲಾಸ್ ಏಂಜಲೀಸ್  ನಿವಾಸಿಯಾಗಿರುವ ಸಬ್ರಿನಾ ಸಿಂಗ್ ಡೆಮಾಕ್ರಟಿಕ್ ನ್ಯಾಶನಲ್ ಸಮಿತಿಯ ವಕ್ತಾರೆಯಾಗಿದ್ದರು. ಇಂಡಿಯನ್ ಲೀಗ್ ಆಫ್ ಅಮೆರಿಕಾದ ಸರ್ದಾರ್ ಜೆ ಜೆ ಸಿಂಗ್ ಅವರ ಮೊಮ್ಮಗಳು ಸಬ್ರಿನಾ ಸಿಂಗ್. ಭಾರತೀಯ ಮೂಲದ ಅಮೆರಿಕನ್ನರ ಹಿತಾಸಕ್ತಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಘಟನೆಯಾಗಿ ಇಂಡಿಯನ್ ಲೀಗ್ ಆಫ್ ಅಮೆರಿಕಾ ಗುರುತಿಸಿಕೊಂಡಿದೆ.

1940  ರಲ್ಲಿ ಸಂಘಟನೆ ಕಟ್ಟಿಕೊಂಡಿದ್ದ ಜೆಜೆ ಸಿಂಗ್ ಅಮೆರಿಕ ಸರ್ಕಾರ್ ವಿರುದ್ಧ ಪ್ರತಿಭಟನೆ ಮತ್ತು ಹೋರಾಟ ಮಾಡಿದ್ದರು. ಸರ್ಕಾರದ ಕಾನೂನುಗಳು ಜನವಿರೋಧಿಯಾಗಿದೆ ಎಂದು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.