ಇಟಲಿಯ ಕಲಾಬ್ರಿಯ ತೀರದಲ್ಲಿ ಭೀಕರ ಬೋಟ್ ದುರಂತ ಸಂಭವಿಸಿದೆ. ಹಲವು ದೇಶಗಳ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬೋಟ್ ಮುಳುಗಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 

ಇಟಲಿ(ಫೆ.27): ಇಟಲಿಯಲ್ಲಿ ನಡೆದ ಭೀಕರ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಕಲಾಬ್ರಿಯಾ ತೀರದಲ್ಲಿ ಪಾಕಿಸ್ತಾನ, ಮಂಗೋಲಿಯಾ, ಸೋಮಾಲಿಯಾ ಸೇರಿದಂತೆ 200 ವಲಸೇ ಕಾರ್ಮಿಕರು ಪ್ರಯಾಣಿಸುತ್ತಿದ್ದ ಬೋಟ್ ಸಮುದ್ರದ ಅಲೆಗಳ ಹೊಡೆತ ಸಿಲುಕಿ ಮುಳುಗಿ ದುರಂತ ಸಂಭವಿಸಿದೆ. ಸದ್ಯದ ಮಾಹಿತಿ ಪ್ರಕಾರ 12 ಮಕ್ಕಳು ಸೇರಿದಂತೆ 60 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. 80 ಮಂದಿಯನ್ನು ರಕ್ಷಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ಆಫ್ಘಾನಿಸ್ತಾನ, ಪಾಕಿಸ್ತಾನ, ಸೋಮಾಲಿಯಾ, ಇರಾನ್ ಸೇರಿದಂತೆ ಇತರ ಕೆಲ ದೇಶಗಳ ವಲಸೆ ಕಾರ್ಮಿಕರನ್ನು ತುಂಬಿ ಸಂಚರಿಸುತ್ತಿದ್ದ ಬೃಹತ್ ಬೋಟ್ ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟಿನ ಕೆಲ ಭಾಗಗಳು ನೀರಿನಲ್ಲಿ ತೇಲಾಡಲು ಆರಂಭಿಸಿದೆ. ಇದರಿಂದ ಬೋಟಿನೊಳಗೆ ನೀರು ತುಂಬಿದೆ. ಕಲಬ್ರಿಯಾ ತೀರ ಪ್ರದೇಶದ ಕ್ರೊಟೋನ್ ಬಳಿ ಬೋಟ್ ದುರಂತ ಸಂಭವಿಸಿದೆ. ವಲಸೆ ಕಾರ್ಮಿಕರು ಯೂರೋಪ್ ಪ್ರವೇಶಿಸಲು ಸಮುದ್ರವಾಗಿ ತೆರಳುತ್ತಿದ್ದ ಬೋಟ್ ದುರಂತಕ್ಕೀಡಾಗಿದೆ. 

ಮೆಡಿಟರೇನಿಯನ್ ಸಮುದ್ರದಲ್ಲಿ ದುರಂತ, 90 ಮಂದಿ ಸಾವು, ನಾಲ್ವರು ಗಂಭೀರ!

ಬೋಟ್ ದುರಂತದ ಮಾಹಿತಿ ಪಡೆದ ಇಟಲಿ ರಕ್ಷಣಾ ತಂಡ ನೆರವಿಗೆ ಧಾವಿಸಿದೆ. ಬೋಟ್ ಮುಳುಗುತ್ತಿದ್ದಂತೆ 80ಕ್ಕೂ ಹೆಚ್ಚು ಮಂದಿ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಹಲವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಪಡೆಗಳು 80 ಮಂದಿಯನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ವಲಸೆ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಹಲವರು ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಮಹಿಳೆಯರು ಮಕ್ಕಳು, ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.ಬೋಟ್‌ನಲ್ಲಿದ್ದ 30 ಮಂದಿ ಕುರಿತು ಯಾವುದೇ ಸುಳಿವಿಲ್ಲ. ಈಗಲೂ ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದೆ. ಮೃತಪಟ್ಟವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಪಾಕಿಸ್ತಾನ ಮೂಲದವರು ಎಂದು ಗುರುತಿಸಿಲಾಗಿದೆ. ಘಟನೆಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರಿಫ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆ ತೀವ್ರ ನೋವು ತಂದಿದೆ ಎಂದಿದ್ದಾರೆ. ಪಾಕಿಸ್ತಾನ ಅಧಿಕಾರಿಗಳಿಗೆ ಮೃತಪಟ್ಟ ಕುಟುಂಬದ ಜೊತೆ ಸಂಪರ್ಕಿಸಲು ಸೂಚಿಸಲಾಗಿದೆ. ಕುಟುಂಬಕ್ಕೆ, ದುರಂತದಲ್ಲಿ ಸಿಲುಕಿದ ಪಾಕಿಸ್ತಾನ ಪ್ರಜೆಗಳಿಗೆ ಎಲ್ಲಾ ನೆರವು ನೀಡಲು ಸೂಚಿಸಲಾಗಿದೆ ಎಂದು ಷರಿಫ್ ಹೇಳಿದ್ದಾರೆ.