ರೋಮ್‌[ಮಾ.09]: ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್‌ ಕೇವಲ 16 ದಿನಗಳ ಅಂತರದಲ್ಲಿ ಬರೋಬ್ಬರಿ 233 ಮಂದಿಯನ್ನು ಬಲಿ ಪಡೆದಿರುವ ಹಿನ್ನೆಲೆಯಲ್ಲಿ ಐರೋಪ್ಯ ರಾಷ್ಟ್ರ ಇಟಲಿ ತನ್ನ ದೇಶದ 1.6 ಕೋಟಿ ಜನರ ಸಂಚಾರಕ್ಕೇ ನಿರ್ಬಂಧ ವಿಧಿಸಿದೆ. ಅಲ್ಲದೆ ದೇಶಾದ್ಯಂತ ಚಿತ್ರಮಂದಿರ, ರಂಗಮಂದಿರ, ಮ್ಯೂಸಿಯಂ, ಶಾಲೆ, ನೈಟ್‌ ಕ್ಲಬ್‌, ಕ್ಯಾಸಿನೋಗಳನ್ನು ಬಂದ್‌ ಮಾಡಿಸಿದೆ.

ಇಡೀ ವಿಶ್ವದಲ್ಲಿ ಕೊರೋನಾ ಬಾಧೆಯಿಂದ ಅತಿ ಹೆಚ್ಚು ನಲುಗಿರುವ ದೇಶಗಳಲ್ಲಿ ಚೀನಾ ಬಳಿಕ ಇಟಲಿ ಇದೆ. ಫೆ.21ರಂದು ಇಟಲಿಯಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಯಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 5883ಕ್ಕೇರಿದೆ. ಶ್ರೀಮಂತ ಪ್ರದೇಶವಾದ ಉತ್ತರ ಇಟಲಿಯನ್ನು ಕೊರೋನಾ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಲೊಂಬಾರ್ಡಿ ಹಾಗೂ ಅದರ ಸುತ್ತಲಿನ 15 ಪ್ರಾಂತ್ಯಗಳಿಗೆ ಜನರು ಪ್ರವೇಶಿಸುವುದು ಅಥವಾ ಅಲ್ಲಿಂದ ನಿರ್ಗಮಿಸುವುದು ಹಾಗೂ ಆ ಪ್ರಾಂತ್ಯದೊಳಕ್ಕೆ ಸುತ್ತಾಡುವುದಕ್ಕೆ ಏ.3ರವರೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಉತ್ತರ ಇಟಲಿಯಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ.25ರಷ್ಟುಜನರು ವಾಸ ಮಾಡುತ್ತಿದ್ದಾರೆ.

ಶನಿವಾರ ಮಧ್ಯರಾತ್ರಿ ಬಳಿ ಪ್ರಧಾನಿ ಜ್ಯೂಸಿಪ್ಪಿ ಕಾಂಟಿ ಅವರು ಈ ಕುರಿತಾದ ಆದೇಶಕ್ಕೆ ಸಹಿ ಹಾಕಿದ್ದಾರೆ. ಅವರು ಇಂತಹದ್ದೊಂದು ಆದೇಶ ಹೊರಡಿಸಬಹುದು ಎಂಬ ಸುದ್ದಿ ತಿಳಿಯುತ್ತಿದ್ದಂತೆ ಶನಿವಾರ ರಾತ್ರಿಯಿಂದಲೇ ಜನರು ಗಾಬರಿಗೆ ಒಳಗಾಗಿ ಬಾರ್‌ ಹಾಗೂ ರೆಸ್ಟೋರಂಟ್‌ಗಳಿಂದ ಕಾಲ್ಕೀಳುತ್ತಿದ್ದ ದೃಶ್ಯಗಳು ಕಂಡುಬಂದಿದೆ.