ಟೋಕಿಯೋ(ಡಿ.16): ಆತ್ಮಹತ್ಯೆ ಮನೋಸ್ಥಿತಿ ಹೊಂದಿದ್ದವರನ್ನು ಟ್ವೀಟರ್‌ನಲ್ಲಿ ಹುಡುಕಿ ಹುಡುಕಿ ಮನೆಗೆ ಕರೆಸಿ ಹತ್ಯೆ ಮಾಡುತ್ತಿದ್ದ ಟ್ವೀಟರ್‌ ಕಿಲ್ಲರ್‌ ಕುಖ್ಯಾತಿಯ ತಕಾಹಿರೋ ಶಿರೈಶಿ ಎಂಬಾತನಿಗೆ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.

ಟ್ವೀಟರ್‌ನಲ್ಲಿ ಹ್ಯಾಂಗ್‌ಮ್ಯಾನ್‌ ಎಂದು ಹೆಸರಿಟ್ಟುಕೊಂಡಿದ್ದ ಶಿರೈಸಿ, ಆತ್ಮಹತ್ಯೆ ಚಿಂತನೆಯ ಬಗ್ಗೆ ಟ್ವೀಟ್‌ ಮಾಡಿದವರನ್ನು ಹುಡುಕಿ ಅವರ ಸಂಪರ್ಕ ಮಾಡುತ್ತಿದ್ದ. ಬಳಿಕ ಸಾಯಲು ನೆರವು ನೀಡುವುದಾಗಿ ಹೇಳಿ ಅವರನ್ನು ಮನೆಗೆ ಆಹ್ವಾನಿಸುತ್ತಿದ್ದ. ಬಳಿಕ ಅವರ ಮೇಲೆ ಅತ್ಯಾಚಾರ ಮಾಡಿದ ಬಳಿಕ ಮನೆಯಲ್ಲೇ ಹತ್ಯೆ ಮಾಡಿ ಅವರ ಶವವನ್ನು ಮನೆಯ ಕೋಲ್ಡ್‌ ಸ್ಟೋರೇಜ್‌ನಲ್ಲಿ ಸಂಗ್ರಹಿಸಿ ಇಡುತ್ತಿದ್ದ. ಹೀಗೆ ಒಟ್ಟು 8 ಮಹಿಳೆಯರು ಮತ್ತು ಓರ್ವ ಮಹಿಳೆಯ ಸ್ನೇಹಿತನನ್ನು ಆತ ಹತ್ಯೆ ಮಾಡಿದ್ದ.

2017ರಲ್ಲಿ ಪ್ರಕರಣ ಬೆಳಕಿಗೆ ಬಂದು ಶಿರೈಶಿಯನ್ನು ಬಂಧಿಸಲಾಗಿತ್ತು. ಪ್ರಾಥಮಿಕ ವಿಚಾರಣೆ ವೇಳೆ ‘ಸತ್ತವರೇ ಆತ್ಮಹತ್ಯೆಗೆ ಇಚ್ಛಿಸಿದ್ದರು. ಅವರಿಗೆ ಶಿರೈಶಿ ಸಹಾಯ ಮಾಡಿದ್ದನಷ್ಟೇ’ ಎಂದು ಶಿರೈಸಿ ವಕೀಲರು ವಾದಿಸಿದ್ದರು. ಆದರೆ, ‘ಇಚ್ಛೆಗೆ ವಿರುದ್ಧವಾಗಿ ನಾನು ಅವರನ್ನು ಕೊಂದೆ’ ಎಂದು ನಂತರ ಈತ ತಪ್ಪೊಪ್ಪಿಕೊಂಡಿದ್ದ.

ಜಪಾನ್‌ನಲ್ಲಿ ಅಪರಾಧ ಪ್ರಮಾಣ ತುಂಬಾ ಕಮ್ಮಿ. ಅಂಥದ್ದರಲ್ಲಿ ಈ ಕೊಲೆಗಳು ದೇಶವನ್ನು ಬೆಚ್ಚಿಬೀಳಿಸಿದ್ದವು. ಆದರೆ ವಿಶ್ವದಲ್ಲೇ ಆತ್ಮಹತ್ಯೆ ಪ್ರಮಾಣವು ಜಪಾನ್‌ನಲ್ಲಿ ಅಧಿಕ.