ನವದೆಹಲಿ(ಮೇ.17): ಪ್ಯಾಲೆಸ್ತೀನ್‌ ಮೇಲಿನ ಆಕ್ರಮಣವನ್ನು ಇಸ್ರೇಲ್‌ ಇನ್ನಷ್ಟುತೀವ್ರಗೊಳಿಸಿದೆ. ಇಸ್ರೇಲ್‌ನ ವಾಯು ದಾಳಿಗೆ ಗಾಜಾ ನಗರದಲ್ಲಿನ ಮೂರು ಕಟ್ಟಡಗಳು ಭಾನುವಾರ ಧರಾಶಾಯಿಯಾಗಿದ್ದು, 33 ಮಂದಿ ಸಾವನ್ನಪ್ಪಿದ್ದಾರೆ. ಕಳೆದೊಂದು ವಾರದಲ್ಲಿ ಇಸ್ರೇಲ್‌ ನಡೆಸಿದ ಅತೀ ಭೀಕರ ವಾಯು ದಾಳಿ ಇದಾಗಿದೆ.

ಇಷ್ಟುದಿನ ಹಮಾಸ್‌ ಉಗ್ರರನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ದಾಳಿ ನಡೆಸುತ್ತಿತ್ತು. ಶನಿವಾರ ಹಲವು ಪತ್ರಿಕಾ ಸಂಸ್ಥೆಗಳಿರುವ ದೊಡ್ಡ ಕಟ್ಟಡದ ನಿವಾಸಿಗಳಿಗೆ ಮುನ್ನೆಚ್ಚರಿಕೆ ಕೊಟ್ಟು ಬಳಿಕ ಧ್ವಂಸಗೊಳಿಸಿತು. ಆದರೆ, ಇದರ ಹೊರತಾಗಿಯೂ ಹಮಾಸ್‌ ಉಗ್ರರು ರಾಕೆಟ್‌ ದಾಳಿ ಮುಂದುರಿಸಿರುವ ಹಿನ್ನೆಲೆಯಲ್ಲಿ ಪ್ಯಾಲೆಸ್ತೀನ್‌ ವಿರುದ್ಧ ಇಸ್ರೇಲ್‌ ಇನ್ನಷ್ಟುಕಠಿಣ ನಿಲುವು ತಳೆದಿದೆ. ಇದುವರೆಗಿನ ದಾಳಿಯಲ್ಲಿ ಗಾಜಾದಲ್ಲಿ 181 ಮಂದಿ ಪ್ಯಾಲೆಸ್ತೀನಿಯರ ಮೃತಪಟ್ಟಿದ್ದರೆ, ಇಸ್ರೇಲ್‌ನಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಇಸ್ರೇಲ್ ಮೇಲೆ ರಾಕೆಟ್ ದಾಳಿ: ಕೇರಳ ಮೂಲದ ಮಹಿಳೆ ಸಾವು!

ಈ ಮಧ್ಯೆ ಹಮಾಸ್‌ ಅಂತಾರಾಷ್ಟ್ರೀಯ ಮಧ್ಯವರ್ತಿಗಳನ್ನು ಬಳಸಿಕೊಂಡು ಕದನ ವಿರಾಮಕ್ಕೆ ಯತ್ನಿಸುತ್ತಿದೆ. ಆದರೆ, ಇದಕ್ಕೆ ಇಸ್ರೇಲ್‌ ನಿರಾಕರಿಸಿದ್ದು, ಎಲ್ಲಿಯವರೆಗೂ ಅಗತ್ಯವಿದೆಯೋ ಅಲ್ಲಿಯವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಘೋಷಿಸಿದ್ದಾರೆ.

ತುರ್ತು ಸಭೆ:

ಪ್ಯಾಲೆಸ್ತೀನ್‌ ಮೇಲೆ ಇಸ್ರೇಲ್‌ ತನ್ನ ಆಕ್ರಮಣವನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ 57 ದೇಶಗಳ ಇಸ್ಲಾಮಿಕ್‌ ಸಹಕಾರ ಸಂಘಟನೆಯ ರಾಷ್ಟ್ರಗಳ ಮುಖಂಡರು ಭಾನುವಾರದಂದು ತುರ್ತು ಸಭೆ ನಡೆಸಿ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ.