ವಾಷಿಂಗ್ಟನ್(ಅ.25)‌: ತಾವು ಗೆದ್ದರೆ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಭಾರತದ ರಾಜಕೀಯ ಪಕ್ಷಗಳು ಪ್ರಕಟಿಸುತ್ತಿರುವ ರೀತಿಯಲ್ಲೇ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರೆಟಿಕ್‌ ಪಕ್ಷದ ಸ್ಪರ್ಧಿ ಜೋ ಬೈಡನ್‌ ಕೂಡ ತಾವು ಗೆದ್ದರೆ ಎಲ್ಲ ಅಮೆರಿಕನ್ನರಿಗೂ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ.

ಚುನಾವಣೆಗೆ 10 ದಿನಗಳಿರುವಾಗ ಕೊರೋನಾ ಹೋರಾಟದ ಕುರಿತು ತಮ್ಮ ಕಾರ್ಯಸೂಚಿ ಪ್ರಕಟಿಸಿರುವ ಬೈಡನ್‌, ‘ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕೊರೋನಾ ನಿಯಂತ್ರಣ ನೀತಿಯಿಂದಾಗಿ 2,20,000 ಅಮೆರಿಕನ್ನರು ಜೀವ ಕಳೆದುಕೊಂಡಿದ್ದಾರೆ. ದೇಶದ ಆರ್ಥಿಕತೆಯ ಮೇಲೂ ಇದು ಮಾರಣಾಂತಿಕ ಪರಿಣಾಮ ಬೀರಿದೆ. ಕೊರೋನಾ ಕಡಿಮೆಯಾಗುತ್ತಿದೆ, ನಾವು ಅದರೊಂದಿಗೆ ಬದುಕುವುದನ್ನು ಕಲಿಯುತ್ತಿದ್ದೇವೆ ಎಂದು ಟ್ರಂಪ್‌ ಹೇಳುತ್ತಿದ್ದಾರೆ. ಆದರೆ, ಅಮೆರಿಕದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಮತ್ತು ನಾವು ಅದರೊಂದಿಗೆ ಸಾಯುವುದನ್ನು ಕಲಿಯುತ್ತಿದ್ದೇವೆ’ ಎಂದು ತೀಕ್ಷ$್ಣವಾಗಿ ಹೇಳಿದ್ದಾರೆ.

‘ಕೊರೋನಾ ವಿರುದ್ಧ ಹೋರಾಡುವ ಸುರಕ್ಷಿತ ಲಸಿಕೆ ಸಿಕ್ಕಾಕ್ಷಣ ಅದನ್ನು ಎಲ್ಲ ಅಮೆರಿಕನ್ನರಿಗೂ ಉಚಿತವಾಗಿ ನೀಡಲಾಗುವುದು. ಜನರ ಬಳಿ ವಿಮೆ ಇದ್ದರೂ ಇಲ್ಲದಿದ್ದರೂ ಅಮೆರಿಕದ ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸಿ ಎಲ್ಲರಿಗೂ ವಿತರಿಸಲಿದೆ’ ಎಂದು ತಿಳಿಸಿದ್ದಾರೆ.