ಇಂದು ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್‌ ಪಟ್ಟಾಭಿಷೇಕ| ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ, ವರ್ಚುವಲ್‌ ಸಮಾರಂಭ| ಉಪಾಧ್ಯಕ್ಷೆಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್‌ ಪ್ರಮಾಣವಚನ| 46ನೇ ಅಧ್ಯಕ್ಷ: ಡೆಮಾಕ್ರೆಟ್‌ ಪಕ್ಷದ ಬೈಡೆನ್‌ ಅಮೆರಿಕದ 46ನೇ ಅಧ್ಯಕ್ಷ| 78 ವರ್ಷ: ಅಮೆರಿಕ ಇತಿಹಾಸದಲ್ಲೇ ಅತಿ ಹಿರಿಯ ವಯಸ್ಸಿನ ಅಧ್ಯಕ್ಷ| ನಂ.1: ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌| 25 ಸಾವಿರ: ಪದಗ್ರಹಣ ಸಮಾರಂಭಕ್ಕೆ ಹಿಂದೆಂದೂ ಇಲ್ಲದ ಬಿಗಿ ಭದ್ರತೆ

ವಾಷಿಂಗ್ಟನ್(ಜ.20)‌: ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರೋಚಕ ಗೆಲುವು ಕಂಡ ಡೆಮಾಕ್ರೆಟ್‌ ಪಕ್ಷದ ಜೋ ಬೈಡೆನ್‌ (78), ರಾಷ್ಟ್ರದ 46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಕೂಡಾ ಶಪಥ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಅಮೆರಿಕ ಕಂಡ ಅತ್ಯಂತ ವಯೋವೃದ್ಧ ಅಧ್ಯಕ್ಷ ಎಂಬ ದಾಖಲೆಗೆ ಬೈಡೆನ್‌ ಮತ್ತು ಉಪಾಧ್ಯಕ್ಷ ಹುದ್ದೆ ಏರಿದ ಮೊದಲ ಮಹಿಳೆ ಎಂಬ ಹಿರಿಮೆಗೆ ಕಮಲಾ ಹ್ಯಾರಿಸ್‌ ಪಾತ್ರರಾಗಲಿದ್ದಾರೆ. ಈ ಮೂಲಕ ಹೊಸ ಇತಿಹಾಸ ರಚನೆಗೆ ಕ್ಷಣಗಣನೆ ಆರಂಭವಾಗಿದೆ.

ಭಾರತೀಯ ಕಾಲಮಾನ ಬುಧವಾರ ರಾತ್ರಿ 10 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ವರ್ಚುವಲ್‌ ಆಗಿ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. 4 ವರ್ಷ ಕಾಲ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷತೆ ಕಂಡ ಅಮೆರಿಕ, ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತದಲ್ಲಿ ಹೊಸ ದಿಕ್ಕಿನಲ್ಲಿ ಸಾಗುವ ಭರವಸೆ ಹೊತ್ತುಕೊಂಡಿದೆ.

ಚುನಾವಣೆಯುದ್ದಕ್ಕೂ ಎದುರಾಳಿ ಬೈಡೆನ್‌ ವಿರುದ್ಧ ವಂಚನೆಯ ಸರಣಿ ಆರೋಪ ಮಾಡಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಬುಧವಾರದ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಆದರೂ ಟ್ರಂಪ್‌ ಬೆಂಬಲಿಗರು ಕೆಲ ದಿನಗಳ ಹಿಂದೆ ಸಂಸತ್‌ ಭವನವಾದ ಕ್ಯಾಪಿಟಲ್‌ ಹಿಲ್‌ ಮೇಲೆ ನಡೆಸಿದ ಐತಿಹಾಸಿಕ ಕರಾಳ ದಾಳಿ ಮರೆಯದ ಪೊಲೀಸರು, 25000 ನ್ಯಾಷನಲ್‌ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸುವ ಮೂಲಕ ಕಾರ್ಯಕ್ರಮವನ್ನು ನಿರ್ವಿಘ್ನವಾಗಿ ನಡೆಸುವ ಪಣ ತೊಟ್ಟಿದ್ದಾರೆ.

ಬುಧವಾರ ಹೊಸ ಅಧ್ಯಕ್ಷರ ಆಗಮನದೊಂದಿಗೆ ಅಮೆರಿಕ ಕಂಡ ಅತ್ಯಂತ ವಿವಾದಿತ ಅಧ್ಯಕ್ಷ, ಎರಡು ಬಾರಿ ವಾಗ್ದಂಡನೆಗೆ ಗುರಿಯಾದ ಮೊದಲ ಅಧ್ಯಕ್ಷ ಎಂಬೆಲ್ಲಾ ಕುಖ್ಯಾತಿಗೆ ಗುರಿಯಾದ ಟ್ರಂಪ್‌ ಅಧಿಕಾರವಧಿಯ ಯುಗಾಂತ್ಯವಾಗಲಿದೆ.

ಸಮಾರಂಭ ಹೇಗಿರುತ್ತೆ, ಮಹತ್ವವೇನು?

ನ.3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಆಗಿದ್ದರೂ, ಜ.20ರಂದು ನಡೆಯುವ ಪ್ರಮಾಣವಚನ ಸ್ವೀಕಾರ ಸಮಾರಂಭದ ಮೂಲಕ ನೂತನ ಅಧ್ಯಕ್ಷರ ಅಧಿಕಾರ ಅವಧಿ ಆರಂಭವಾಗುತ್ತದೆ. ಸಮಾರಂಭ ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ಸಂಸತ್‌ ಕಟ್ಟಡದ ಮುಂಭಾಗದಲ್ಲಿ ನಡೆಯಲಿದೆ. ನಿಯೋಜಿತ ಅಧ್ಯಕ್ಷರು ‘ನಾನು ಅಮೆರಿಕ ಅಧ್ಯಕ್ಷರ ಕಚೇರಿಯನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ಮತ್ತು ಅಮೆರಿಕದ ಸಂವಿಧಾನ ರಕ್ಷಣೆ, ಸಂರಕ್ಷಣೆಗೆæ ನನ್ನೆಲ್ಲಾ ಸಾಮರ್ಥ್ಯವನ್ನು ವಿನಿಯೋಗಿಸುತ್ತೇನೆ’ ಎಂದು ಹೇಳಿ ಪ್ರಮಾಣ ಸ್ವೀಕರಿಸುತ್ತಾರೆ.

ಸಂಸತ್ತಿಗೆ ಭದ್ರತೆ ಹೇಗಿರಲಿದೆ?

ಇತ್ತೀಚಿನ ಸಂಸತ್‌ ಭವನ ಹಿಂಸಾಚಾರದ ಹಿನ್ನೆಲೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದ್ದು, 25,000 ಮಂದಿ ನ್ಯಾಷನಲ್‌ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಂಸತ್‌ ಭವನದ ಸುತ್ತಮುತ್ತಲಿನ ಪ್ರದೇಶ, ಪೆನ್ಸಿಲ್ವೇನಿಯಾ ಅವೆನ್ಯೂ ಮತ್ತು ಹಾಗೂ ಶ್ವೇತಭವನದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದ್ದು, 8 ಅಡಿ ಎತ್ತರದ ಕಬ್ಬಿಣದ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇದೇ ವೇಳೆ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿ ಭದ್ರತೆ ನೋಡಿಕೊಳ್ಳಲು 4000 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಬೃಹತ್‌ ನ್ಯಾಷನಲ್‌ ಮಾಲ್‌ ಅನ್ನು ಬಂದ್‌ ಮಾಡಲಾಗಿದೆ.

ಅಧ್ಯಕ್ಷರಿಗೆ ಮಿಲಿಟರಿ ಗೌರವ ಇರುತ್ತಾ?

ಶಪಥ ಸ್ವೀಕಾರ ಸಮಾರಂಭದ ಬಳಿಕ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಸಂಪ್ರದಾಯದಂತೆ ಸೇನಾ ಮುಖ್ಯಸ್ಥರು ಮಿಲಿಟರಿ ಗೌರವ ಸಲ್ಲಿಸುತ್ತಾರೆ. ಬ್ಯಾಂಡ್‌ ವಾದ್ಯ, ಸಾಂಪ್ರದಾಯಿಕ ಸೇನಾ ಪರೇಡ್‌ ಬಳಿಕ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಗುತ್ತದೆ.

ಸಮಾರಂಭಕ್ಕೆ ಹಣ ಯಾರು ಕೊಡ್ತಾರೆ? ವೆಚ್ಚ ಎಷ್ಟು?

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಗುಲುವ ವೆಚ್ಚವನ್ನು ದಾನಿಗಳಿಂದ ಸ್ವೀಕರಿಸಲಾಗುತ್ತದೆ. ಈ ಬಾರಿ ಕೊರೋನಾ ಕಾರಣಕ್ಕೆ ವರ್ಚುವಲ್‌ ಆಗಿ ಸಮಾರಂಭವನ್ನು ಆಯೋಜಿಸುತ್ತಿರುವ ಕಾರಣಕ್ಕೆ ವೆಚ್ಚ ಕಡಿಮೆ ಆಗಿದೆ. ಬೈಡೆನ್‌ ಅವರು ಅಧ್ಯಕ್ಷೀಯ ಪ್ರಮಾಣವಚನ ಸ್ವೀಕಾರ ಸಮಾರಂಭ ಸಮಿತಿ 1 ಮಿಲಿಯನ್‌ ಡಾಲರ್‌ (7.4 ಕೋಟಿ ರು.) ಕಾರ್ಪೋರೆಟ್‌ ದೇಣಿಗೆ ಸ್ವೀಕರಿಸಿದೆ. ಇತರ ದಾನಿಗಳ ವಿವರಗಳು ಬಹಿರಂಗಗೊಂಡಿಲ್ಲ. ಆದರೆ, ಟ್ರಂಪ್‌ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ 107 ಮಿಲಿಯನ್‌ ಡಾಲರ್‌ (791 ಕೋಟಿ ರು.) ದೇಣಿಗೆ ಹರಿದುಬಂದಿತ್ತು.

ಈ ಬಾರಿ ವರ್ಚುವಲ್‌ ಕಾರ್ಯಕ್ರಮ

ಸಾಮಾನ್ಯವಾಗಿ ಅಧ್ಯಕ್ಷರ ಪ್ರಮಾಣವಚನ ಸಮಾರಂಭಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಆದರೆ, ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯ ಜನರಿಗಷ್ಟೇ ಭಾಗವಹಿಸಲು ಅವಕಾಶ ನೀಡಲಾಗಿದ್ದು, ವರ್ಚುವಲ್‌ ಆಗಿ ಸಮಾರಂಭ ಆಯೋಜನೆಗೊಳ್ಳಲಿವೆ. ಈ ಹಿಂದಿನ ಸಮಾರಂಭಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸಂಸತ್‌ ಭವನದ ಮುಂದಿನ ಪೆನ್ಸಿಲ್ವೇನಿಯಾ ಅವೆನ್ಯೂ (ಮಾರ್ಗ)ದಲ್ಲಿ ನಡೆಯುವ ಭವ್ಯ ಪರೆಡ್‌ ಹಾಗೂ ಅಪಾರ ಜನಸ್ಥೋಮದ ಮಧ್ಯೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕುಟುಂಬ ಶ್ವೇತಭವನಕ್ಕೆ ಆಗಮಿಸುತ್ತಿತ್ತು. ಆದರೆ, ಈ ಬಾರಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಬೆಂಗಾವಲು ವಾಹನದಲ್ಲಿ ಶ್ವೇತಭವನಕ್ಕೆ ಆಗಮಿಸಲಿದ್ದಾರೆ.

ಗಾಯಕಿ ಲೇಡಿ ಗಾಗಾ ಈ ಬಾರಿಯ ಆಕರ್ಷಣೆ

ಈ ಬಾರಿ ಕೊರೋನಾದ ಹೊರತಾಗಿಯೂ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಖ್ಯಾತ ನಟಿ ಹಾಗೂ ಗಾಯಕಿ ಲೇಡಿ ಗಾಗಾ ರಾಷ್ಟ್ರಗೀತೆ ಹಾಡಲಿದ್ದು, ಬೈಡೆನ್‌ ಹಾಗೂ ಕಮಲಾ ಹ್ಯಾರಿಸ್‌ ದನಿಗೂಡಿಸಲಿದ್ದಾರೆ. ಹಾಲಿವುಡ್‌ ನಟರಾದ ಜೆನ್ನಿಫರ್‌ ಲೋಪೇಜ್‌ ಹಾಗೂ ಟಾಮ್‌ ಹ್ಯಾಕ್ಸ್‌ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ. ಫಾದರ್‌ ಲಿಯೋ ಒ’ಡೊನೋವನ್‌ ಅವರನ್ನು ಪ್ರಾರ್ಥನಾ ಸಮಾರಂಭಕ್ಕೆ ಅಹ್ವಾನಿಸಲಾಗಿದೆ.

ಅಮೆರಿಕದ ಮೊದಲ ಉಪಾಧ್ಯಕ್ಷೆ ಕಮಲಾ

ಜೋ ಬೈಡೆನ್‌ ಅವರ ಜೊತೆಗೆ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿರುವ ಕಮಲಾ ಹ್ಯಾರಿಸ್‌ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎನಿಸಿಕೊಳ್ಳಲಿದ್ದಾರೆ. ಕಮಲಾ ಹ್ಯಾರಿಸ್‌ ಅವರು ಭಾರತದ ತಮಿಳುನಾಡು ಮೂಲದವರಾಗಿದ್ದಾರೆ. ಕಮಲಾ ಹ್ಯಾರಿಸ್‌ ಅವರ ತಾಯಿ ಶ್ಯಾಮಲಾ ಗೋಪಾಲನ್‌ ತಮಿಳುನಾಡು ಮೂಲದವರು. ತಂದೆ ಡೊನಾಲ್ಡ್‌ ಜಮೈಕಾ ಮೂಲದವರು. ಕಮಲಾ ಹ್ಯಾರಿಸ್‌ ಅವರು ಕ್ಯಾಲಿಫೆäರ್‍ನಿಯಾದಿಂದ ಸೆನೆಟರ್‌ ಆಗಿ ಆಯ್ಕೆ ಆಗಿದ್ದರು. ಈ ಸ್ಥಾನಕ್ಕೆ ಸೋಮವಾರವಷ್ಟೇ ರಾಜೀನಾಮೆ ಸಲ್ಲಿಸಿದ್ದರು.

ನೀವೂ ವೀಕ್ಷಿಸಬಹುದು ಈ ಕಾರ್ಯಕ್ರಮ

ಬೈಡೆನ್‌ ಪಟ್ಟಾಭಿಷೇಕದ ಲೈವ್ ವೀಕ್ಷಿಸಲು ಈ ಲಿಂಕ್‌ಗಳಲ್ಲಿ ಲಭ್ಯವಿರಲಿದೆ.

* https://youtu.be/ePOa9p7XQa8

* https://bideninaugural.org/watch/

* https://twitter.com/BidenInaugural

* https://www.facebook.com/BidenInaugural/