* ಅಮೆರಿಕಕ್ಕೆ ಗಡೀಪಾರಾಗುವ ಭೀತಿಯಿಂದ ಸ್ಪೇನ್‌ನ ಜೈಲಿನಲ್ಲಿ ಸಾವಿಗೆ ಶರಣು* ಮೆಕೆಫಿ ಆ್ಯಂಟಿ ವೈರಸ್‌ ಸೃಷ್ಟಿಕರ್ತ ಆತ್ಮಹತ್ಯೆ* ವಿಲಕ್ಷಣ ನಡವಳಿಕೆಯಿಂದ ವಿವಾದಕ್ಕೀಡಾಗಿದ್ದ ಜಾನ್‌ ಮಾಕಫಿ ದುರಂತ ಅಂತ್ಯ

ಮ್ಯಾಡ್ರಿಡ್‌(ಜೂ.25): ಕಂಪ್ಯೂಟರ್‌ಗಳಲ್ಲಿ ಬಳಸುವ ಜನಪ್ರಿಯ ಆ್ಯಂಟಿ ವೈರಸ್‌ ಸಾಫ್ಟ್‌ವೇರ್‌ ‘ಮೆಕೆಫಿ’ಯ ಸೃಷ್ಟಿಕರ್ತ ಜಾನ್‌ ಮಾಕಫಿ (75) ಅವರು ಸ್ಪೇನ್‌ನ ಬಾರ್ಸಿಲೋನಾ ಬಳಿಯ ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತೆರಿಗೆ ವಂಚನೆ ಪ್ರಕರಣ ಸಂಬಂಧ ಮಾಕಫಿ ಅವರನ್ನು ಅಮೆರಿಕಕ್ಕೆ ಗಡೀಪಾರು ಮಾಡಲು ಸ್ಪೇನ್‌ನ ನ್ಯಾಯಾಲಯ ನಿಶಾನೆ ತೋರಿತ್ತು. ಇದಾದ ಕೆಲವೇ ತಾಸಿನಲ್ಲಿ ಜೈಲಿನಲ್ಲಿ ಮೃತದೇಹ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿಯ ಸಲಹೆಗಾರರಾಗಿ, ಭಾಷಣಕಾರರಾಗಿ ಹಾಗೂ ತಮ್ಮ ಜೀವನಗಾಥೆಯನ್ನು ಸಾಕ್ಷ್ಯಚಿತ್ರ ನಿರ್ಮಾಪಕರಿಗೆ ಮಾರಾಟ ಮಾಡಿ ಗಳಿಸಿದ ಆದಾಯಕ್ಕೆ ತೆರಿಗೆ ಕಟ್ಟದೆ ವಂಚಿಸಿದ್ದಾರೆ ಎಂದು ಅಮೆರಿಕದ ಟೆನ್ನಿಸ್ಸೀ ನ್ಯಾಯಾಲಯ ಮೆಕ್‌ ಕೆಫಿ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿತ್ತು. ಅದಾದ ಬೆನ್ನಲ್ಲೇ ಕಳೆದ ಅಕ್ಟೋಬರ್‌ನಲ್ಲಿ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಅಮೆರಿಕಕ್ಕೆ ಗಡೀಪಾರು ಮಾಡಲು ಸ್ಪೇನ್‌ ಕೋರ್ಟ್‌ ಆದೇಶಿಸಿದ್ದರಿಂದ ಜೀವನ ಪರ‍್ಯಂತ ಜೈಲುವಾಸ ಅನುಭವಿಸುವ ಭೀತಿಯಲ್ಲಿ ಮೆಕ್‌ ಕೆಫಿ ಇದ್ದರು. ಏಕೆಂದರೆ ತೆರಿಗೆ ವಂಚನೆ ಪ್ರಕರಣದಲ್ಲಿ ಮೆಕ್‌ ಕೆಫಿ ವಿರುದ್ಧ 30 ವರ್ಷದವರೆಗೂ ಶಿಕ್ಷೆ ವಿಧಿಸುವ ಅವಕಾಶ ಅಮೆರಿಕಕ್ಕೆ ಇತ್ತು.

ವಿಲಕ್ಷಣ ಜೀವನ:

1945ರಲ್ಲಿ ಬ್ರಿಟನ್‌ನಲ್ಲಿ ಜಾನ್‌ ಡೇವಿಡ್‌ ಮೆಕ್‌ ಕೆಫಿ ಜನಿಸಿದರು. 1987ರಲ್ಲಿ ಮೆಕ್‌ ಕೆಫಿ ಅಸೋಸಿಯೇಟ್ಸ್‌ ಎಂಬ ಕಂಪನಿಯನ್ನು ಹುಟ್ಟುಹಾಕಿ, ಆ್ಯಂಟಿ ವೈರಸ್‌ ಅಭಿವೃದ್ಧಿಪಡಿಸಿದರು. ಸಾಫ್ಟ್‌ವೇರ್‌ ಕಂಪನಿಯಲ್ಲಿನ ಪಾಲು ಮಾರಿ ಬಿಂದಾಸ್‌ ಜೀವನ ನಡೆಸಲು ಆರಂಭಿಸಿದರು. ಎರಡು ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲೂ ಯತ್ನಿಸಿದ್ದರು. ಯೋಗಾಭ್ಯಾಸ, ಸಣ್ಣ ವಿಮಾನ ಚಾಲನೆ, ಗಿಡಮೂಲಿಕೆ ಔಷಧ ತಯಾರಿಕೆ ಹವ್ಯಾಸ ಹೊಂದಿದ್ದರು. ಶಸ್ತ್ರಾಸ್ತ್ರ ಹೊಂದಿದ್ದ ಕಾರಣಕ್ಕೆ ಡೊಮಿನಿಕಾ ರಿಪಬ್ಲಿಕ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಜತೆಯಲ್ಲಿ ಗನ್‌ ಇದ್ದರೆ ಮಾತ್ರ ತಾವು ಆರಾಮವಾಗಿರುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು. ಟೀವಿ ಚಾನೆಲ್‌ ಸಂದರ್ಶನದ ಸಂದರ್ಭದಲ್ಲೂ ಗನ್‌ ಹೊಂದಿರುತ್ತಿದ್ದರು. ಹಲವು ಬಾರಿ ವಿವಾದಗಳಿಗೆ ಸಿಲುಕಿದ್ದರು.