Asianet Suvarna News

ಸ್ಪೇಸ್‌ ಟೂರಿಸಂ ಶುರು: ಬಾಹ್ಯಾಕಾಶಕ್ಕೆ ಹೋಗಿ ಬಂದ ನಂ.1 ಶ್ರೀಮಂತ ಬೆಜೋಸ್‌!

* ಸ್ಪೇಸ್‌ ಟೂರಿಸಂ ಶುರು

* ಬಾಹ್ಯಾಕಾಶಕ್ಕೆ ಹೋಗಿ ಬಂದ ನಂ.1 ಶ್ರೀಮಂತ ಬೆಜೋಸ್‌

* ಬ್ರಾನ್ಸನ್‌ ಬೆನ್ನಲ್ಲೇ ಮತ್ತೊಂದು ಬಾಹ್ಯಾಕಾಶ ಯಾನ ಸಕ್ಸಸ್‌

Jeff Bezos completes short trip to space in Blue Origin rocket voyage lasts 11 minutes pod
Author
Bangalore, First Published Jul 21, 2021, 10:09 AM IST
  • Facebook
  • Twitter
  • Whatsapp

ವ್ಯಾನ್‌ಹಾರ್ನ್‌(ಜು.21): ವಿಶ್ವದ ನಂ.1 ಶ್ರೀಮಂತ, ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಸ್‌ ಮಂಗಳವಾರ ಹೊಸ ಇತಿಹಾಸವೊಂದನ್ನು ನಿರ್ಮಿಸಿದ್ದಾರೆ. ತಮ್ಮ ಮೂವರು ಸಂಗಡಿಗರ ಜೊತೆಗೂಡಿ ಬೆಜೋಸ್‌ ಬಾಹ್ಯಾಕಾಶವನ್ನು ತಲುಪಿ, ಅಲ್ಲಿ ಶೂನ್ಯ ಗುರುತ್ವಾಕರ್ಷಣೆಯಲ್ಲಿ ತೇಲಿ ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ. ವಾರದ ಹಿಂದಷ್ಟೇ ವರ್ಜಿನ್‌ ಗ್ಯಾಲಕ್ಟಿಕ್‌ ಮಾಲೀಕ ರಿಚರ್ಡ್‌ ಬ್ರಾನ್ಸನ್‌ ತಮ್ಮ ತಂಡದೊಂದಿಗೆ ಬಾಹ್ಯಾಕಾಶಕ್ಕೆ ತೆರಳಿ ಬಂದಿದ್ದರು. ಅದರ ಬೆನ್ನಲ್ಲೇ ನಡೆದ ಈ ಸಾಹಸ, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆದಿದೆ.

10 ನಿಮಿಷದ ಯಾನ

ಜೆಫ್‌ ಬೆಜೋಸ್‌ ತಂಡದ ಉಡ್ಡಯನ ಕೇವಲ 10 ನಿಮಿಷದ್ದಾಗಿತ್ತು. ಭೂಮಿಯಿಂದ 100 ಕಿ.ಮೀ. ಎತ್ತರದಲ್ಲಿರುವ ಕರ್ಮನ್‌ ಲೈನ್‌ (ಭೂಮಿಯ ಅಂಚು) ದಾಟಿ ಮುಂದೆ ಹೋದ ಕ್ಯಾಪ್ಸೂಲ್‌ 106 ಕಿ.ಮೀ. ಎತ್ತರವನ್ನು ತಲುಪಿದ ಬಳಿಕ ಭೂಮಿಯತ್ತ ಮರಳಿತು. ಈ ವೇಳೆ ಕ್ಯಾಪ್ಸೂಲ್‌ನಲ್ಲಿದ್ದವರು 3 ನಿಮಿಷ ಶೂನ್ಯ ಗುರುತ್ವಾಕಷಣೆಯನ್ನು ಅನುಭವಿಸಿದರು. ಇಡೀ ಉಡ್ಡಯನ ಪ್ರಕ್ರಿಯೆ ಸ್ವಯಂಚಾಲಿತವಾಗಿತ್ತು. ಇಲ್ಲಿ ಯಾವುದೇ ಪೈಲಟ್‌ ಸಹಾಯ ಇರಲಿಲ್ಲ.

ಯಾನ ನಡೆದಿದ್ದು ಹೇಗೆ?

ಪಶ್ಚಿಮ ಟೆಕ್ಸಾಸ್‌ ವ್ಯಾನ್‌ಹಾರ್ನ್‌ನ ಲಾಂಚ್‌ಪ್ಯಾಡ್‌ನಿಂದ ಭಾರತೀಯ ಕಾಲಮಾನ ಮಂಗಳವಾರ ಸಂಜೆ 6.45ಕ್ಕೆ ನ್ಯೂ ಶೆಫರ್ಡ್‌ ರಾಕೆಟ್‌ ಗಗನಕ್ಕೆ ಚಿಮ್ಮಿತು. ಭೂಮಿಯಿಂದ 2.50 ಲಕ್ಷ ಅಡಿ ಎತ್ತರದಲ್ಲಿ ರಾಕೆಟ್‌ನಿಂದ ಕ್ಯಾಪ್ಸೂಲ್‌ ಬೇರ್ಪಟ್ಟಿತು. ಬಳಿಕ ಬೆಜೋಸ್‌ ಹಾಗೂ ಇತರೆ ಮೂವರಿದ್ದ ಕ್ಯಾಪ್ಸೂಲ್‌ ಭೂಮಿಯ ಪರಿದಿ(ಅಪೋಜಿ)ಯನ್ನು ತಲುಪಿ ಭೂಮಿಗೆ ಮರಳಿತು. ನ್ಯೂ ಶೆಫರ್ಡ್‌ನ ರಾಕೆಟ್‌ ಲ್ಯಾಂಡ್‌ ಆದ ಕೆಲ ಹೊತ್ತಿನ ಬಳಿಕ ಅಲ್ಲಿಂದ ಸ್ವಲ್ಪ ದೂರದಲ್ಲಿ ನಿಗದಿತ ಸ್ಥಳದಲ್ಲಿ ಕ್ಯಾಪ್ಸೂಲ್‌ ಪ್ಯಾರಾಚ್ಯೂಟ್‌ ಮೂಲಕ ನೆಲಕ್ಕೆ ಇಳಿಯಿತು.

ಹಲವು ಹೊಸ ದಾಖಲೆ

ರಾಕೆಟ್‌ ಬಳಸಿದ ಮೊದಲ ವಾಣಿಜ್ಯ ಉದ್ದೇಶದ ಉಡ್ಡಯನ, ವಿಶ್ವದ ನಂ.1 ಶ್ರೀಮಂತ, ವಿಶ್ವದ ಅತಿ ಕಿರಿಯ (ಆಲಿವರ್‌ ಡೀಮೆನ್‌-18 ವರ್ಷ), ವಿಶ್ವದ ಅತಿ ಹಿರಿಯ (ವ್ಯಾಲಿ ಫಂಕ್‌- 82 ವರ್ಷ) ವ್ಯಕ್ತಿಯ ಬಾಹ್ಯಾಕಾಶ ಯಾನ ಎಂಬ ದಾಖಲೆಗೆ ಈ ಉಡ್ಡಯನ ಪಾತ್ರವಾಯಿತು.

210 ಕೋಟಿ ಬಿಡ್‌

ಅನಾಮಧೇಯ ವ್ಯಕ್ತಿಯೊಬ್ಬರು ಬೆಜೋಸ್‌ ಜೊತೆ ತೆರಳಲು 1 ಸೀಟಿಗೆ 210 ಕೋಟಿ ಬಿಡ್‌ ಮಾಡಿದ್ದರು. ಆದರೆ ಅಂತಿಮ ಹಂತದಲ್ಲಿ ಅವರು ಹಿಂದೆ ಸರಿದರು. ಬಳಿಕ ಆಲಿವರ್‌ ಡೀಮೆನ್‌ ಅವರ ತಂದೆ ಬಿಡ್‌ನಲ್ಲಿ ಭಾಗವಹಿಸಿ ತಮ್ಮ ಪುತ್ರನನ್ನು ಯಾನಕ್ಕೆ ಕಳುಹಿಸಿದ್ದರು. ಆದರೆ ಅವರ ಬಿಡ್‌ ಮೊತ್ತ ಬಹಿರಂಗವಾಗಿಲ್ಲ.

ವಾರದಲ್ಲಿ 2ನೇ ಗಗನಯಾನ!

ರಿಚರ್ಡ್‌ ಬ್ರಾನ್ಸನ್‌ (71)ಒಡೆತನದ ವರ್ಜಿನ್‌ ಗ್ಯಾಲಾಕ್ಟಿಕ್‌ ಸಂಸ್ಥೆಯ ‘ವಿಎಸ್‌ಎಸ್‌ ಯುನಿಟಿ’ ನೌಕೆಯು ಜು.11ರಂದು 90 ಕಿ.ಮೀ ಎತ್ತರ ಸಾಗಿ ಬಾಹ್ಯಾಕಾಶ ತಲುಪಿ ವಾಪಸ್‌ ಆಗಿತ್ತು. ಇದಾದ ಒಂದು ವಾರದ ಅಂತರದಲ್ಲಿ ಬ್ಲೂ ಒರಿಜಿನ್‌ ನೌಕೆಯ ಮೂಲಕ ಬೆಜೋಸ್‌ ತಂಡ ಯಾನ ಕೈಗೊಂಡಿದೆ. ಬಾನ್ಸನ್‌ ಅವರ ನೌಕೆ ಭೂಮಿಯಿಂದ 53 ಮೈಲು (85 ಕಿ.ಮೀ.) ಎತ್ತರಕ್ಕೆ ಸಾಗಿತ್ತು.

Follow Us:
Download App:
  • android
  • ios